ಅಹಮದಾಬಾದ್ (ಗುಜರಾತ್):ಐಸಿಸಿ ವಿಶ್ವಕಪ್ 2023 ಕ್ರಿಕೆಟ್ ಹಬ್ಬ ಅಕ್ಟೋಬರ್ 5ರಿಂದ ಪ್ರಾರಂಭಗೊಂಡಿದೆ. ಇಂದು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಕಣಕ್ಕಿಳಿಯಲಿದೆ. ಟೀಂ ಇಂಡಿಯಾ ತನ್ನ ಮುಂದಿನ ಪಂದ್ಯವನ್ನು ಪಾಕಿಸ್ತಾನದ ಜೊತೆ ಆಡಲಿದೆ. ಅಕ್ಟೋಬರ್ 14ರಂದು ನಡೆಯುವ ಈ ಬಹುನಿರೀಕ್ಷಿತ ಪಂದ್ಯಕ್ಕೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 14,000 ಟಿಕೆಟ್‌ಗಳನ್ನು ಬಿಡುಗಡೆ ಮಾಡುತ್ತಿರುವುದಾಗಿ ಶನಿವಾರ ತಿಳಿಸಿದೆ.
ವಿಶ್ವದ ಅತಿ ದೊಡ್ಡ ಮತ್ತು 1 ಲಕ್ಷದ 32 ಸಾವಿರ ಆಸನ ಸಾಮರ್ಥ್ಯ ಹೊಂದಿರುವ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂಡಿಯಾ vs ಪಾಕಿಸ್ತಾನ ಮ್ಯಾಚ್ ನಡೆಯಲಿದೆ. "ಪಂದ್ಯದ ಟಿಕೆಟ್ಗಳ ಮಾರಾಟವು ಅಕ್ಟೋಬರ್ 8, 2023ರಂದು ಮಧ್ಯಾಹ್ನ 12 ಗಂಟೆಯಿಂದ ಪ್ರಾರಂಭವಾಗುತ್ತದೆ. ಕ್ರಿಕೆಟ್ ಅಭಿಮಾನಿಗಳು ಅಧಿಕೃತ ಟಿಕೆಟ್ ವೆಬ್ಸೈಟ್ https://tickets.cricketworldcup.com ನಲ್ಲಿ ಟಿಕೆಟ್‌ಗಳನ್ನು ಖರೀದಿಸಬಹುದು" ಎಂದು ಬಿಸಿಸಿಐ ಮಾಧ್ಯಮ ಪ್ರಕಟಣೆ ಹೊರಡಿಸಿದೆ.
ಭಾರತ-ಪಾಕಿಸ್ತಾನದ ನಡುವಿನ ಪಂದ್ಯ ನೋಡಲು ಕೋಟ್ಯಂತರ ಭಾರತೀಯರು ಕಾದುಕುಳಿತಿದ್ದಾರೆ. ಉಭಯ ದೇಶಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಉಲ್ಬಣಿಸಿದ ಬಳಿಕ ಎರಡು ದೇಶಗಳ ನಡುವಿನ ದ್ವಿಪಕ್ಷೀಯ ಸರಣಿಗಾಗಿ ಕ್ರಿಕೆಟ್ ತಂಡಗಳ ಪ್ರವಾಸ ಇಂದಿಗೂ ಸಾಧ್ಯವಾಗಿಲ್ಲ. ಐಸಿಸಿ, ಎಸಿಸಿ ಟೂರ್ನಿಗಳಲ್ಲಿ ಮಾತ್ರ ತಟಸ್ಥ ಸ್ಥಳಗಳಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿಯಾಗುತ್ತಿವೆ. ಕೊನೆಯ ಬಾರಿ 2016ರ ಟಿ-ಟ್ವೆಂಟಿ ವಿಶ್ವಕಪ್‌ಗಾಗಿ ಶಾಹಿದ್ ಅಫ್ರಿದಿ ನಾಯಕತ್ವದ ಪಾಕಿಸ್ತಾನ ತಂಡ ಭಾರತಕ್ಕೆ ಆಗಮಿಸಿತ್ತು.
