ಮುಂಬೈ (ಮಹಾರಾಷ್ಟ್ರ):ಆಸ್ಟ್ರೇಲಿಯಾ ವಿರುದ್ಧದ ಮುಂಬರುವ ಐದು ಪಂದ್ಯಗಳ ಟಿ20 ಸರಣಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಇಂದು (ಶುಕ್ರವಾರ) ಭಾರತೀಯ ಮಹಿಳಾ ತಂಡವನ್ನು ಪ್ರಕಟಿಸಿದೆ. ಡಿಸೆಂಬರ್ 9 ರಂದು ಮೊದಲ ಟಿ20 ನಡೆದರೆ, ಡಿಸೆಂಬರ್ 11 ಎರಡನೇ ಟಿ20, ಡಿಸೆಂಬರ್ 14 ಮೂರನೇ ಪಂದ್ಯ, ಡಿಸೆಂಬರ್ 17 ಮತ್ತು ಡಿಸೆಂಬರ್ 20 ರಂದು ನಾಲ್ಕು ಮತ್ತು ಐದನೇ ಟಿ20 ನಡೆಯಲಿದೆ. ಮೊದಲೆರಡು ಪಂದ್ಯಗಳಿಗೆ ಡಿ ವೈ ಪಾಟಿಲ್ ಕ್ರೀಡಾಂಗಣ ಆತಿಥ್ಯ ವಹಿಸಿದರೆ, ಉಳಿದ ಮೂರು ಪಂದ್ಯ ಬ್ರಬೋರ್ನ್ ಸ್ಟೇಡಿಯಂ ವಹಿಸಿಕೊಳ್ಳಲಿದೆ.
ಹರ್ಮನ್‌ಪ್ರೀತ್ ಕೌರ್ 15 ಸದಸ್ಯರ ತಂಡವನ್ನು ಮುನ್ನಡೆಸಲಿದ್ದು, ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನ ಉಪನಾಯಕಿಯಾಗಿ ಕಣಕ್ಕಿಳಿಯಲಿದ್ದಾರೆ. ಪರೀಕ್ಷಾರ್ಥವಾಗಿ ವಿಕೆಟ್‌ಕೀಪರ್‌ಗಳಾದ ಯಸ್ತಿಕಾ ಭಾಟಿಯಾ ಮತ್ತು ರಿಚಾ ಘೋಷ್ ಇಬ್ಬರನ್ನೂ ಸರಣಿಯಲ್ಲಿ ಸೇರ್ಪಡೆ ಮಾಡಿಕೊಳ್ಳಲಾಗಿದೆ.
ಬಿಸಿಸಿಐ ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದು, ಸ್ಟಾರ್ ಆಟಗಾರ್ತಿ ಪೂಜಾ ವಸ್ತ್ರಾಕರ್ ಅವರನ್ನು ಸರಣಿಯಿಂದ ಕೈಬಿಡಲಾಗಿದೆ. ಜೆಮಿಮಾ ರಾಡ್ರಿಗಸ್, ಶಫಾಲಿ ವರ್ಮನ್ ಮತ್ತು ದೀಪ್ತಿ ಶರ್ಮಾ, ಕರ್ನಾಟಕದ ಕುವರಿ ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್ ಸರಣಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.