ಹೈದರಾಬಾದ್ :ಭಾರತದ ಆಸ್ಟ್ರೇಲಿಯಾ ಪ್ರವಾಸ ಇಂದಿಗೆ ಕೊನೆಗೊಂಡಿದೆ. ಭಾರತ ಹಾಗೂ ವಿಶ್ವ ಕ್ರಿಕೆಟ್ ಮರೆಯದಂತಹ ಒಂದು ಅದ್ಭುತ ಪ್ರವಾಸವಿದು. ಪ್ರವಾಸದ ಆರಂಭದಲ್ಲಿ ಏಕದಿನ ಸರಣಿ ಗೆದ್ದು ಆಸೀಸ್ ಮುನ್ನಡೆ ಸಾಧಿಸಿದ್ರೆ, ಟಿ-20ಯಲ್ಲಿ ಭಾರತ ಬೌನ್ಸ್ ಬ್ಯಾಕ್ ಮಾಡುವ ಮೂಲಕ ತನ್ನ ಶಕ್ತಿ ತೋರಿಸಿತ್ತು. ಮತ್ತೆ ಮೊದಲ ಟೆಸ್ಟ್ನಲ್ಲಿ 36 ರನ್ಗಳಿಗೆ ಆಲೌಟ್ ಆಗಿ ಹೀನಾಯವಾಗಿ ಸೋತ ಭಾರತ ನಂತರದ ಟೆಸ್ಟ್ಗಳಲ್ಲಿ ಗಾಯಗಳ ನೋವಿನಲ್ಲೂ ಪುಟಿದೇಳುವ ಮೂಲಕ ಟೆಸ್ಟ್ 2-1ರಲ್ಲಿ ಸರಣಿ ತನ್ನದಾಗಿಸಿಕೊಂಡಿದೆ. ಯಂಗ್ ಇಂಡಿಯಾ ತನ್ನ ಸಾಮರ್ಥ್ಯ ಪ್ರದರ್ಶಿಸುವ ಮೂಲಕ ಭಾರತ ಟೆಸ್ಟ್ ಕ್ರಿಕೆಟ್ನ ಹೊಸ ಸೂಪರ್ ಪವರ್ ರಾಷ್ಟ್ರ ಎಂಬ ಸಂದೇಶವನ್ನು ವಿಶ್ವಕ್ಕೆ ಸಾರಿದೆ.
ಆಸ್ಟ್ರೇಲಿಯಾ ಪ್ರವಾಸವೆಂದರೆ ಎಂತಹ ದೇಶಕ್ಕಾದ್ರೂ ಭಯ ಎನ್ನುವುದು ಇದ್ದೇ ಇರುತ್ತದೆ. ವಿಶ್ವದ ಅತ್ಯಂತ ಬಲಿಷ್ಠ ಕ್ರಿಕೆಟ್ ತಂಡಗಳು ಆಸೀಸ್ ಪ್ರವಾಸಕ್ಕಾಗಿ ವರ್ಷಪೂರ್ತಿ ಭರ್ಜರಿ ತಯಾರಿ ನಡೆಸುತ್ತವೆ. ದಿ ಬೆಸ್ಟ್ ತಂಡವನ್ನು ಆಸೀಸ್ ಪ್ರವಾಸಕ್ಕೆ ಕಳಿಸುತ್ತಾರೆ. ಯಾಕೆಂದರೆ, ಆಸೀಸ್ ತಂಡ ತವರಿನಲ್ಲಿ ಅತ್ಯಂತ ಬಲಿಷ್ಠ. ಫಾಸ್ಟ್, ಬೌನ್ಸಿ ಪಿಚ್ನಲ್ಲಿ ಅವರು ಆಡುವ ಆಟ ಅಮೋಘ. ವಿಶ್ವವನ್ನು ಗೆದ್ದುಕೊಂಡು ಬಂದಂತಹ ತಂಡಗಳು ಕಾಂಗರೂಗಳ ನಾಡಲ್ಲಿ ಗರ್ವಭಂಗ ಅನುಭವಿಸುತ್ತವೆ.
