ನವದೆಹಲಿ: ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವು ಅಫ್ಘಾನಿಸ್ತಾನದ ಬಿಗು ಬೌಲಿಂಗ್ ಮುಂದೆ ತತ್ತರಿಸಿತು. ರಶೀದ್ ಖಾನ್, ಮುಜೀಬ್ ಉರ್ ರಹಮಾನ್ ಮತ್ತು ಮೊಹಮ್ಮದ್ ನಬಿ ಅವರ ದಾಳಿಗೆ ಕ್ರಿಕೆಟ್ ಜನಕರ ನಾಡಿನ ಬ್ಯಾಟರ್ಗಳು ತರಗಲೆಗಳಂತೆ ಉದುರಿದರು. ಅಫ್ಘಾನಿಸ್ತಾನ ತಂಡ ಆಂಗ್ಲರನ್ನು 69 ರನ್ನಿಂದ ಮಣಿಸಿ ಇತಿಹಾಸ ನಿರ್ಮಿಸಿತು.
ವಿಶ್ವಕಪ್ನ ಟಾಪ್ ನಾಲ್ಕು ತಂಡಗಳೆಂದು ಗುರುತಿಸಲ್ಪಡುವ ಇಂಗ್ಲೆಂಡ್ ಕಳಪೆ ಬ್ಯಾಟಿಂಗ್ನಿಂದಾಗಿ ಇಂದು ಅಫ್ಘಾನ್ ವಿರುದ್ಧ ಮಣಿಯಿತು. ಸ್ಟಾರ್ ಬ್ಯಾಟರ್ಗಳ ದಂಡು ಹಶ್ಮತುಲ್ಲಾ ಶಾಹಿದಿ ಅವರ ತಂಡದ ಕರಾರುವಾಕ್ ಬೌಲಿಂಗ್ ದಾಳಿಗೆ ಥಂಡಾ ಹೊಡೆಯಿತು. ಫ್ಲಾಟ್ ಪಿಚ್ ದೆಹಲಿಯ ಫಿರೋಜ್ ಶಾ ಕೋಟ್ಲಾದಲ್ಲಿ ಸ್ಪಿನ್ನರ್ಗಳು ಕಮಾಲ್ ಮಾಡಿದರು. ಅಫ್ಘಾನ್ ಪರ ಸ್ಪಿನ್ನರುಗಳು 8 ವಿಕೆಟ್ ಉರುಳಿಸಿದರು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ ರಹಮಾನುಲ್ಲಾ ಗುರ್ಬಾಜ್ ಮತ್ತು ಇಕ್ರಮ್ ಅಲಿಖಿಲ್ ಅವರ ಅರ್ಧಶತಕದ ನೆರವಿನಿಂದ 285 ರನ್ಗಳ ಸ್ಪರ್ಧಾತ್ಮಕ ಗುರಿ ನೀಡಿತು. ಈ ಮೊತ್ತ ಬೆನ್ನತ್ತಿದ ಇಂಗ್ಲೆಂಡ್‌ಗೆ ಯಾವುದೇ ದೊಡ್ಡ ಜೊತೆಯಾಟದ ನೆರವು ಬರಲಿಲ್ಲ. ಹ್ಯಾರಿ ಬ್ರೂಕ್ ಏಕಾಂಗಿಯಾಗಿ ಅರ್ಧಶತಕ ಸಿಡಿಸಿದ್ದು ಪಂದ್ಯದ ಫಲಿತಾಂಶವನ್ನು ಬದಲಿಸಲು ಸಾಧ್ಯವಾಗಲಿಲ್ಲ. ಅಂತಿಮ ಹಂತದಲ್ಲಿ ಬಾಲಂಗೋಚಿಗಳ ಬ್ಯಾಟಿಂಗ್, ಸೋಲಿನ ಅಂತರ ತಗ್ಗಿಸಿತು ಬಿಟ್ಟರೆ ಬೇರಾವುದೇ ಪರಿಣಾಮ ಬೀರಲಿಲ್ಲ.
ಆರಂಭಿಕ ಆಘಾತ: ಫಜಲ್ಹಕ್ ಫಾರೂಕಿ ಇನ್ನಿಂಗ್ಸ್ನ ಎರಡನೇ ಓವರ್ನಲ್ಲೇ ಹೊಡಿಬಡಿ ದಾಂಡಿಗ ಜಾನಿ ಬೈರ್‌ಸ್ಟೋವ್ (2) ವಿಕೆಟ್ ಕಿತ್ತರು. ಅವರ ಬೆನ್ನಲ್ಲೇ ಇಂಗ್ಲೆಂಡ್ ಸ್ಟಾರ್ ಆಟಗಾರ ಜೋ ರೂಟ್ (11) ವಿಕೆಟ್ ಕಳೆದುಕೊಂಡರು. ಅಫ್ಘಾನ್ ಬೌಲಿಂಗ್ಗೆ ಎರಡು ವಿಕೆಟ್ ಬಿದ್ದಾಗ ಎಚ್ಚೆತ್ತ ಆಂಗ್ಲರು ಜಾಗರೂಕತೆಯ ಆಟಕ್ಕೆ ಮುಂದಾದರು. ಇನ್ನೋರ್ವ ಆರಂಭಿಕ ಡೇವಿಡ್ ಮಲಾನ್ ಮತ್ತು ಹ್ಯಾರಿ ಬ್ರೂಕ್ ತಾಳ್ಮೆಯಿಂದ ಇನ್ನಿಂಗ್ಸ್ ಕಟ್ಟಿದರು.
