ಮುಂಬೈ (ಮಹಾರಾಷ್ಟ್ರ): ಗ್ಲೆನ್ ಮ್ಯಾಕ್ಸ್‌ವೆಲ್ ಅವರ ದ್ವಿಶತಕ ಆಟ ಆಸ್ಟ್ರೇಲಿಯಾವನ್ನು ಸೋಲಿನ ಹೊಸಿಲಿನಿಂದ ಗೆಲುವಿಗೆ ಕೊಂಡೊಯ್ಯಿತು. 91 ರನ್ಗಳಿಗೆ 7 ವಿಕೆಟ್ ಕಳೆದುಕೊಂಡಿದ್ದ ಕಾಂಗರೂ ಪಡೆಗೆ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ನಾಯಕ ಪ್ಯಾಟ್ ಕಮಿನ್ಸ್ 202 ರನ್ಗಳ ಪಾಲುದಾರಿಕೆ ಜಯಕ್ಕೆ ಮೂಲವಾಯಿತು. ಮೊದಲು ಬ್ಯಾಟಿಂಗ್ ಮಾಡಿದ್ದ ಅಫ್ಘಾನ್ನರು 50 ಓವರ್ನಲ್ಲಿ 5 ವಿಕೆಟ್ ಕಳೆದುಕೊಂಡು 292 ರನ್ಗಳ ಗುರಿ ನೀಡಿದ್ದರು. ಇದನ್ನು ಆಸ್ಟ್ರೇಲಿಯಾ 3 ಓವರ್ ಮತ್ತು 3 ವಿಕೆಟ್ ಉಳಿಸಿಕೊಂಡು ಗೆದ್ದಿದೆ.
ಪಂದ್ಯದ ಸೋಲಿನಲ್ಲಿ ಕ್ಯಾಚ್ಗಳು ಎಷ್ಟು ಪ್ರಮುಖವಾಗುತ್ತದೆ ಎಂಬುದಕ್ಕೆ ಮುಂಬೈನ ವಾಂಖೆಡೆಯಲ್ಲಿ ನಡೆದ ಆಸ್ಟ್ರೇಲಿಯಾ vs ಅಫ್ಘಾನಿಸ್ತಾನ ಪಂದ್ಯ ನಿದರ್ಶನವಾಗಿರಲಿದೆ. ಮ್ಯಾಕ್ಸ್‌ವೆಲ್ ಅವರ 4 ಕ್ಯಾಚ್ಗಳನ್ನು ಕೈಚೆಲ್ಲಿ ಜೀವದಾನ ಕೊಟ್ಟಿದ್ದು ಅಫ್ಘಾನ್ಗೆ ಊಹೆಗೂ ಮೀರಿದ ಸೋಲಿಗೆ ಕಾರಣವಾಯಿತು. ಆಸ್ಟ್ರೇಲಿಯಾ 8ನೇ ವಿಕೆಟ್ಗೆ 202 ರನ್ಗಳ ಜೊತೆಯಾಟ ಮಾಡಿ ಇತಿಹಾಸ ಪುಟದಲ್ಲಿ ಅಚ್ಚರಿಯ ಗೆಲುವೊಂದಕ್ಕೆ ಕಾರಣವಾಯಿತು. ಪಂದ್ಯದಲ್ಲಿ ಸೋಲು ಕಂಡ ಅಫ್ಘಾನ್ಗೆ ಸೆಮೀಸ್ ಪ್ರವೇಶ ಮಾಡುವ ಇದ್ದೊಂದು ಅವಕಾಶ ಕಮರಿದೆ.
ಗ್ಲೆನ್ ಮ್ಯಾಕ್ಸ್‌ವೆಲ್ ಏಕಾಂಗಿ ಆಟ: ಒಬ್ಬ ಬ್ಯಾಟರ್ ಎದುರಾಳಿ ಕೊಟ್ಟ ಗುರಿಯ 90 ಶೇಕಡಾದಷ್ಟು ಮೊತ್ತವನ್ನು ಏಕಾಂಗಿಯಾಗಿ ಕಲೆಹಾಕಿ ಗೆಲ್ಲಿಸಿದ ಕ್ರಿಕೆಟ್ ಪಂದ್ಯದ ಉದಾಹರಣೆ ಇದೇ ಇರಬೇಕು. 292 ರನ್ನ ಗುರಿಯಲ್ಲಿ ಮ್ಯಾಕ್ಸ್‌ವೆಲ್ 201 ರನ್ ಗಳಿಸಿದರು. ಉಳಿದ 91 ರನ್ ಮಾತ್ರ ಇತರೆ ಬ್ಯಾಟರ್ಗಳು ಗಳಿಸಿದ ಮೊತ್ತ. ಇಂತಿಹ ಒಬ್ಬಂಟಿ ಆಟದ ಪ್ರದರ್ಶನ ಕ್ರಿಕೆಟ್ನಲ್ಲಿ ಅತ್ಯಂತ ಅಪರೂಪದ್ದಾಗಿದೆ.
ಮ್ಯಾಕ್ಸ್‌ವೆಲ್ ಬ್ಯಾಟ್ನಿಂದ ಇಂದು ದಾಖಲೆಗಳ ಸರಮಾಲೆಯೇ ಸೃಷ್ಠಿಯಾಯಿತು. ಕಡಿಮೆ ಬಾಲ್ನಲ್ಲಿ ದ್ವಿಶತಕ ಸಿಡಿಸಿದ ಎರಡನೇ ಆಟಗಾರ (ಇಶಾನ್ ಕಿಶನ್ 126ಬಾಲ್). ಆರಂಭಿಕ ಬ್ಯಾಟರ್ ಆಗಿರದೇ ಏಕದಿನ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಬ್ಯಾಟರ್. ಏಕದಿನ ಕ್ರಿಕೆಟ್ನಲ್ಲಿ 8ನೇ ವಿಕೆಟ್ಗೆ ದೊಡ್ಡ ಜೊತೆಯಾಟ. ವಿಶ್ವಕಪ್ನ ಮೂರನೇ ಅತಿ ಹೆಚ್ಚಿನ ಏಕಾಂಗಿ ಮೊತ್ತ (ಮಾರ್ಟಿನ್ ಗುಪ್ಟಿಲ್-237, ಕ್ರಿಸ್ ಗೇಲ್- 215). ಚೇಸಿಂಗ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಮೊದಲಿಗ ಎಂಬ ರೆಕಾರ್ಡ್ಗಳು ಮ್ಯಾಕ್ಸಿಯ ಹೆಸರಿನಲ್ಲಿ ದಾಖಲಾದವು.