ನವದೆಹಲಿ:ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಆಲ್ರೌಂಡರ್ ಪ್ರದರ್ಶನ ನೀಡಿದ ರಾಕ್ಸ್ಟಾರ್ ಸರ್ ರವೀಂದ್ರ ಜಡೇಜಾ ಐಸಿಸಿ ಪ್ರಕಟಿಸಿದ ಟೆಸ್ಟ್ ಆಲ್ರೌಂಡರ್ಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಈ ಮೊದಲು ನಂ.1 ಸ್ಥಾನದಲ್ಲಿದ್ದ ವೆಸ್ಟ್ ಇಂಡೀಸ್ನ ಜೇಸನ್ ಹೋಲ್ಡರ್ 2ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಮೊಹಾಲಿಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ರವೀಂದ್ರ ಜಡೇಜಾ ಬ್ಯಾಟಿಂಗ್, ಬೌಲಿಂಗ್ನಲ್ಲಿ ಪಾರಮ್ಯ ಮೆರೆದಿದ್ದರು. ಬ್ಯಾಟಿಂಗ್ನಲ್ಲಿ ಅಜೇಯ 175 ರನ್ ಗಳಿಸಿದ್ದಲ್ಲದೇ, 9 ವಿಕೆಟ್ ಪಡೆದು ಸರ್ವಶ್ರೇಷ್ಟ ಆಟವಾಡಿದ್ದರು. ಇದರಿಂದ 406 ಅಂಕ ಗಳಿಸಿ ನಂ.1 ಆಲ್ರೌಂಡರ್ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಜಡೇಜಾ ಎರಡನೇ ಬಾರಿಗೆ ನಂ.1 ಆಲ್ರೌಂಡರ್ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ.
ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದ ಆರ್. ಅಶ್ವಿನ್ ಒಂದು ಸ್ಥಾನ ಕುಸಿದು 3 ನೇ ಸ್ಥಾನಕ್ಕೆ ಜಾರಿದ್ದಾರೆ. ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ (4), ಇಂಗ್ಲೆಂಡ್ನ ಬೆನ್ ಸ್ಟೋಕ್ಸ್(5) ನಂತರದ ಸ್ಥಾನದಲ್ಲಿದ್ದಾರೆ.