ಇದು ಕಳೆದ ಮೂರು ದಶಕದಿಂದ ಪ್ರವಾಸಿ ತಂಡಗಳು ಕಾಂಗರೂ ನಾಡಲ್ಲಿ ಸೋಲು ಅನುಭವಿಸುವುದು ಸಾಮಾನ್ಯವಾಗಿಬಿಟ್ಟಿದೆ. ಅದಕ್ಕಾಗಿಯೇ ಈ ಹಿಂದೆ ತಂಡಗಳು ಆಸೀಸ್ ಪ್ರವಾಸವೆಂದ್ರೆ ಎರಡು ತಿಂಗಳು ಮುಂಚಿತವಾಗಿ ಹೋಗಿ ಅಲ್ಲಿಯ ವಾತಾವರಣಕ್ಕೆ ಹೊಂದಿಕೊಳ್ಳಲು ಬಯಸುತ್ತಿದ್ದವು. ಅನೇಕ ಅಭ್ಯಾಸ ಪಂದ್ಯಗಳನ್ನು ಆಡಿದ್ರೂ ಕಾಂಗರೂಗಳ ಆಟ ಅವರ ಮೈಂಡ್ ಗೇಮ್ನಿಂದ ಪ್ರವಾಸಿ ತಂಡಗಳು ಹೀನಾಯವಾಗಿ ಸೋಲುಂಡು ಬರುವುದು ಸಂಪ್ರದಾಯ.
ಯಾಕೆಂದರೆ, ಇಲ್ಲಿ ಪ್ರತಿ ಮೈದಾನದಲ್ಲಿ ಆಡಬೇಕಾದ್ರೂ ನಿಮ್ಮ ಆಟದ ಶೈಲಿಯನ್ನು ಬದಲಾಯಿಸಬೇಕು. ಮೈದಾನದ ವಾಸ್ತು ತಕ್ಕಂತೆ ಬೌಲಿಂಗ್,ಫೀಲ್ಡಿಂಗ್ ಸೆಟ್ ಮಾಡಿಕೊಳ್ಳಬೇಕು. ಅಡಿಲೇಡ್ನಲ್ಲಿ ಲಾಂಗ್ ಆನ್, ಲಾಂಗ್ ಆಫ್ ಬೌಂಡರಿ ತುಂಬ ಉದ್ಧವಿರುವ ಕಾರಣ ಇಲ್ಲಿ ಸ್ಟ್ರೇಟ್ ಬೌಂಡರಿ ಕಷ್ಟ. ಇನ್ನೂ ಮೆಲ್ಬೋರ್ನ್ ಮೈದಾನ ಆಫ್ ಸೈಡ್, ಆನ್ ಸೈಡ್ ಬೌಂಡರಿ ಅತ್ಯಂತ ಲಾಂಗ್ ಆಗಿರುವುದರಿಂದ ಫುಲ್, ಹುಕ್ ಮಾಡುವಾಗ ಸ್ವಲ್ಪ ಎಚ್ಚರಿಕೆಯಿಂದಿರಬೇಕು.
ಸಿಡ್ನಿ ಸ್ವಲ್ಪ ಸ್ಪಿನ್ ಸ್ನೇಹಿ, ಬ್ರಿಸ್ಬೇನ್ ಮತ್ತದೇ ಬೌನ್ಸಿ ಟ್ರ್ಯಾಕ್ ಬೌಲ್ ಎಲ್ ಬಂದ್ ಹೇಗ್ ಹೋಯ್ತು ಎಂಬುದು ತಿಳಿಯುವಷ್ಟರಲ್ಲಿ ಅಂಪೈರ್ ಒಂದು ಕೈ ಮೇಲೆತ್ತಿರುತ್ತಾರೆ. ಹಾಗಾಗಿ ಆಸೀಸ್ ಪ್ರವಾಸ, ಪ್ರವಾಸಿ ತಂಡಗಳಿಗೆ ಕಬ್ಬಿಣದ ಕಡಲೇ. ಎಷ್ಟೇ ತಯಾರಿ ಮಾಡಿಕೊಂಡು ಬಂದ್ರು ಇವರ ಪಿಚ್ಗಳ ಮರ್ಮ ತಿಳಿಯದೆ ಪ್ರವಾಸಿಗರು ಸೋಲು ಅನುಭವಿಸುತ್ತಾರೆ.
