ಮೆಲ್ಬೋರ್ನ್:ಮೇ 30 ರಂದು ಐಪಿಎಲ್ ಕೊನೆಗೊಳ್ಳುತ್ತಿದ್ದಂತೆ ಆಸ್ಟ್ರೇಲಿಯಾದ ಆಟಗಾರರು ತವರಿಗೆ ಮರಳಲು ಚಾರ್ಟಡ್ ಫ್ಲೈಟ್ ವ್ಯವಸ್ಥೆ ಮಾಡುವ ಯಾವುದೇ ತಕ್ಷಣದ ಯೋಜನೆಯಿಲ್ಲ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಮಧ್ಯಂತರ ಸಿಇಒ ನಿಕ್ ಹಾಕ್ಲೇ ಸೋಮವಾರ ಹೇಳಿದ್ದಾರೆ.
ಭಾರತದಲ್ಲಿ ಕೊರೊನಾ ತಾಂಡವವಾಡುತ್ತಿದೆ. ದಿನವೊಂದಕ್ಕೆ 3 ಲಕ್ಷಕ್ಕೂ ಕೋವಿಡ್ 19 ಪ್ರಕರಣಗಳು ದಾಖಲಾಗುತ್ತಿವೆ. ಈ ಕಾರಣದಿಂದ ಆಸ್ಟ್ರೇಲಿಯಾ ಪ್ರಧಾನಿ ಕಳೆದ ವಾರವಷ್ಟೇ ಭಾರತದಿಂದ ಮೇ 15ರವರೆಗೆ ಪ್ಯಾಸೇಂಜರ್ ವಿಮಾನವನ್ನು ನಿಷೇಧಿಸಿರುವುದಾಗಿ ಘೋಷಿಸಿದ್ದಾರೆ. ಇದೇ ಸಂದರ್ಭದಲ್ಲಿ ಐಪಿಎಲ್ನಲ್ಲಿ ಆಡುತ್ತಿರುವ ಆಸ್ಟ್ರೇಲಿಯಾದ ಕ್ರಿಕೆಟಿಗರಿಗೆ ವಿಶೇಷ ವಿಮಾನದ ವ್ಯವಸ್ಥೆ ಕೂಡ ಮಾಡುವುದಿಲ್ಲ ಎಂದು ಹೇಳಿದ್ದರು.
"ಸದ್ಯಕ್ಕಂತೂ ಯಾವುದೇ ಚಾರ್ಟರ್ ವಿಮಾನ ವ್ಯವಸ್ಥೆಯ ಯೋಜನೆ ಮಾಡಿಲ್ಲ. ನಾವು ಎಸಿಎ (ಆಸ್ಟ್ರೇಲಿಯನ್ ಕ್ರಿಕೆಟಿಗರ ಸಂಘ), ಭಾರತದಲ್ಲಿರುವ ಆಟಗಾರರೊಂದಿಗೆ ಮತ್ತು ಬಿಸಿಸಿಐ (ಭಾರತದಲ್ಲಿ ಕ್ರಿಕೆಟ್ ನಿಯಂತ್ರಣ ಮಂಡಳಿ) ನೊಂದಿಗೆ ನಿಕಟ ಸಂಪರ್ಕದಲ್ಲಿದ್ದೇವೆ ಮತ್ತು ಎಲ್ಲರೊಂದಿಗೂ ಉತ್ತಮ ಸಂವಹನ ನಡೆಯುತ್ತಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಸಿಇಒ ಹಾಕ್ಲೆ ಎಸ್ಇಎನ್ ರೇಡಿಯೊಗೆ ತಿಳಿಸಿದರು.