ಮುಂಬೈ: ಸೌರವ್ ಗಂಗೂಲಿ ಮತ್ತು ಮಹೇಂದ್ರ ಸಿಂಗ್ ಧೋನಿ ಭಾರತ ಕ್ರಿಕೆಟ್ ತಂಡದ ಶ್ರೇಷ್ಠ ನಾಯಕರ ಸಾಲಿನಲ್ಲಿ ಕಂಡುಬರುವ ಮೊದಲೆರಡು ಹೆಸರುಗಳು. ಹಲವಾರು ಮಾಜಿ ಕ್ರಿಕೆಟಿಗರು ತಮ್ಮದೇ ಆದ ವ್ಯಾಖ್ಯಾನಗಳೊಂದಿಗೆ ಕೆಲವರು ಗಂಗೂಲಿ ಅತ್ಯುತ್ತಮ ನಾಯಕ ಎಂದರೆ ಮತ್ತೆ ಕೆಲವರು ಧೋನಿ ಶ್ರೇಷ್ಠ ಎಂದು ವಿವರಿಸಿದ್ದಾರೆ. ಆದರೆ ಈ ಇಬ್ಬರು ಭಾರತ ಕ್ರಿಕೆಟ್ಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂಬುದು ಸಾರ್ವಕಾಲಿಕ ಸತ್ಯ.
ಎಂಎಸ್ ಧೋನಿ ನಾಯಕತ್ವದಲ್ಲಿ 2007ರ ಟಿ20 ವಿಶ್ವಕಪ್, 2011ರ ಏಕದಿನ ವಿಶ್ವಕಪ್ ಮತ್ತು 2013ರ ಚಾಂಪಿಯನ್ಸ್ ಟ್ರೋಫಿಯನ್ನು ಭಾರತ ಗೆದ್ದಿತ್ತು. ಮೂರು ಐಸಿಸಿ ಟ್ರೋಫಿ ಗೆದ್ದ ವಿಶ್ವದ ಏಕೈಕ ನಾಯಕ ಕೂಡ ಆಗಿದ್ದಾರೆ. ಆದರೆ ಧೋನಿಯ ಈ ಗೆಲುವಿನ ಹಿಂದೆ ಗಂಗೂಲಿ ಕಟ್ಟಿದ್ದ ತಂಡದ ನೆರವು ಕೂಡ ಇತ್ತು ಎನ್ನುವುದನ್ನು ಮರೆಯುವಂತಿಲ್ಲ. ಆದರೆ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ತಮ್ಮದೇ ಆದ ವಿವರಣೆಗಳೊಂದಿಗೆ ಧೋನಿ ಭಾರತ ತಂಡದಲ್ಲಿ ಆಟಗಾರರನ್ನು ಹೇಗೆ ಬೆಳೆಸಿದರೆಂದು ವಿವರಿಸಿದ್ದಾರೆ.
"ಎಂಎಸ್ ಧೋನಿ ನಾಯಕತ್ವದ ಹೊಸ ದಾರಿ ಕಲಿಸಿದ್ದಾರೆ. ಸೌರವ್ ಗಂಗೂಲಿ ಪ್ರತಿಭಾನ್ವಿತ ಆಟಗಾರರನ್ನು ಹುಡುಕುತ್ತಿದ್ದರು. ಆದರೆ ಧೋನಿ ಪ್ರತಿಭೆಗಳನ್ನು ಬೆಳೆಸುತ್ತಿದ್ದರು. ನೀವು ಯಾವುದೇ ಒಬ್ಬ ಆಟಗಾರನನ್ನು ಅವರ ಬಳಿ ಕಳುಹಿಸಿದರೂ ಆತನ ಸಾಮರ್ಥ್ಯವನ್ನರಿತು ಬೆಳೆಸುವ ಚಾಕಚಕ್ಯತೆ ಅವರಲ್ಲಿತ್ತು. ಅವರು ಪ್ರತಿಯೊಬ್ಬ ಆಟಗಾರನಲ್ಲಿನ ಪ್ರತಿಭೆಯನ್ನು ಹೊರ ತರುವ ಪರಿಸರವನ್ನು ಸೃಷ್ಟಿಸುತ್ತಿದ್ದರು" ಎಂದು ಆಕಾಶ್ ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ತಿಳಿಸಿದ್ದಾರೆ.