ಆದರೆ, ಭಾರತೀಯರು ಮಾತ್ರ ಈ ಸಲ ಆಸೀಸ್ನ ಲೆಕ್ಕಚಾರವನ್ನು ತಲೆಕೆಳಗೆ ಮಾಡುವ ಮೂಲಕ, ಯಂಗ್ ಇಂಡಿಯಾ ಟೆಸ್ಟ್ನಲ್ಲಿ ಹೊಸ ಶಕ್ತಿಯಾಗಿ ಹೊರಹೊಮ್ಮಿದೆ. ಏಕದಿನ, ಟಿ20 ಮತ್ತು ಟೆಸ್ಟ್ ಮೂರು ಸರಣಿಯನ್ನು ಲೆಕ್ಕ ಹಾಕಿದ್ರೆ ಭಾರತ ಆಸೀಸ್ಗಿಂತ ಒಂದು ಕೈ ಮೇಲಿದೆ. ಆಸೀಸ್ ಎರಡು ಏಕದಿನ ಒಂದು ಟಿ20 ಮತ್ತು ಒಂದು ಟೆಸ್ಟ್ ಗೆಲ್ಲುವ ಮೂಲಕ 4 ಪಂದ್ಯ ಗೆದ್ದರೆ ಭಾರತ ಒಂದು ಏಕದಿನ ಎರಡು ಟಿ20 ಮತ್ತು ಎರಡು ಟೆಸ್ಟ್ ಗೆಲ್ಲುವ ಮೂಲಕ 5 ಜಯ ಸಾಧಿಸುವ ಮೂಲಕ ಸರ್ವರೀತಿಯಲ್ಲೂ ಆಸ್ಟ್ರೇಲಿಯಾವನ್ನು ಹಿಂದಿಕ್ಕಿದೆ.
ಟಿ-20 ಮಾತ್ರವಲ್ಲ ಯುವಕರು ಟೆಸ್ಟ್ನಲ್ಲೂ ದಿ ಬೆಸ್ಟ್ :ಸದ್ಯ ಭಾರತದಲ್ಲಿ ಕ್ರಿಕೆಟ್ ಆಡುವ ಪ್ರತಿಯೊಬ್ಬ ಆಟಗಾರ ಬಯಸುವುದು ಹೇಗಾದರು ಮಾಡಿ ಐಪಿಎಲ್ ಆಡಬೇಕು. ಅದಕ್ಕೆ ತಕ್ಕಂತೆ ತನ್ನ ಬ್ಯಾಟಿಂಗ್ ಶೈಲಿ ಬದಲಿಸಿಕೊಳ್ಳಬೇಕು, ಟಿ-20 ಮಾದರಿಗೆ ಬೇಕಾದ ಎಲ್ಲ ಮೂಲಭೂತ ಕಲೆಗಳನ್ನು ಕರಗತ ಮಾಡಿಕೊಳ್ಳಬೇಕು, ಈ ಮೂಲಕ ಭಾರತವನ್ನು ಪ್ರತಿನಿಧಿಸಬೇಕೆಂಬುದು ಅವರಾಸೆ. ಇದರಿಂದ ಟೆಸ್ಟ್ ಕ್ರಿಕೆಟ್ ನಿರ್ನಾಮ ಹಂತದಲ್ಲಿದೆ ಎಂಬುದು ಕ್ರಿಕೆಟ್ ತಜ್ಞರ ವಾದವಾಗಿತ್ತು. ಆದರೆ, ಈ ಸಲದ ಆಸೀಸ್ ಪ್ರವಾಸ ಈ ಎಲ್ಲ ಅಪವಾದಗಳಿಗೆ ಬ್ರೇಕ್ ಹಾಕಿದೆ.
