ಕೇಪ್ಟೌನ್:ಬಾಂಗ್ಲಾದೇಶದ ವಿರುದ್ಧದ ಟೆಸ್ಟ್ ಸರಣಿಯನ್ನು ತ್ಯಜಿಸಿ ಐಪಿಎಲ್ ಆಡುವುದನ್ನು ಆಯ್ಕೆ ಮಾಡಿಕೊಂಡಿರುವ ಆಟಗಾರರಿಗೆ ದಕ್ಷಿಣ ಆಫ್ರಿಕಾ ಟೆಸ್ಟ್ ತಂಡದಲ್ಲಿ ಭವಿಷ್ಯದಲ್ಲಿ ಅವಕಾಶ ಸಿಗುತ್ತದೆ ಎನ್ನುವುದರ ಬಗ್ಗೆ ನನಗೆ ಗೊತ್ತಿಲ್ಲ ಎಂದು ನಾಯಕ ಡೀನ್ ಎಲ್ಗರ್ ತಿಳಿಸಿದ್ದಾರೆ. ಸೋಮವಾರ ದಕ್ಷಿಣ ಆಫ್ರಿಕಾ ತಂಡ ಬಾಂಗ್ಲಾದೇಶದ ವಿರುದ್ಧ 2-0ಯಲ್ಲಿ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿತ್ತು. ಈ ಪಂದ್ಯದ ನಂತರ ಮಾತನಾಡಿದ ಎಲ್ಗರ್, ಆಯ್ಕೆ ನನ್ನ ಕೈಯಲ್ಲಿಲ್ಲ, ಅವರು ಮತ್ತೆ ಆಯ್ಕೆಯಾಗುತ್ತಾರೋ, ಇಲ್ಲವೋ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಕಗಿಸೊ ರಬಾಡ, ಎನ್ರಿಚ್ ನಾರ್ಕಿಯಾ, ಐಡೆನ್ ಮಾರ್ಕಮ್, ರಾಸೀ ವ್ಯಾನ್ಡರ್ ಡಸೆನ್, ಮಾರ್ಕೊ ಜಾನ್ಸನ್, ಲುಂಗಿ ಎಂಗಿಡಿ ಟೆಸ್ಟ್ ಸರಣಿಯನ್ನು ತ್ಯಜಿಸಿ ಐಪಿಎಲ್ ಆಡುವುದಕ್ಕೆ ಪ್ರಾಧಾನ್ಯತೆ ನೀಡಿದ್ದರು. ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಎಲ್ಗರ್ ಟಿ20 ಲೀಗ್ಗಳಿಗೆ ಪ್ರಾಧಾನ್ಯತೆ ನೀಡುವುದಕ್ಕಿಂತ ರಾಷ್ಟ್ರೀಯ ತಂಡಕ್ಕೆ ಆಡುವುದಕ್ಕೆ ಮಹತ್ವ ನೀಡಿ ಎಂದಿದ್ದರು. ಆದರೂ ಕೆಲವು ಆಟಗಾರರು ಮಿಲಿಯನ್ ಡಾಲರ್ ಟೂರ್ನಿಗೆ ಆಗಮಿಸಿದ್ದರು.