ಅಹಮದಾಬಾದ್: ಆರ್ಸಿಬಿ ತಂಡದ ಸ್ಫೋಟಕ ಬ್ಯಾಟ್ಸ್ಮನ್ ಎಬಿ ಡಿ ವಿಲಿಯರ್ಸ್ ಸಾಮರ್ಥ್ಯವನ್ನು ನಾಯಕ ವಿರಾಟ್ ಕೊಹ್ಲಿ ಕೊಂಡಾಡಿದ್ದು, ಅವರು ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾಗಿದ್ದಾರೆ ಅನ್ನಿಸುತ್ತಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಎಬಿಡಿ 42 ಎಸೆತಗಳಲ್ಲಿ ಅಜೇಯ 75 ರನ್ ಗಳಿಸಿ ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಆರ್ಸಿಬಿ ಗೆದ್ದ ನಂತರ ಮಾತನಾಡಿರುವ ವಿರಾಟ್ ಕೊಹ್ಲಿ, ಐದು ತಿಂಗಳಿಂದ ಎಬಿ ಡಿ ವಿಲಿಯರ್ಸ್ ಕ್ರಿಕೆಟ್ ಪಂದ್ಯಗಳನ್ನು ಆಡಿರಲಿಲ್ಲ. ಈಗಲೂ ಎಬಿಡಿ ಬ್ಯಾಟಿಂಗ್ ನೋಡಿದರೆ ಮುಂದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡುವುದಿಲ್ಲ ಎಂದು ನನಗೆ ಅನ್ನಿಸುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಐಪಿಎಲ್ನಲ್ಲಿ 5000 ರನ್ಸ್ ಪೂರೈಸಿದ ಮಿಸ್ಟರ್ 360
ಡಿವಿಲಿಯರ್ಸ್ ನಮಗೆ ಆಸ್ತಿ. ಈಗ ಅವರು ಆಡುತ್ತಿರುವ ಇನ್ನಿಂಗ್ಸ್ಗಳನ್ನು ನೋಡಿ ಎಂದು ಕೊಹ್ಲಿ ಹೇಳಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಡಿವಿಲಿಯರ್ಸ್ ಒಮ್ಮೆ ನೀವು ಯಾವುದಾದರೂ ಪಂದ್ಯಾವಳಿಯಲ್ಲಿ ಭಾಗವಹಿಸಿದರೆ ನಿಮ್ಮನ್ನು ನೀವು ಮ್ಯಾನೇಜ್ ಮಾಡುವುದಕ್ಕೆ ಹೆಚ್ಚಿನ ಗಮನ ಕೊಡಬೇಕಾಗುತ್ತದೆ. ಪ್ರತಿ ಪಂದ್ಯದಲ್ಲಿಯೂ ನೀವು ಫ್ರೆಶ್ ಆಗಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಆಯಾಸವಾದಾಗ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದು ಸಾಧ್ಯವಿಲ್ಲ ಎಂದಿದ್ದಾರೆ.
ನಾನು ಐಪಿಎಲ್ ಆಡಲು ಹೊರಡುವ ಮೊದಲು ಮನೆಯಲ್ಲಿ ಹಲವು ಕೆಲಸಗಳನ್ನು ಮಾಡಿದ್ದೇನೆ. ನನ್ನ ಕೋಣೆಯಲ್ಲಿ ಟ್ರೆಡ್ಮಿಲ್ಗಳಿದ್ದು, ಅವುಗಳನ್ನು ಬಳಸಿಕೊಳ್ಳುತ್ತೇನೆ. ಬ್ಯಾಟಿಂಗ್ ಮಾಡಲು ಹೊರಟಾಗ ತುಂಬಾ ತಾಜಾ ಆಗಿರುತ್ತೇನೆ ಎಂದಿದ್ದಾರೆ.
ಹಿಂದಿನ ಪಂದ್ಯದಲ್ಲಿ ಕಗಿಸೊ ರಬಾಡಾ ಎಸೆತದಲ್ಲಿ ಹೊಡೆದ ಮಿಡ್ ವಿಕೆಟ್ ಹೊಡೆತ ಅತ್ಯುತ್ತಮವಾಗಿತ್ತು ಎಂದು ಎಬಿಡಿ ಹೇಳಿದ್ದಾರೆ.