ಟಿ-20ಯಲ್ಲಿ ಮಿಂಚಿದ ಆಟಗಾರರು ತಾವು ಸಮರ್ಥವಾಗಿ ಟೆಸ್ಟ್ ಸಹ ಆಡಬಲ್ಲೆವು ಎಂಬುದನ್ನು ತೋರಿಸಿದ್ದಾರೆ. ನೋವಿನಿಂದ ಟೀಂ ಇಂಡಿಯಾದ ಅರ್ಧ ಅನುಭವಿ ಆಟಗಾರರು ಸರಣಿಯಿಂದ ಹೊರಗುಳಿದ ಸಮಯದಲ್ಲಿ ತಮಗೆ ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ಬಲಿಷ್ಠ ಆಸೀಸ್ ತಂಡಕ್ಕೆ ಸೋಲಿನ ರುಚಿ ತೋರಿಸುವ ಮೂಲಕ ಯುವ ಆಟಗಾರರು ಟಿ20 ಹಾಗೂ ಟೆಸ್ಟ್ ಎರಡರಲ್ಲೂ ಮಿಂಚಿದ್ದಾರೆ.
ಗಾಯಗಳ ನೋವಿನಲ್ಲೂ ನಗು ಕಂಡ ಭಾರತ..:ಆಸೀಸ್ ಸರಣಿ ಭಾರತಕ್ಕೆ ತಲೆನೋವಾಗಿ ಕಾಡಿದ್ದು ಗಾಯದ ಸಮಸ್ಯೆ. ಎಲ್ಲಾ ಹಿರಿಯ ಬೌಲರ್ಗಳು ಗಾಯದ ಸಮಸ್ಯೆಯಿಂದ ಒಂದೊಂದೇ ಪಂದ್ಯದ ನಂತರ ಹೊರಗುಳಿಯುತ್ತ ಬಂದ್ರು. ಸರಣಿ ಆರಂಭವಾಗುವ ಮೊದಲು ಭುವನೇಶ್ವರ್ ಕುಮಾರ್, ಇಶಾಂತ್ ಶರ್ಮಾ ಗಾಯದಿಂದ ಸರಣಿ ಮಿಸ್ ಮಾಡಿಕೊಂಡ್ರು. ಸರಣಿ ಆರಂಭವಾದ ನಂತರ ಮೊಹ್ಮದ್ ಶಮಿ, ಬುಮ್ರಾ, ರವೀಂದ್ರ ಜಡೇಜಾ ಮತ್ತು ಆಲ್ರೌಂಡರ್ ಹನುಮ ವಿಹಾರಿ ಗಾಯದಿಂದ ಸರಣಿಯಿಂದ ಹೊರನಡೆದ್ರೆ, ಅಶ್ವಿನ್ ಗಾಯದಿಂದಾಗಿ ಬೆಂಚ್ ಕಾಯುವಂತಾಯ್ತು.
ಆದರೂ ಇವರಿಬ್ಬರ ಸಾಹಸದಿಂದ ಮೂರನೇ ಪಂದ್ಯದಲ್ಲಿ ಭಾರತ ಸೋಲಿನಿಂದ ಪಾರಾಗಿತ್ತು ಎನ್ನುವುದನ್ನು ಮರೆಯುವಂತಿಲ್ಲ. ಇನ್ನೂ ಬ್ಯಾಟಿಂಗ್ ವಿಭಾಗದಲ್ಲೂ ನೋವಿನ ಸಮಸ್ಯೆ ಭಾರತೀಯರಿಗೆ ಕಾಡಿತು. ಮೊದಲೆರಡು ಟೆಸ್ಟ್ ರೋಹಿತ್ ಶರ್ಮಾ ಗಾಯದಿಂದ ಆಡಲಿಲ್ಲ. ಮೊದಲ ಟೆಸ್ಟ್ ಆಡಿದ ನಾಯಕ ಕೊಹ್ಲಿ ತಂದೆಯಾಗುವ ಸಿರಿಯಲ್ಲಿದ್ದ ಕಾರಣ ಮೂರು ಟೆಸ್ಟ್ಗೆ ಗೈರಾದ್ರು. ಕೆ ಎಲ್ ರಾಹುಲ್ ಗಾಯದಿಂದ ಸರಣಿಯಿಂದ ಹೊರ ಬಿದ್ರು. ಈ ಸಂದರ್ಭದಲ್ಲಿ ಶುಭಮನ್ ಗಿಲ್ ಆರಂಭಿಕನಾಗಿ ಕಣಕ್ಕಿಳಿದು ಗಮನಸೆಳೆದ್ರು.
