ಸೌತಾಂಪ್ಟನ್(ಇಂಗ್ಲೆಂಡ್):ಆತಿಥೇಯ ಇಂಗ್ಲೆಂಡ್ ವಿರುದ್ಧ ಇಂದಿನಿಂದ ಮೂರು ಟಿ-20 ಪಂದ್ಯಗಳ ಸರಣಿ ನಡೆಯಲಿದ್ದು, ಮೊದಲ ಪಂದ್ಯಕ್ಕಾಗಿ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಸರ್ವ ಸನ್ನದ್ಧವಾಗಿದೆ. ಮುಂಬರುವ ಟಿ-20 ವಿಶ್ವಕಪ್ ದೃಷ್ಟಿಯಿಂದ ಈ ಸರಣಿ ಮಹತ್ವ ಪಡೆದುಕೊಂಡಿದ್ದು, ಹೀಗಾಗಿ, ಹೊಸ ಹೊಸ ಪ್ರತಿಭೆಗಳಿಗೆ ಮಣೆ ಹಾಕಲಾಗುತ್ತಿದೆ.
ಇಂಗ್ಲೆಂಡ್ ವಿರುದ್ಧದ ಇಂದಿನ ಪಂದ್ಯಕ್ಕಾಗಿ ಟೀಂ ಇಂಡಿಯಾ ಆಡುವ 11ರ ಬಳಗದಲ್ಲಿ ವೇಗದ ಬೌಲರ್ ಅರ್ಷದೀಪ್ ಸಿಂಗ್ ಚಾನ್ಸ್ ಪಡೆದುಕೊಂಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಅರ್ಷದೀಪ್ ಸಿಂಗ್ ಇಂಗ್ಲೆಂಡ್ ವಿರುದ್ಧ ಮೊದಲ ಟಿ-20 ಪಂದ್ಯದಲ್ಲಿ ಆಡಲಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ನಡೆದ 5 ಟಿ-20 ಪಂದ್ಯಗಳಿಗೆ ಅರ್ಷದೀಪ್ ಆಯ್ಕೆಯಾಗಿದ್ದರು. ಆದರೆ, ಆಡುವ 11ರ ಬಳಗದಲ್ಲಿ ಚಾನ್ಸ್ ಪಡೆದುಕೊಂಡಿರಲಿಲ್ಲ. ಇದಾದ ಬಳಿಕ ಇತ್ತೀಚೆಗೆ ಐರ್ಲೆಂಡ್ ವಿರುದ್ಧದ ಪ್ರವಾಸಕ್ಕೂ ಆಯ್ಕೆಯಾಗಿದ್ದ ಈತ ಅವಕಾಶ ವಂಚಿತರಾಗಿದ್ದರು. ಆದರೆ, ಇದೀಗ ಬಲಿಷ್ಠ ತಂಡದ ವಿರುದ್ಧವೇ ಪದಾರ್ಪಣೆ ಮಾಡುತ್ತಿದ್ದಾರೆ. ಕ್ಯಾಪ್ಟನ್ ರೋಹಿತ್ ಶರ್ಮಾ ಟೀಂ ಇಂಡಿಯಾ ಕ್ಯಾಪ್ ನೀಡಿ, ಸ್ವಾಗತಿಸಿದ್ದಾರೆ.
ಇದನ್ನೂ ಓದಿರಿ:50ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಗಂಗೂಲಿ.. ದಾದಾ ಜೊತೆಗಿನ ಬಾಂಧವ್ಯ ನೆನೆದ ಸಚಿನ್!
2022ರ ಐಪಿಎಲ್ನಲ್ಲಿ ಮಾರಕ ಯಾರ್ಕರ್ಗಳಿಂದ ಕ್ರಿಕೆಟ್ ದಿಗ್ಗಜರ ಗಮನ ಸೆಳೆದಿರುವ ಅರ್ಷದೀಪ್ ತಾವು ಆಡಿರುವ 14 ಪಂದ್ಯಗಳಿಂದ 10 ವಿಕೆಟ್ ಪಡೆದಿದ್ದಾರೆ. ಅರ್ಷದೀಪ್ ಸಿಂಗ್ ಟೀಂ ಇಂಡಿಯಾದ ಮಾರಕ ಬೌಲರ್ ಜಸ್ಪ್ರೀತ್ ಬುಮ್ರಾ ರೀತಿ ಬೌಲ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ.