ಶಾರ್ಜಾ: 14ನೇ ಆವೃತ್ತಿಯಲ್ಲಿ ಅಮೋಘ ಪ್ರದರ್ಶನ ತೋರುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಟಾಸ್ ಗೆದ್ದ ಕೆಕೆಆರ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಇನ್ನು ಪ್ಲೇ ಆಫ್ ರೇಸ್ನಲ್ಲಿ ಮುಂಬೈ, ಪಂಜಾಬ್ ಮತ್ತು ರಾಜಸ್ಥಾನ್ ಜೊತೆ ಪೈಪೋಟಿಯಲ್ಲಿ ಕೆಕೆಆರ್ ಇಂದಿನ ಪಂದ್ಯದಲ್ಲಿ ಶತಾಯಗತಾಯವಾಗಿ ಗೆಲ್ಲಲೇಬೇಕಾಗಿದೆ. ಇಂದಿನ ಪಂದ್ಯದಲ್ಲಿ ಗಾಯಾಳು ಆ್ಯಂಡ್ರೆ ರಸೆಲ್ ಬದಲಿಗೆ ಟಿಮ್ ಸೌಥಿ ಕಣಕ್ಕಿಳಿಯುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ನಿರ್ಣಾಯಕ ಹಂತದಲ್ಲಿ ರನ್ ಬಿಟ್ಟುಕೊಟ್ಟ ಸೋಲಿಗೆ ಕಾರಣವಾಗಿದ್ದ ಪ್ರಸಿಧ್ ಕೃಷ್ಣ ಅವರನ್ನು ಹೊರಗಿಟ್ಟಿರುವ ಕೆಕೆಆರ್ ಸಂದೀಪ್ ವಾರಿಯರ್ಗೆ ಅವಕಾಶ ನೀಡಿದೆ.
ಇತ್ತ ಚೆನ್ನೈ ಸೂಪರ್ ಕಿಂಗ್ಸ್ ತಂಡದೊಂದಿಗೆ ಅಗ್ರಸ್ಥಾನಕ್ಕೆ ಪೈಪೋಟಿ ನಡೆಸುತ್ತಿರುವ ಡೆಲ್ಲಿ ಆಡಿರುವ 10 ಪಂದ್ಯಗಳಲ್ಲಿ 8ರಲ್ಲಿ ಜಯ ಸಾಧಿಸಿ ಕೇವಲ 2ರಲ್ಲಿ ಸೋಲು ಕಂಡಿದೆ. ಇಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧವೂ ಗೆಲುವು ಸಾಧಿಸಿ ಅಗ್ರಸ್ಥಾನವನ್ನು ಮರಳಿ ಪಡೆಯುವ ಯೋಜನೆಯಲ್ಲಿದೆ. ಇಂದಿನ ಪಂದ್ಯದಲ್ಲಿ ಪೃಥ್ವಿ ಶಾ ಬದಲು ಸ್ಟೀವ್ ಸ್ಮಿತ್ ಕಣಕ್ಕಿಳಿಯುತ್ತಿದ್ದಾರೆ. ಶಾ ಗಾಯಗೊಂಡಿದ್ದಾರೆಂದು ಪಂತ್ ಮಾಹಿತಿ ನೀಡಿದ್ದಾರೆ.