ರಿಷಭ್ ಪಂತ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಸಮಯೋಚಿತ ಆಟದಿಂದ ಭಾರತ ಆಸೀಸ್ ಗರ್ವಭಂಗಕ್ಕೆ ಕಾರಣರಾದ್ರು. ಆಸೀಸ್ ಸರಣಿಯಲ್ಲಿ ಚೊಚ್ಚಲ ಟೆಸ್ಟ್ ಆಡಿದ ಮೊಹ್ಮದ್ ಸಿರಾಜ್, ಹಿರಿಯ ಬೌಲರ್ಗಳು ಅನುಪಸ್ಥಿತಿಯಲ್ಲಿ ಭಾರತ ತಂಡದ ಬೌಲಿಂಗ್ ಸಾರಥ್ಯವಹಿಸಿದ್ರು. ತಂದೆ ಕಳೆದುಕೊಂಡ ನೋವು,ಜೊತೆಗೆ ಆಸೀಸ್ ಪ್ರೇಕ್ಷಕ ಕಿರಾತಕರಿಂದ ನಿಂದನೆಯ ನಡುವೆಯೂ ಭಾರತ ತಂಡಕ್ಕಾಗಿ ತಮ್ಮ ಸರ್ವಸ್ವವನ್ನು ಧಾರೆಯೆರೆಯುವ ಮೂಲಕ ಆಸೀಸ್ ಪಾಲಿಗೆ ಕಂಠಕವಾದರು.
ಶಾರ್ದೂಲ್, ನಟರಾಜನ್ ಮತ್ತು ಸುಂದರ್ ಸಹ ರಹಾನೆ ಚೆಂಡು ನೀಡಿದಾಗಲೆಲ್ಲ ಕಾಂಗೂರಗಳ ಮೇಲೆ ಸವಾರಿ ಮಾಡಿದ್ರು. ಅರ್ಧ ತಂಡ ನೋವಿನಿಂದ ಹೊರಬಿದ್ದರೂ ಭಾರತೀಯರು ದಿಟ್ಟತನದ ಹೋರಾಟ, ಸಫಲೊಪ್ಪಿಕೊಳ್ಳದ ಮನೋಭಾವದಿಂದ ಆಸೀಸ್ ನೆಲದಲ್ಲಿ ಅದ್ಭುತ ಪ್ರದರ್ಶನ ನೀಡಿ ಭಾರತ ಟೆಸ್ಟ್ ಕ್ರಿಕೆಟ್ನ ಭವಿಷ್ಯ ಉಜ್ವಲವಾಗಿದೆ ಎಂಬುದನ್ನು ಜಗತ್ತಿಗೆ ತೋರಿಸಿದರು.
ಆಘಾತಕಾರಿ ಸೋಲು, ನಂತರ ಭಾರತ ನಡೆದದ್ದೇ ದಾರಿ :ಅಡಿಲೇಡ್ನಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ಮೊದಲ ಅಹರ್ನಿಶಿ ಟೆಸ್ಟ್ ಭಾರತ ಕನಸಿನಲ್ಲು ನೆನಪಿಸಿಕೊಳ್ಳಲು ಇಷ್ಟಪಡುವುದಿಲ್ಲ. ಮೊದಲ ಟೆಸ್ಟ್ನ ಎರಡನೇ ಇನ್ನಿಂಗ್ಸ್ನಲ್ಲಿ ಭಾರತ ಕೇವಲ 36ರನ್ಗೆ ಆಲೌಟ್ ಆಗುವ ಮೂಲಕ ಅತ್ಯಂತ ಕಳಪೆ ಪ್ರದರ್ಶನದಿಂದ ಮುಖಭಂಗ ಅನುಭವಿಸಿತು. ಕಾಂಗೂರುಗಳ ಬೌಲಿಂಗ್ ನೋಡಿ ಸರಣಿ ಆಸೀಸ್ 4-0ಯುಲ್ಲಿ ವೈಟ್ವಾಶ್ ಮಾಡುವುದು ಶೆ.100 ಪ್ರತಿಶತ ಖಚಿತ ಎಂಬುವುದು ಕ್ರಿಕೆಟ್ ಪಂಡಿತರ ಲೆಕ್ಕಾಚಾರವಾಗಿತ್ತು.
