ದಂಬುಲ್ಲಾ(ಶ್ರೀಲಂಕಾ): ಭಾರತ ಮಹಿಳಾ ತಂಡದ ದಿಗ್ಗಜೆ ಮಿಥಾಲಿ ರಾಜ್ ಅವರ ನಿವೃತ್ತಿ ಘೋಷಣೆಯ ಬಳಿಕ ನಡೆದ ಶ್ರೀಲಂಕಾ ವಿರುದ್ಧದ ಸರಣಿಯ ಮೊದಲ ಟಿ20 ಪಂದ್ಯದಲ್ಲಿ ಭಾರತ ಮಹಿಳಾ ತಂಡ 34 ರನ್ಗಳ ಭರ್ಜರಿ ಗೆಲುವು ಸಾಧಿಸಿತು.
3 ಪಂದ್ಯಗಳ ಟಿ20 ಸರಣಿಗೆ ಶ್ರೀಲಂಕಾ ಪ್ರವಾಸ ಕೈಗೊಂಡಿರುವ ಭಾರತೀಯ ಆಟಗಾರ್ತಿಯರು ಮೊದಲ ಪಂದ್ಯವನ್ನು ಜಯಿಸಿ 1-0 ಅಂತರದಲ್ಲಿ ಶುಭಾರಂಭ ಮಾಡಿದ್ದಾರೆ.
ಮುಳುವಾದ ನಿಧಾನಗತಿ ಬ್ಯಾಟಿಂಗ್:ರಂಗಿರಿ ದಂಬುಲ್ಲಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ಮಹಿಳೆಯರು ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 138 ರನ್ ಗಳಿಸಿದ್ದರು. ಇದಕ್ಕುತ್ತರವಾಗಿ ಶ್ರೀಲಂಕಾ ಮಹಿಳೆಯರು ನಿಧಾನಗತಿಯ ಬ್ಯಾಟಿಂಗ್ನಿಂದಾಗಿ 5 ವಿಕೆಟ್ ನಷ್ಟಕ್ಕೆ 104 ರನ್ ಗಳಿಸಲಷ್ಟೇ ಸಾಧ್ಯವಾಗಿ ಸೋಲೊಪ್ಪಿಕೊಂಡಿತು.
ಶ್ರೀಲಂಕಾದ ಕವಿಶಾ ದಿಲ್ಹಾರಿ 47 ರನ್ ಹೋರಾಟದ ಹೊರತಾಗಿಯೂ ತಂಡ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಉಳಿದ ಆಟಗಾರ್ತಿಯರ ನಿಧಾನಗತಿ ಬ್ಯಾಟಿಂಗ್ ತಂಡಕ್ಕೆ ಮುಳುವಾಯಿತು. ನಾಯಕಿ ಚಮಾರಿ ಅಟ್ಟಪಟ್ಟು 19 ಎಸೆತಗಳಲ್ಲಿ 16 ರನ್ ಗಳಿಸಿದರೆ, ಹರ್ಷಿತಾ ಮದವಿ 17 ಎಸೆತ ಎದುರಿಸಿದರೂ 10 ರನ್ಗೆ ಔಟಾದರು.