ಮೊಹಾಲಿ:ಕಾಂಗರೂ ನಾಡಿನಲ್ಲಿ ನಡೆಯುವ ಟಿ20 ವಿಶ್ವಕಪ್ಗೆ ಸಿದ್ಧತೆಯ ಭಾಗವಾಗಿ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿ ನಾಳೆಯಿಂದ ಶುರುವಾಗಲಿದೆ. ತವರಿನಲ್ಲಿ ನಡೆಯುವ ಸರಣಿಯನ್ನು ಗೆದ್ದು ಟೀಂ ಇಂಡಿಯಾ ಆತ್ಮವಿಶ್ವಾಸ ವೃದ್ಧಿಸಿಕೊಳ್ಳುವ ಇರಾದೆಯಲ್ಲಿದೆ. ಅಲ್ಲದೇ, ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ಯೋಜನೆಯನ್ನು ರೂಪಿಸಲು ಈ ಸರಣಿ ನೆರವಾಗಲಿದೆ.
ಭಾರತ ತಂಡ ವಿಶೇಷವಾಗಿ ಮಧ್ಯಮ ಕ್ರಮಾಂಕದ ಸಂಯೋಜನೆಯನ್ನು ಬಲಪಡಿಸಬೇಕಿದೆ. ರವೀಂದ್ರ ಜಡೇಜಾ ಅನುಪಸ್ಥಿತಿಯಲ್ಲಿ 6ನೇ ಬೌಲರ್ ಅನ್ನು ವಿಶ್ವಕಪ್ಗೂ ಮೊದಲು ಸಜ್ಜು ಮಾಡಬೇಕಿದೆ. ಏಷ್ಯಾಕಪ್‌ನಲ್ಲಿ ಆಟಗಾರರು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರೂ, ಟೂರ್ನಿಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿತ್ತು.
ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಆವೇಶ್ಖಾನ್ ಇದ್ದರೂ ಬೌಲಿಂಗ್ ವಿಭಾಗ ಕಳಾಹೀನವಾಗಿತ್ತು. ಹರ್ಷಲ್ ಪಟೇಲ್ ಮತ್ತು ಜಸ್ಪ್ರೀತ್ ಬೂಮ್ರಾ ತಂಡಕ್ಕೆ ಮರಳಿದ್ದು, ಸರಣಿಯಲ್ಲಿ ಅವರ ಪ್ರದರ್ಶನದ ಮೇಲೆ ಎಲ್ಲರ ಕಣ್ಣಿದೆ.
ಇನ್ನು ನಿನ್ನೆಯಷ್ಟೇ ಮಾಧ್ಯಮಗಳ ಜೊತೆ ಮಾತನಾಡಿದ ನಾಯಕ ರೋಹಿತ್ ಶರ್ಮಾ, ಆರಂಭಿಕನಾಗಿ ಕೆಎಲ್ ರಾಹುಲ್ ತಮ್ಮೊಂದಿಗೆ ಕಣಕ್ಕಿಳಿಯಲಿದ್ದಾರೆ. ವಿರಾಟ್ ಕೊಹ್ಲಿ ಕೂಡ ಬ್ಯಾಕಪ್ ಓಪನರ್ ಆಗಿ ಇರಲಿದ್ದಾರೆ ಎಂದು ಹೇಳಿದ್ದರು. ಏಷ್ಯಾಕಪ್ ವೇಳೆ ವಿರಾಟ್ ಅಫ್ಘಾನಿಸ್ತಾನ ವಿರುದ್ಧ ಆರಂಭಿಕನಾಗಿ ಇಳಿದು ಮೂರು ವರ್ಷಗಳ ಬಳಿಕ ಶತಕ ಸಾಧನೆ ಮಾಡಿದ್ದರು.
ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್, ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ತಂಡದ ಆಧಾರವಾದರೆ, 6, 7ನೇ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್ ಮತ್ತು ರಿಷಭ್ ಪಂತ್ ಪಾತ್ರ ಅತಿ ಮುಖ್ಯವಾಗಲಿದೆ. ಕಾರ್ತಿಕ್ ಅವರನ್ನು ಫಿನಿಶರ್ ಆಗಿ ತಂಡ ನೆಚ್ಚಿಕೊಂಡಿದೆ.
ಜಡೇಜಾ ಸ್ಥಾನ ತುಂಬುವರಾ ಅಕ್ಸರ್:ರವೀಂದ್ರ ಜಡೇಜಾ ಗಾಯಗೊಂಡು ವಿಶ್ವಕಪ್ನಿಂದ ಹೊರಬಿದ್ದಿರುವ ಕಾರಣ, ಅಕ್ಸರ್ ಪಟೇಲ್ರನ್ನು ಆಡಿಸಿದಲ್ಲಿ ಬ್ಯಾಟಿಂಗ್ ಜೊತೆಗೆ 6ನೇ ಬೌಲರ್ ಆಗಿಯೂ ಬಳಸಿಕೊಳ್ಳಬಹುದು. ಭುವನೇಶ್ವರ್ ಕುಮಾರ್, ಬೂಮ್ರಾ, ಹರ್ಷಲ್ ಪಟೇಲ್ ಜೊತೆಗೆ ಹಾರ್ದಿಕ್ ವೇಗದ ಜವಾಬ್ದಾರಿ ನಿಭಾಯಿಸಿದರೆ, ಯಜುವೇಂದ್ರ ಚಹಲ್ ಜೊತೆಗೆ ಅಕ್ಸರ್ ಪಟೇಲ್ ಸ್ಪಿನ್ ಅಸ್ತ್ರವಾಗಲಿದ್ದಾರೆ.