ಧೋನಿ ಒಬ್ಬ ಆಟಗಾರ ಏನು ಮಾಡಬಲ್ಲ ಮತ್ತು ಏನು ಮಾಡಲಾರ ಎನ್ನುವುದನ್ನು ಚೆನ್ನಾಗಿ ತಿಳಿದುಕೊಂಡಿದ್ದರು. ಅದಕ್ಕೆ ದೀಪಕ್ ಚಹಾರ್ ನಿಮಗೆ ಅತ್ಯುತ್ತಮ ಉದಾಹರಣೆ. ಆತನನ್ನು ಒಬ್ಬ ಅತ್ಯುತ್ತಮ ಬೌಲರ್ ಆಗಿ ತಯಾರು ಮಾಡಿದ್ದಾರೆ. ಇದು ಅವರನ್ನು ಒಬ್ಬ ಅದ್ಭುತ ನಾಯಕನನ್ನಾಗಿ ಮಾಡಿದೆ. ನಾಯಕನಾದವನು ಆ ಗುಣವನ್ನು ಹೊಂದಿದ್ದರೆ ಆತ ನಿಮ್ಮ ರಕ್ಕೆಗಳೊಂದಿಗೆ ಆಕಾಶದಲ್ಲಿ ಹಾರಡಲು ಅನುಮತಿ ನೀಡುತ್ತಾನೆ ಎಂದು ಚೋಪ್ರಾ ಧೋನಿ ನಾಯಕತ್ವದ ಕೌಶಲ್ಯಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಎಂಎಸ್ ಧೋನಿ ತಾಳ್ಮೆ ಕಳೆದುಕೊಳ್ಳುವುದು ತುಂಬಾ ವಿರಳ. ಅವರು ಪಂದ್ಯವನ್ನು ಉತ್ತಮವಾಗಿ ರೀಡ್ ಮಾಡುತ್ತಿದ್ದರು. ಯಾವುದೇ ಸಂದರ್ಭದಲ್ಲಿ ತಮ್ಮ ಹಿಡಿತವನ್ನು ಕಳೆದುಕೊಳ್ಳುವುದು ಮತ್ತು ಭಾವನೆಗಳನ್ನು ಆಟಗಾರರ ಮುಂದೆ ತೋರಿಸುತ್ತಿರಲಿಲ್ಲ, ಅಲ್ಲದೆ ಅವರು ಆಟಗಾರರ ಮೇಲೆ ಇಡುತ್ತಿದ್ದ ನಂಬಿಕೆ ನಮಗೆ ವಿಶೇಷವಾದ ನಾಯಕತ್ವವನ್ನು ಕಲಿಸಿಕೊಟ್ಟಿದೆ. ಆಟಗಾರನ ಮೇಲೆ ಸಾಕಷ್ಟು ನಂಬಿಕೆಯಿಡುತ್ತಿದ್ದ ಅವರು ಒಂದು ವೇಳೆ ಏನಾದರೂ ಲೆಕ್ಕಾಚಾರ ತಪ್ಪಾದರೂ ಅದನ್ನು ತಾಳ್ಮೆಯಿಂದ ನಿಯಂತ್ರಿಸುತ್ತಿದ್ದರು. ಈ ಗುಣ ಅವರನ್ನು ಅತ್ಯುತ್ತಮ ನಾಯಕನನ್ನಾಗಿ ಮಾಡಿದೆ ಎಂದಿದ್ದಾರೆ.
ಎಂಎಸ್ ಧೋನಿ ಭಾರತದ ಪರ 200 ಏಕದಿನ ಪಂದ್ಯಗಳಲ್ಲಿ ಮುನ್ನಡೆಸಿದ್ದು, 110 ಜಯ, 74 ಸೋಲು ಕಂಡಿದ್ದಾರೆ. 5 ಪಂದ್ಯಗಳು ಟೈ ಆಗಿವೆ. 60 ಟೆಸ್ಟ್ ಪಂದ್ಯಗಳಲ್ಲಿ 27 ಜಯ, 18 ಸೋಲು ಕಂಡಿದ್ದರೆ, 72 ಟಿ20 ಯಲ್ಲಿ 42 ಜಯ, 28 ಸೋಲು ಕಂಡಿದ್ದಾರೆ.
ಇದನ್ನೂ ಓದಿ: 19 ವರ್ಷದ ಹಿಂದೆ 'ದಾದಾ'ಗಿರಿಯ ಆದಿನ.. ಲಾರ್ಡ್ಸ್ನಲ್ಲಿ ಗಂಗೂಲಿ ಬಟ್ಟೆ ಬಿಚ್ಚಿ ಸೇಡು ತೀರಿಸಿಕೊಂಡಿದ್ದರು..