ಇದನ್ನೂ ಓದಿ:Cricket World Cup; ನಾಳೆ ವಿಶ್ವಕಪ್ನಲ್ಲಿ ಬಿಗ್ ಫೈಟ್.. ಚೆಪಾಕ್ನಲ್ಲಿ ಆಸ್ಟ್ರೇಲಿಯಾ- ಭಾರತ ಕಾದಾಟ, ಗಿಲ್ ಗೈರು ಸಾಧ್ಯತೆ
ಇದೀಗ 7 ವರ್ಷಗಳ ಬಳಿಕ ಪಾಕಿಸ್ತಾನ ತಂಡ ಭಾರತಕ್ಕೆ ಆಗಮಿಸಿದ್ದು, ಮೊದಲ ಪಂದ್ಯಲ್ಲೇ ನೆದರ್ಲೆಂಡ್ ವಿರುದ್ಧ ಗೆಲುವು ದಾಖಲಿಸಿದೆ. ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಅಕ್ಟೋಬರ್ 6ರಂದು ನಡೆದ ಮ್ಯಾಚ್ನಲ್ಲಿ 81 ರನ್ಗಳಿಂದ ಪಾಕಿಸ್ತಾನ ಗೆದ್ದಿದೆ. ವಿಶೇಷವೆಂದರೆ, ಪಾಕಿಸ್ತಾನದ ವಿಶ್ವಕಪ್ ತಂಡದಲ್ಲಿರುವ ಹದಿನೈದು ಮಂದಿ ಸದಸ್ಯರ ಪೈಕಿ ಈ ಹಿಂದೆ ಭಾರತ ಪ್ರವಾಸ ಕೈಗೊಂಡಿರುವುದು ಮೊಹಮ್ಮದ್ ನವಾಜ್ ಹಾಗೂ ಸಲ್ಮಾನ್ ಅಲಿ ಆಘಾ ಮಾತ್ರವೇ.
ಇಂದು ಆಸ್ಟ್ರೇಲಿಯಾ ವಿರುದ್ಧ ಭಾರತ:ಇಂದು ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಕಣಕ್ಕಿಳಿಯುವ ಮೂಲಕ ವಿಶ್ವಕಪ್ ಅಭಿಯಾನವನ್ನು ಪ್ರಾರಂಭಿಸಲಿದೆ. ಆಸ್ಟ್ರೇಲಿಯಾ ವಿರುದ್ಧ ಈಚೆಗಷ್ಟೇ ಏಕದಿನ ಸರಣಿ ಗೆದ್ದ ಹುಮ್ಮಸ್ಸಿನಲ್ಲಿರುವ ಭಾರತ ಕ್ರಿಕೆಟ್ ತಂಡ, ಅದೇ ತಂಡದ ವಿರುದ್ಧ ಇಂದು ವಿಶ್ವಕಪ್ ಆಡಲಿದೆ.
ಪಾಕಿಸ್ತಾನ ತಂಡ: ಬಾಬರ್ ಅಜಂ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಇಮಾಮ್ ಉಲ್ ಹಕ್, ಫಕಾರ್ ಜಮಾನ್, ಇಫ್ತಿಕಾರ್ ಅಹ್ಮದ್, ಮೊಹಮ್ಮದ್ ನವಾಜ್, ಶದಾಬ್ ಖಾನ್, ಹಸನ್ ಅಲಿ, ಹ್ಯಾರೀಸ್ ರೌಫ್, ಮೊಹಮ್ಮದ್ ವಾಸಿಂ, ಶಹೀನ್ ಅಫ್ರಿಧಿ, ಸೌದ್ ಶಕೀಲ್, ಸಲ್ಮಾನ್ ಅಲಿ ಆಘಾ, ಉಸ್ಮಾನ್ ಮೀರ್, ಅಬ್ದುಲ್ಲಾ ಶಫೀಕ್
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ (ಉಪನಾಯಕ), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್.
ಇದನ್ನೂ ಓದಿ:ಆಸೀಸ್ ವಿರುದ್ಧ ಶುಭ್ಮನ್ ಗಿಲ್ ಆಡ್ತಾರಾ?: ಮಾಧ್ಯಮಗೋಷ್ಟಿಯಲ್ಲಿ ನಾಯಕ ರೋಹಿತ್ ಶರ್ಮಾ ಹೇಳಿದ್ದಿಷ್ಟು..