ಹ್ಯಾಮಿಲ್ಟನ್: ಸಂಪೂರ್ಣ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಭಾರತ ಮಹಿಳಾ ಕ್ರಿಕೆಟ್ ತಂಡ ಏಕದಿನ ವಿಶ್ವಕಪ್ನ ತನ್ನ 2ನೇ ಪಂದ್ಯದಲ್ಲಿ ಆತಿಥೇಯ ನ್ಯೂಜಿಲ್ಯಾಂಡ್ ವಿರುದ್ಧ ವಿರುದ್ಧ 62 ರನ್ಗಳ ಹೀನಾಯ ಸೋಲು ಕಂಡಿತು.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಕಿವೀಸ್ ತಂಡದ ಅನುಭವಿ ಬ್ಯಾಟರ್ ಆ್ಯಮಿ ಸ್ಯಾಟರ್ಥ್ವೇಟ್ 75(84 ಎಸೆತ) ಅಮೆಲಿಯಾ ಕೆರ್ 50(64 ಎಸೆತ) ಹಾಗೂ ಕೇಟಿ ಮಾರ್ಟಿನ್ 41(51 ಎಸೆತ) ರನ್ಗಳ ನೆರವಿನಿಂದ 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 260 ರನ್ಗಳಿಸಿತ್ತು.
ಭಾರತದ ಪರ ಯುವ ವೇಗಿ ಪೂಜಾ ವಸ್ತ್ರಾಕರ್ 34ಕ್ಕೆ 4 ವಿಕೆಟ್ ಪಡೆದರೆ, ಗಾಯಕ್ವಾಡ್ 46ಕ್ಕೆ 2, ಗೋಸ್ವಾಮಿ 41ಕ್ಕೆ 1 ವಿಕೆಟ್ ಪಡೆದರು.
261ರನ್ಗಳ ಗುರಿ ಪಡೆದ ಭಾರತ ತಂಡ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 198ಕ್ಕೆ ಸರ್ವಪತನ ಕಂಡಿತು.
ಹರ್ಮನ್ಪ್ರೀತ್ ಕೌರ್ ಹೊರತುಪಡಿಸಿ ಬೇರೆ ಯಾವ ಬ್ಯಾಟರ್ಗಳೂ ಕೂಡಾ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ತೋರುವಲ್ಲಿ ವಿಫಲರಾದರು. ನಾಯಕಿ ಮಿಥಾಲಿ ರಾಜ್ 56 ಎಸೆತಗಳಲ್ಲಿ 31, ಆರಂಭಿಕ ಬ್ಯಾಟರ್ ಯಸ್ತಿಕ ಭಾಟಿಯಾ 59 ಎಸೆತಗಳಲ್ಲಿ 29 ರನ್ಗಳಿಸಿದರು.
ಆರಂಭದಿಂದಲೂ ಅತಿ ನಿಧಾನಗತಿ ಬ್ಯಾಟಿಂಗ್ ಮೊರೆ ಹೋದ ಭಾರತೀಯ ಮಹಿಳಾ ತಂಡ ಅಗತ್ಯಕ್ಕಿಂತಲೂ ಹೆಚ್ಚಿನ ಒತ್ತಡವನ್ನು ಹೇರಿಕೊಂಡು ವಿಕೆಟ್ ಒಪ್ಪಿಸಿದರು. ಆರಂಭದ ನಾಲ್ಕು ಬ್ಯಾಟರ್ಗಳು ರನ್ರೇಟ್ಗೆ ತಕ್ಕಂತೆ ಬ್ಯಾಟಿಂಗ್ ಮಾಡುವಲ್ಲಿ ವಿಫಲರಾದರು. ಯಸ್ತಿಕಾ 47.4, ಮಂಧಾನ 28.5, ದೀಪ್ತಿ ಶರ್ಮಾ 38.4 ಮಿಥಾಲಿ 55.36ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟಿಂಗ್ ಮಾಡಿ ಹೆಚ್ಚು ಎಸೆತಗಳನ್ನು ಪೋಲು ಮಾಡಿದರು.
ಕೌರ್ 63 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್‌ಸಹಿತ 71 ರನ್ಗಳಿಸಿದರು. ಇವರೂ ಕೂಡ ಆರಂಭದಲ್ಲಿ ಸಾಕಷ್ಟು ಎಸೆತಗಳನ್ನು ಡಾಟ್ ಮಾಡಿದ್ದರು.
ಆತಿಥೇಯ ತಂಡದ ಪರ ಲೀ ತಹುಹು 10 ಓವರ್ಗಳಲ್ಲಿ 17 ರನ್ ನೀಡಿ 3 ವಿಕೆಟ್ ಪಡೆದರು. ಹೇಲಿ ಜಾನ್ಸೆನ್ 30ಕ್ಕೆ2, ಅಮೆಲಿಯಾ ಕೆರ್ 56ಕ್ಕೆ 3 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಇದನ್ನೂ ಓದಿ:ಐಸಿಸಿಯ 'ತಿಂಗಳ ಆಟಗಾರ ಪ್ರಶಸ್ತಿ'ಗೆ ಶ್ರೇಯಸ್, ಮಿಥಾಲಿ, ದೀಪ್ತಿ ನಾಮನಿರ್ದೇಶನ