ಹೈದರಾಬಾದ್, ತೆಲಂಗಾಣ: ನ್ಯೂಜಿಲೆಂಡ್ನ ಆಲ್ರೌಂಡರ್ ಮಿಚೆಲ್ ಸ್ಯಾಂಟ್ನರ್ ವಿಶ್ವಕಪ್ನಲ್ಲಿ ನೆದರ್ಲೆಂಡ್ಸ್ ವಿರುದ್ಧ ಅದ್ಭುತ ಬೌಲಿಂಗ್ ಮಾಡಿದ್ದಾರೆ. 59 ರನ್ ನೀಡಿ 5 ವಿಕೆಟ್ ಪಡೆದರು. ಸ್ಯಾಂಟ್ನರ್ 5 ವಿಕೆಟ್ ಪಡೆಯುವ ಮೂಲಕ ನ್ಯೂಜಿಲೆಂಡ್ ತಂಡದ ಮಾಜಿ ನಾಯಕ ಡೇನಿಯಲ್ ವೆಟ್ಟೋರಿ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಇದಲ್ಲದೆ, ಅವರು ಟೀಮ್ ಇಂಡಿಯಾದ ಮಾಜಿ ಆಲ್ ರೌಂಡರ್ ಯುವರಾಜ್ ಸಿಂಗ್ ಅವರ ಕ್ಲಬ್ಗೂ ಸೇರಿಕೊಂಡಿದ್ದಾರೆ. ಇದರೊಂದಿಗೆ ಸ್ಯಾಂಟ್ನರ್ ವಿಶ್ವಕಪ್ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ.
ವಿಶ್ವಕಪ್ನಲ್ಲಿ ಇಲ್ಲಿಯರವರೆಗೆ ಎಡಗೈ ಸ್ಪಿನ್ನರ್ಗಳು ಅದ್ಭುತ ಪ್ರದರ್ಶನ ನೀಡಿದ್ದಾರೆ. ಎಡಗೈ ಸ್ಪಿನ್ನರ್ಗಳು ಇಲ್ಲಿಯವರೆಗೆ 110 ಓವರ್ಗಳನ್ನು ಬೌಲ್ ಮಾಡಿದ್ದು, 25.39 ಸರಾಸರಿ ಮತ್ತು 28.6 ಸ್ಟ್ರೈಕ್ ರೇಟ್ನಲ್ಲಿ 23 ವಿಕೆಟ್ಗಳನ್ನು ಕಬಳಿಸಿದ್ದಾರೆ. 2023ರ ವಿಶ್ವಕಪ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ಗಳ ಪೈಕಿ ಸ್ಯಾಂಟ್ನರ್ ಅಗ್ರಸ್ಥಾನದಲ್ಲಿದ್ದಾರೆ. ಅವರು ಎರಡು ಪಂದ್ಯಗಳಲ್ಲಿ 7 ವಿಕೆಟ್ ಪಡೆದಿದ್ದಾರೆ. ಇದಲ್ಲದೇ ರವೀಂದ್ರ ಜಡೇಜಾ ಹಾಗೂ ಶಕೀಬ್ 3-3 ವಿಕೆಟ್ ಪಡೆದಿದ್ದಾರೆ. ಸ್ಯಾಂಟ್ನರ್ 10 ಓವರ್ಗಳಲ್ಲಿ 59 ರನ್ ನೀಡಿ ಐದು ವಿಕೆಟ್ ಪಡೆದರು. ಎದುರಾಳಿ ತಂಡದ ಯಾವುದೇ ಬ್ಯಾಟ್ಸ್ಮನ್ಗಳು ಸ್ಯಾಂಟ್ನರ್ ಅವರ ಸ್ಪಿನ್ನಿಂಗ್ ಎಸೆತಗಳನ್ನು ಎದುರಿಸಲು ಸಾಧ್ಯವಾಗಲಿಲ್ಲ.
ಬೌಲಿಂಗ್ನಲ್ಲಿ ಐದು ವಿಕೆಟ್ ಕಬಳಿಸಿದ ಮಿಚೆಲ್ ಸ್ಯಾಂಟ್ನರ್ ಬ್ಯಾಟಿಂಗ್ನಲ್ಲೂ ಭಾರಿ ಸದ್ದು ಮಾಡಿದರು. ಕೊನೆಯ ಓವರ್ಗಳಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದ ಸ್ಯಾಂಟ್ನರ್ ಕೇವಲ 17 ಎಸೆತಗಳಲ್ಲಿ 36 ರನ್ ಗಳಿಸಿದರು. 211 ಸ್ಟ್ರೈಕ್ ರೇಟ್ನಲ್ಲಿ ಆಡಿದ ಸ್ಯಾಂಟ್ನರ್ ಮೂರು ಬೌಂಡರಿಗಳು ಮತ್ತು ಎರಡು ಸಿಕ್ಸರ್ಗಳನ್ನು ಬಾರಿಸಿದರು. ಈ ಕಾರಣದಿಂದಾಗಿ ನ್ಯೂಜಿಲೆಂಡ್ ತಂಡವು ಬೃಹತ್ ಮೊತ್ತವನ್ನು ತಲುಪುವಲ್ಲಿ ಯಶಸ್ವಿಯಾಯಿತು.
ಏಕದಿನದಲ್ಲಿ 5 ವಿಕೆಟ್ ಪಡೆದ ನ್ಯೂಜಿಲೆಂಡ್ ಸ್ಪಿನ್ನರ್ಗಳ ಪೈಕಿ ಮಿಚೆಲ್ ಸ್ಯಾಂಟ್ನರ್ ಅವರು ಡೇನಿಯಲ್ ವೆಟ್ಟೋರಿ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಇಬ್ಬರೂ ಎರಡು ಬಾರಿ ಐದು ವಿಕೆಟ್ ಪಡೆದಿದ್ದಾರೆ. ಆದರೆ, ಮ್ಯಾಥ್ಯೂ ಹಾರ್ಟ್ ಮತ್ತು ಇಶ್ ಸೋಧಿ ತಲಾ ಒಮ್ಮೆ ಐದು ವಿಕೆಟ್ ಕಬಳಿಸಿದ್ದಾರೆ. ಸ್ಯಾಂಟ್ನರ್ ಅವರು ವಿಶ್ವಕಪ್ನಲ್ಲಿಯೇ ವೆಟ್ಟೋರಿ ಅವರ ದಾಖಲೆ ಮುರಿಯಬಹುದಾಗಿದೆ. ಕಿವೀಸ್ ತಂಡ ಇನ್ನೂ 7 ಪಂದ್ಯಗಳನ್ನು ಆಡಬೇಕಿದೆ.