ಹೈದರಾಬಾದ್:ಸೆಮಿಫೈನಲ್ನಲ್ಲಿ ಸೋಲುಂಡ ಬಳಿಕ ದಕ್ಷಿಣ ಆಫ್ರಿಕಾ ತಂಡ ಅಭಿಮಾನಿಗಳಿಂದ ಟೀಕೆಗಳನ್ನು ಎದುರಿಸುತ್ತಿದ್ದರೂ ಸಹ ನಾಯಕ ಬವುಮಾ ಅವರು ತಮ್ಮ ನಾಯಕತ್ವದ ಪಾತ್ರವನ್ನು ತ್ಯಜಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಿರ್ಣಾಯಕ ಸೆಮಿ-ಫೈನಲ್ ಘರ್ಷಣೆಗೆ ಮುನ್ನ ಬವುಮಾ ಅವರ ಫಿಟ್ನೆಸ್ ಬಗ್ಗೆ ಕಳವಳ ವ್ಯಕ್ತಪಡಿಸಲಾಗಿತ್ತು. ಏಕೆಂದರೆ ಅವರು ಮಂಡಿರಜ್ಜು ಗಾಯದಿಂದಾಗಿ ಸಂಪೂರ್ಣವಾಗಿ ಫಿಟ್ ಆಗಿಲ್ಲ ಎಂಬುದನ್ನು ಒಪ್ಪಿಕೊಂಡಿದ್ದರು. ಇದರ ಹೊರತಾಗಿಯೂ ಬವುಮಾ ಅವರು ಮೈದಾನವನ್ನು ಪ್ರವೇಶಿಸಿದ್ದರು. ಆದರೆ ನಿರ್ಣಾಯಕ ಪಂದ್ಯದಲ್ಲಿ ಡಕ್‌ಗೆ ಬಲಿಯಾದರು. ಒಟ್ಟಿನಲ್ಲಿ ಪಂದ್ಯಾವಳಿಯಲ್ಲಿನ ಅವರ ಒಟ್ಟಾರೆ ಪ್ರದರ್ಶನವು ಕಳಪೆಯಿಂದ ಕೂಡಿತ್ತು.
ಬವುಮಾ ಅವರು ಒಟ್ಟು ಎಂಟು ಪಂದ್ಯಗಳಲ್ಲಿ 18.13 ರ ಸರಾಸರಿಯಲ್ಲಿ ಕೇವಲ 145 ರನ್ಗಳನ್ನು ಗಳಿಸಿದ್ದಾರೆ. ಈ ಹಿನ್ನೆಲೆ ಅವರ ವಿರುದ್ಧ ಟೀಕೆಗಳು ಇನ್ನಷ್ಟು ತೀವ್ರಗೊಂಡವು. ವಿಶೇಷವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅವರ ನಾಯಕತ್ವದ ಬಗ್ಗೆ ಒತ್ತಡ ಮತ್ತು ಊಹಾಪೋಹಗಳು ಹೆಚ್ಚುತ್ತಿದ್ದವು. ಇದಕ್ಕೆ ಪ್ರತಿಕ್ರಿಯಿಸಿದ ಬವುಮಾ ತಮ್ಮ ಸ್ಥಾನವನ್ನು ಸಮರ್ಥಿಸಿಕೊಂಡಿದ್ದಾರೆ.
"ನಾನು ಪ್ರತಿಕೂಲತೆಯಿಂದ ದೂರ ಸರಿಯುವವನಲ್ಲ. ಟ್ವಿಟರ್ ಅಥವಾ ಫೇಸ್‌ಬುಕ್‌ನಲ್ಲಿ ಟೀಕಾ ಪ್ರಹಾರ ಮಾಡುವವರ ಜನರ ಕೂಗಿಗೆ ಉತ್ತರಿಸಲು ಹೋಗುವವನಲ್ಲ. ನಾನು ತೆಗೆದುಕೊಳ್ಳುವ ನಿರ್ಧಾರಗಳು ಯಾವಾಗಲೂ ತಂಡದ ಒಳಿತಿಗಾಗಿ ಇರುತ್ತವೆ" ಎಂದು ಬವುಮಾ ಹೇಳಿದ್ದಾರೆ.
