ಟ್ರೆಂಟ್ಬ್ರಿಡ್ಜ್:ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡ ತಿಂಗಳುಗಟ್ಟಲೆ ದಿನಗಳ ವಿರಾಮದ ಬಳಿಕ ಮತ್ತೆ ಮೈದಾನಕ್ಕಿಳಿಯಲಿದೆ. ಅತಿಥೇಯ ಆಂಗ್ಲರ ವಿರುದ್ಧದ 5 ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯ ಇಂದಿನಿಂದ ಆರಂಭವಾಗಲಿದ್ದು, ಟೆಸ್ಟ್ ಚಾಂಪಿಯನ್ಶಿಪ್ ಸೋಲಿನ ಬಳಿಕ ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಪ್ರಶ್ನೆಗಳು ಮೂಡಿರುವ ಕಾರಣ ಈ ಸರಣಿ ಪ್ರಾಮುಖ್ಯತೆ ಪಡೆದುಕೊಂಡಿದೆ.
ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾದ ಟೀಂ ಇಂಡಿಯಾ ಸದ್ಯ ಇಂಗ್ಲೆಂಡ್ ವಿರುದ್ಧದ ಸರಣಿಗೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ಪಂದ್ಯದ ಮುನ್ನಾದಿನ ಮಾಧ್ಯಮದವರೊಂದಿಗೆ ಮಾತನಾಡಿರುವ ನಾಯಕ ಕೊಹ್ಲಿ, ಪಂದ್ಯಕ್ಕೂ ಮುನ್ನ ಕೆಲ ಹೊತ್ತಲ್ಲಿ ಆಡುವ 11ರ ಬಳಗ ಘೋಷಿಸುವುದಾಗಿ ತಿಳಿಸಿದ್ದಾರೆ.
ಗಾಯಗೊಂಡಿರುವ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಬದಲಿಗೆ ಮತ್ತೋರ್ವ ಕನ್ನಡಿಗ ಕೆ.ಎಲ್.ರಾಹುಲ್ ಕಣಕ್ಕಿಳಿಯವುದು ಬಹುತೇಕ ಖಚಿತವಾಗಿದೆ. ಇನ್ನುಳಿದಂತೆ ಇಬ್ಬರು ಸ್ಪಿನ್ನರ್ಗಳು ಹಾಗೂ ಮೂವರು ವೇಗದ ಬೌಲರ್ಗಳಿಗೆ ಅವಕಾಶ ಸಿಗುವ ನಿರೀಕ್ಷೆಯಿದೆ. ಈ ನಡುವೆ ಹನುಮ ವಿಹಾರಿ, ಬೌಲರ್ಗಳಾದ ಮೊಹಮದ್ ಸಿರಾಜ್ ಅಥವಾ ಶಾರ್ದುಲ್ ಠಾಕೂರ್ 11ರ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆಯೇ ಎಂಬುದು ಪಂದ್ಯಕ್ಕೂ ಮುನ್ನವೇ ಗೊತ್ತಾಗಲಿದೆ.
ಇಂಗ್ಲೆಂಡ್ ತಂಡದಲ್ಲಿ ನಾಯಕ ಜೋ ರೂಟ್ ಜೊತೆಗೆ ಅನುಭವಿ ವೇಗದ ಬೌಲರ್ಗಳಾದ ಜೇಮ್ಸ್ ಆ್ಯಂಡರ್ಸನ್ ಹಾಗೂ ಸ್ಟುವರ್ಟ್ ಬ್ರಾಡ್ ಪ್ರಮುಖ ಅಸ್ತ್ರಗಳಾಗಿದ್ದಾರೆ. ಸದ್ಯ ಕ್ರಿಕೆಟ್ನಿಂದ ವಿರಾಮ ಪಡೆದಿರುವ ಬೆನ್ ಸ್ಟೋಕ್ಸ್ ತಂಡದಲ್ಲಿ ಇರದಿರುವುದು ಆಂಗ್ಲರಿಗೆ ಆಲ್ರೌಂಡರ್ ವಿಭಾಗದಲ್ಲಿ ಕೊಂಚ ಹಿನ್ನಡೆಯಾಗಿ ಪರಿಣಮಿಸಲಿದೆ.