ಆದರೆ, ಮೆಲ್ಬೋರ್ನ್ನಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ಸುಲಭವಾಗಿ ಗೆಲ್ಲುವ ಮೂಲಕ ರಹಾನೆ ಪಡೆ ಕ್ರಿಕೆಟ್ ಪಂಡಿತರ ಲೆಕ್ಕಾಚಾರ ತಲೆಕೆಳಗಾಗಿಸಿತು. ಮೂರನೇ ಟೆಸ್ಟ್ ಸಹ ಭಾರತ ಸೋಲುವ ಹಾದಿಯಲ್ಲಿತ್ತು. ರಿಶಬ್ ಪಂತ್ ಅಬ್ಬರದ ಆಟ, ಪೂಜಾರ ತಾಳ್ಮೆಯ ಆಟ ಭಾರತ ಪಾಲಿಗೆ ಸ್ವಲ್ಪ ಚೇತರಿಕೆ ನೀಡ್ತು. ಆದರೆ, ಕೊನೆಯ 43 ಓವರ್ಗಳಲ್ಲಿ ಒಂದು ವಿಕೆಟ್ ನೀಡದೆ ಆರನೇ ವಿಕೆಟ್‌ಗೆ 62 ರನ್ಗಳ ಜೊತೆಯಾಟ ಆಡುವ ಮೂಲಕ ಅಶ್ವಿನ್-ಹನುಮ ವಿಹಾರಿ ಜೋಡಿ ವಿಶ್ವಶ್ರೇಷ್ಠ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿತು.
ಅಶ್ವಿನ್ ಮತ್ತು ಹನುಮ ವಿಹಾರಿ ಗಾಯದ ಸಮಸ್ಯೆಯಿದ್ದರು ನೆಲಕಚ್ಚಿ ಆಡಿದ್ರು. ಇತ್ತ ಹೆಬ್ಬೆಟ್ಟು ಮುರಿದಿದ್ರು ಪ್ಯಾಡ್ ಕಟ್ಟಿ ಕುಳಿತಿದ್ದ ರವೀಂದ್ರ ಜಡೇಜಾ ಜೀವ ಹೋದರು ಸರಿ ಸೋಲೊಪ್ಪಿಕೊಳ್ಳಲು ತಯಾರಿಲ್ಲ ಎಂಬ ಸಂದೇಶವನ್ನು ಡಗೌಟ್ನಿಂದ ಆಸ್ಟ್ರೇಲಿಯನ್ನರಿಗೆ ರವಾನಿಸಿದ್ದರು. ಭಾರತೀಯರು ಈ ಟೆಸ್ಟ್ ಉಳಸಿಕೊಳ್ಳಲು ಯಾವ ರೀತಿ ಸಜ್ಜಾಗಿದ್ದರು ಎಂಬುದು ಅಶ್ವಿನ್, ವಿಹಾರಿ ಆಟ ನೋಡಿದವರು ಮಾತ್ರ ಅದನ್ನು ವರ್ಣಿಸಬಲ್ಲರು. ಫಲಿತಾಂಶದ ಲೆಕ್ಕಾಚಾರದಲ್ಲಿ ಅದು ಟೆಸ್ಟ್ ಡ್ರಾ ಎನ್ನಬಹುದು. ಭಾರತೀಯರು ಆಡಿದ ರೀತಿ ಅದು ಭಾರತದ ಪಾಲಿಗೆ ಜಯವಾಗಿತ್ತು.