"ನಾನು ಮೊದಲಿನಿಂದಲೂ ಹೇಳುತ್ತಿದ್ದೇನೆ.. ಬವುಮಾ ನೀವು ನಾಯಕನಾಗಿ ಕೆಲಸ ಮಾಡುವ ವ್ಯಕ್ತಿ ಅಲ್ಲ ಎಂದು ಹೇಳಿದರೆ ನಾನು ಸಂತೋಷದಿಂದ ನನ್ನ ನಾಯಕತ್ವವನ್ನು ತ್ಯಜಿಸಿ ಹೊರಡುತ್ತೇನೆ. ನಾವು ಒಬ್ಬರನ್ನೊಬ್ಬರು ಚೆನ್ನಾಗಿ ತಿಳಿದಿದ್ದೇವೆ. ಯಾವುದಕ್ಕಾಗಿ ಆಡುತ್ತೇವೆ ಎಂಬುದು ನಮಗೆ ತಿಳಿದಿದೆ. ನಾನು ಟ್ವಿಟರ್ ಅಥವಾ ಫೇಸ್‌ಬುಕ್‌ನಲ್ಲಿರುವ ವ್ಯಕ್ತಿ ಅಲ್ಲ”ಎಂದಿದ್ದಾರೆ.
ಬವುಮಾ ಅವರು ದಕ್ಷಿಣ ಆಫ್ರಿಕಾದ ಕ್ರಿಕೆಟ್ ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಬಾಹ್ಯ ಟೀಕೆಗಳ ವಿರುದ್ಧ ಅವರು ತಮ್ಮ ಸ್ಥಾನವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. 2023ರ ವಿಶ್ವಕಪ್‌ನಲ್ಲಿ ಅವರ ನಾಯಕತ್ವದಲ್ಲಿ ತಂಡದ ಸಾಧನೆಗಳನ್ನು ಒತ್ತಿಹೇಳುತ್ತಿದ್ದಾರೆ. ಕೋಲ್ಕತ್ತಾದ ಈಡನ್ ಗಾರ್ಡನ್ ಸ್ಟೇಡಿಯಂನಲ್ಲಿ ನಡೆದ 2ನೇ ಸೆಮಿಫೈನಲ್ನಲ್ಲಿ ಆಸ್ಟ್ರೇಲಿಯಾ ತಂಡದೆದುರು ದಕ್ಷಿಣ ಆಫ್ರಿಕಾ ಛಲದಿಂದ ಹೋರಾಡಿ ಅಂತಿಮವಾಗಿ ಸೋಲು ಅನುಭವಿಸಿತು. ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ನೀಡಿದ 213ರನ್ಗಳ ಗುರಿ ಬೆನ್ನಟ್ಟಿದ ಆಸೀಸ್ ಟ್ರಾವಿಸ್ ಹೆಡ್ (69), ಸ್ಟಿವನ್ ಸ್ಮಿತ್ (30), ಜೋಶ್ ಇಂಗ್ಲಿಸ್ (28) ಬ್ಯಾಟಿಂಗ್ ನೆರವಿನಿಂದ 47.2 ಓವರ್ಗಳಲ್ಲಿ ಗುರಿಯನ್ನು ತಲುಪುವ ಮೂಲಕ 3 ವಿಕೆಟ್ಗಳ ಗೆಲುವು ದಾಖಲಿಸಿತ್ತು. ಈ ಮೂಲಕ ವಿಶ್ವಕಪ್ ಸಮರದಲ್ಲಿ ಆಸೀಸ್ 8ನೇ ಬಾರಿಗೆ ಫೈನಲ್ ಪ್ರವೇಶ ಮಾಡಿ ಭಾರತದ ವಿರುದ್ಧ ಕಪ್ ಗೆದ್ದುಕೊಂಡಿತ್ತು.
ಓದಿ:ಆಸ್ಟ್ರೇಲಿಯಾ ವಿರುದ್ಧದ ಟಿ-20 ಸರಣಿಗೆ ಸೂರ್ಯ ನಾಯಕ; ಸ್ಥಾನ ಕಳೆದುಕೊಂಡ ಸಂಜು ಸ್ಯಾಮ್ಸನ್