ಬ್ರೂಕ್ಗೆ ಸಿಗದ ಸಾಥ್:ಹ್ಯಾರಿ ಬ್ರೂಕ್ ಅಫ್ಘಾನ್ ದಾಳಿಯನ್ನು ಉತ್ತಮವಾಗಿ ಎದುರಿಸಿದರೂ ಅವರಿಗೆ ಯಾರೂ ಸಾಥ್ ನೀಡಲಿಲ್ಲ. ಬ್ರೂಕ್ ಮತ್ತು ಮಲಾನ್ ನಡುವೆ 35 ರನ್ಗಳ ಜೊತೆಯಾಟ ನಿರ್ಮಾಣ ಆಗಿತ್ತು. ಈ ವೇಳೆ ನಬಿ ಅಫ್ಘಾನ್ಗೆ ವಿಕೆಟ್ ತಂದುಕೊಟ್ಟರು. ಇದಾದ ನಂತರ ಅಫ್ಘಾನಿಗಳ ಕೈಚಳಕಕ್ಕೆ ಇಂಗ್ಲೆಂಡ್ ಮಂತ್ರಮುಗ್ಧವಾಯಿತು. ಇಂಗ್ಲೆಂಡ್ ಆಟಗಾರರು ಕ್ರೀಸ್ಗೆ ಬಂದು ಪೆವಿಲಿಯನ್ ಪರೇಡ್ ಮಾಡತೊಡಗಿದರು.
ಜೋಸ್ ಬಟ್ಲರ್ (9), ಲಿಯಾಮ್ ಲಿವಿಂಗ್‌ಸ್ಟೋನ್(10), ಸ್ಯಾಮ್ ಕರ್ರಾನ್ (10) ಮತ್ತು ಕ್ರಿಸ್ ವೋಕ್ಸ್ (9) ಬಂದ ಪುಟ್ಟ ಹೋದ ಪುಟ್ಟ ಎಂಬಂತೆ ವಿಕೆಟ್ ಒಪ್ಪಿಸಿದರು. ಇಷ್ಟು ವಿಕೆಟ್ಗಳು ಉರುಳಿದರೂ ಬ್ರೂಕ್ ತಮ್ಮ ಆಟವನ್ನು ಇನ್ನೊಂದು ಬದಿಯಲ್ಲಿ ಮುಂದುವರೆಸಿದರು. ಅನನುಭವಿ ಯುವ ಆಟಗಾರ ಬ್ರೂಕ್ ತಮ್ಮ ಚೊಚ್ಚಲ ಏಕದಿನ ಅರ್ಧಶತಕ ಪೂರೈಸಿದರು. ಅನುಭವಿಗಳ ವೈಫಲ್ಯದ ನಡುವೆಯೂ ಕೇವಲ 8ನೇ ಪಂದ್ಯವಾಡುತ್ತಿರುವ ಬ್ರೂಕ್ ತಂಡವನ್ನು ಗೆಲ್ಲಿಸಲು ಪ್ರಯತ್ನಿಸಿದರು. ಆದರೆ 66 ರನ್ ಗಳಿಸಿದ್ದಾಗ ಮುಜೀಬ್ ಉರ್ ರಹಮಾನ್ ಬಾಲಿಂಗ್ನಲ್ಲಿ ವಿಕೆಟ್ ಕೊಟ್ಟರು. ಇನ್ನಿಂಗ್ಸ್ನಲ್ಲಿ 61 ಬಾಲ್ ಆಡಿ 7 ಬೌಂಡರಿ ಮತ್ತು 1 ಸಿಕ್ಸ್ ಗಳಿಸಿದರು.
ಕೊನೇಯ ಹಂತದ ಹೋರಾಟ: ತನ್ನ 11 ಆಟಗಾರರಿಗೂ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಇದೆ ಎಂದು ಇಂಗ್ಲೆಂಡ್ ಹೇಳಿಕೊಂಡಿದೆ. ಮೇಲಿನ ಪ್ರಮುಖ ಬ್ಯಾಟರ್ಗಳೇ ವಿಫಲವಾದಾಗ ಇನ್ನು ಕೆಳ ಕ್ರಮಾಂಕದ ಆಟಗಾರರು ಎಷ್ಟು ಆಡಿದರೂ ಪ್ರಯೋಜನಇಲ್ಲ. ಆದರೆ ಆದಿಲ್ ರಶೀದ್ (20), ಮಾರ್ಕ್ ವುಡ್ (18)ಮತ್ತು ರೀಸ್ ಟೋಪ್ಲಿ (15*) ತಮ್ಮ ಪ್ರಯತ್ನ ಮಾಡಿದರು. ಇವರ ರನ್ ಗಳಿಕೆ ಗೆಲುವಿಗೆ ದಡ ಸೇರಿಸದೇ ಇದ್ದರೂ ಸೇಲಿನ ಅಂತರ ಕಡಿಮೆ ಮಾಡಿತು.
ಅಫ್ಘಾನ್ ಪರ ಮುಜೀಬ್ ಉರ್ ರಹಮಾನ್ ಮತ್ತು ರಶೀದ್ ಖಾನ್ ತಲಾ 3 ವಿಕೆಟ್ ಪಡೆದರು. ಮೊಹಮ್ಮದ್ ನಬಿ 2, ಫಜಲ್ಹಕ್ ಫಾರೂಕಿ ಮತ್ತು ನವೀನ್-ಉಲ್-ಹಕ್ ತಲಾ ಒಂದು ವಿಕೆಟ್ ಕಿತ್ತರು.
ಇದನ್ನೂ ಓದಿ:ವಿಶ್ವಕಪ್ನಲ್ಲಿ ಭಾರತಕ್ಕೆ ಹ್ಯಾಟ್ರಿಕ್ ಗೆಲುವು: ಮುಂದಿನ ಸವಾಲೇನು? ಈ ತಂಡಗಳನ್ನು ಮಣಿಸುವುದೇ ರೋಹಿತ್ ಟೀಂ?