ನವದೆಹಲಿ:ಕ್ರಿಕೆಟ್ ಹಬ್ಬ ಐಪಿಎಲ್ ಕೋವಿಡ್ ಕಾರಣಕ್ಕಾಗಿ ಕಳೆಗುಂದಿತ್ತು. ಇದೀಗ ದೇಶದಲ್ಲಿ ಕೋವಿಡ್ ತಹಬದಿಗೆ ಬಂದಿರುವ ಕಾರಣ ಹಳೆಯ ಸ್ವರೂಪದಲ್ಲೇ ಅಭಿಮಾನಿಗಳನ್ನು ರಂಜಿಸಲು ಸಿದ್ಧವಾಗಿದೆ. ಜನರು ಇನ್ನು ತಮ್ಮ ತಂಡಗಳನ್ನು ತವರು ಮೈದಾನದಲ್ಲೇ ಚಿಯರ್ ಮಾಡಬಹುದು ಎಂದು ಬಿಸಿಸಿಐ ತಿಳಿಸಿದೆ.
ಕೋವಿಡ್ ಕಾರಣಕ್ಕಾಗಿ 2020 ರ ಆವೃತ್ತಿಯನ್ನು ಯುಎಇಯಲ್ಲಿ ಆಯೋಜಿಸಲಾಗಿತ್ತು. ಅಲ್ಲಿ ಮೂರು ಮೈದಾನಗಳಾದ ದುಬೈ, ಶಾರ್ಜಾ ಮತ್ತು ಅಬುಧಾಬಿಯಲ್ಲಿ ಕಟ್ಟುನಿಟ್ಟಿನ ಮಧ್ಯೆ ನಡೆಸಲಾಗಿತ್ತು. ಬಳಿಕ 2021 ರ ಆವೃತ್ತಿಯು ದೆಹಲಿ, ಅಹಮದಾಬಾದ್, ಮುಂಬೈ ಮತ್ತು ಚೆನ್ನೈನಲ್ಲಿ ಮಾತ್ರ ನಡೆದಿತ್ತು. ಇದರಿಂದ ಆಯಾ ತಂಡಗಳು ತವರಿನ ಮೈದಾನದಲ್ಲಿ ಆಡುವುದನ್ನು ತಪ್ಪಿಸಿಕೊಂಡಿದ್ದವು.
"ಹಳೆಯ ಸ್ವರೂಪದಲ್ಲಿ ಮುಂದಿನ ವರ್ಷದ ಐಪಿಎಲ್ ನಡೆಯಲಿದೆ. ತವರಿನಲ್ಲಿ ಒಂದು ಪಂದ್ಯ ಮತ್ತು ಎದುರಾಳಿಯ ತವರಿನಲ್ಲಿ ಒಂದು ಪಂದ್ಯವನ್ನು ಆಡುವುದನ್ನು ಮುಂದುವರಿಸಲಾಗುವುದು" ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಾಹಿತಿ ನೀಡಿದ್ದಾರೆ.
ಐಪಿಎಲ್ನಲ್ಲಿ ಆಡುವ ಎಲ್ಲಾ ಹತ್ತು ತಂಡಗಳು ತವರು ಮೈದಾನ ಮತ್ತು ಎದುರಾಳಿ ತಂಡದ ತವರಿನಲ್ಲಿ ಆಡುವ ಬಗ್ಗೆ ಆಯಾ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಮಾಹಿತಿ ನೀಡಲಾಗಿದೆ. ಹಳೆಯ ಸ್ವರೂಪದಲ್ಲೇ ಎಲ್ಲ ಪಂದ್ಯಗಳು ನಡೆಯುತ್ತವೆ ಎಂಬುದನ್ನು ಸೌರವ್ ಗಂಗೂಲಿ ತಿಳಿಸಿದ್ದಾರೆ.
ಮಹಿಳಾ ಐಪಿಎಲ್ ಶುರು ನಿರೀಕ್ಷೆ:ಮುಂದಿನ ವರ್ಷದ ಆರಂಭದಲ್ಲಿ ಬಹು ನಿರೀಕ್ಷಿತ ಮಹಿಳಾ ಐಪಿಎಲ್‌ನ ಉದ್ಘಾಟನಾ ಆವೃತ್ತಿಯನ್ನು ಆಯೋಜಿಸಲು ಕೂಡ ಬಿಸಿಸಿಐ ಯೋಜಿಸುತ್ತಿದೆ. ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಮಹಿಳಾ ಟಿ20 ವಿಶ್ವಕಪ್ ಬಳಿಕ ಮಾರ್ಚ್‌ನಲ್ಲಿ ಟೂರ್ನಿ ನಡೆಸುವ ಸಾಧ್ಯತೆ ಇದೆ ಎಂದು ಈ ಹಿಂದೆ ವರದಿಯಾಗಿತ್ತು.
ಬಿಸಿಸಿಐ ಕೂಡ ಮಹಿಳಾ ಐಪಿಎಲ್ ಆಡಿಸಲು ಕಾರ್ಯಸೂಚಿ ಸಿದ್ಧವಾಗುತ್ತಿದೆ. ಮುಂದಿನ ವರ್ಷದ ಆರಂಭದಲ್ಲಿ ಮೊದಲ ಋತುವನ್ನು ಪ್ರಾರಂಭಿಸುವ ನಿರೀಕ್ಷೆ ಹೊಂದಿದ್ದೇವೆ ಎಂದು ಸೌರವ್ ಗಂಗೂಲಿ ಹೇಳಿದ್ದರು. ಮಹಿಳಾ ಐಪಿಎಲ್ ಜೊತೆಗೆ 15 ವರ್ಷದೊಳಗಿನ ಬಾಲಕಿಯರ ಏಕದಿನ ಪಂದ್ಯಾವಳಿ ಕೂಡ ನಡೆಯಲಿದೆ. ಈ ಟೂರ್ನಿ ಡಿಸೆಂಬರ್ 26 ರಿಂದ ಜನವರಿ 12 ರವರೆಗೆ ಬೆಂಗಳೂರು, ರಾಂಚಿ, ರಾಜ್‌ಕೋಟ್, ಇಂದೋರ್, ರಾಯ್‌ಪುರ, ಪುಣೆಯಲ್ಲಿ ಪಂದ್ಯಗಳು ನಡೆಯಲಿವೆ.
ಓದಿ:ಕಬಡ್ಡಿ ಆಟಗಾರರಿಗೆ ಶೌಚಾಲಯದಲ್ಲಿ ಊಟ: ಸೂಕ್ತ ಕ್ರಮಕ್ಕೆ ಆಗ್ರಹಿಸಿದ ಶಿಖರ್ ಧವನ್