ಹುಡುಗಾಟವಲ್ಲ ಹುಡುಗರಾಟ.. :ಕೊನೆಯ ಟೆಸ್ಟ್ ಸಹ ಭಾರತೀಯರ ಪಾಲಿಗೆ ಅಗ್ನಿಪರೀಕ್ಷೆಯಾಗಿತ್ತು. ಹಿರಿಯ ಬೌಲರ್ಗಳ ಅನುಪಸ್ಥಿತಿ ಎದ್ದು ಕಾಣಿಸುತ್ತಿತ್ತು. ಭಾರತದ ಅನನುಭವಿಗಳ ಬೌಲರ್ಗಳನ್ನು ಮುನ್ನೆಡೆಸುವ ಜವಾಬ್ದಾರಿಯನ್ನು ಕೇವಲ 2 ಪಂದ್ಯಗಳನ್ನಾಡಿದ್ದ ಸಿರಾಜ್ ವಹಿಸಿದ್ರು. ನಾಲ್ಕನೇ ಟೆಸ್ಟ್ ಆರಂಭವಾಗುವ ಮೊದಲು ಭಾರತದ ನಾಲ್ವರು ಬೌಲರ್ಗಳು ಸೇರಿ 13 ವಿಕೆಟ್ ಪಡೆದಿದ್ದರೆ, ಆಸ್ಟ್ರೇಲಿಯಾದ ನಾಲ್ವರು ಬೌಲರ್ಗಳು 1033 ವಿಕೆಟ್ ಪಡೆದ ಅನುಭವಿಗಳನ್ನ ಹೊಂದಿತ್ತು.
ಈ ನಾಲ್ವರು ವಿಶ್ವಶ್ರೇಷ್ಠ ಬೌಲರ್ಗಳು. ಆದರೆ, ವಿಶ್ವ ಕ್ರಿಕೆಟ್ನಲ್ಲಿಯೇ ಅತ್ಯಂತ ಅನನುಭವಿ ಬೌಲರ್ಗಳನ್ನು ಕಣಕ್ಕಿಳಿಸಿದ ಕುಖ್ಯಾತಿಗೆ ಭಾರತೀಯರು ಒಳಗಾದ್ರು. ಟೆಸ್ಟ್ ಸರಣಿಯಲ್ಲಿ 20 ಆಟಗಾರರನ್ನು ಕಣಕ್ಕಿಳಿಸುವ ಮೂಲಕ ವಿದೇಶಿ ನೆಲದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಅತಿಹೆಚ್ಚು ಆಟಗಾರರನ್ನು ಕಣಕ್ಕಿಳಿಸಿದ ದಾಖಲೆ ಸಹ ಭಾರತದ ಪಾಲಾಗಿತ್ತು. ಇಷ್ಟೊಂದು ಇಕ್ಕಟ್ಟಿನ ಪರಿಸ್ಥಿತಿಯಲ್ಲಿದ್ರೂ ಯಂಗ್ ಇಂಡಿಯಾ ಮಾತ್ರ ಇದ್ಯಾವುದನ್ನು ತಲೆ ಕೆಡಿಸಿಕೊಳ್ಳದೆ ಕಣಕ್ಕಿಳಿದಿತ್ತು.
ಕ್ರಿಕೆಟ್ ಪೇಪರ್ ಮೇಲಿರುವ ಹೆಸರುಗಳಿಂದ ಆಡುವ ಆಟವಲ್ಲ. ಕಣಕ್ಕಿಳಿದು ಆಡುವ ಆಟ ಎಂಬುದನ್ನು ನಂಬಿದ ಭಾರತೀಯರು ವಿಶ್ವಶ್ರೇಷ್ಠ ಟೆಸ್ಟ್ ತಂಡದೊಂದಿಗೆ ಆಡುತ್ತಿದ್ದೇವೆ ಎಂಬುದನ್ನು ಮರೆತು ತಮ್ಮ ಪ್ರದರ್ಶನ ನೀಡಿದ್ರು. ಟಾಸ್ ಗೆಲ್ಲುವ ಮೂಲಕ ಆಸೀಸ್ ಮಾನಸಿಕವಾಗಿ ಅರ್ಧ ಪಂದ್ಯ ಗೆದ್ದಾಗಿತ್ತು. ಯುವ ಆಟಗಾರರಾದ ಶಾರ್ದೂಲ್, ನಟರಾಜನ್ ಮತ್ತು ಸುಂದರ್ ಮೊದಲ ಇನ್ನಿಂಗ್ಸ್ನಲ್ಲಿ ತಲಾ ಮೂರು ವಿಕೆಟ್ ತೆಗೆದು ಮಿಂಚಿದ್ರು.
ಆಸೀಸ್ 369 ರನ್ಗಳಿಸುವಲ್ಲಿ ಸಫಲವಾಯ್ತು. ಮೊದಲ ಇನ್ನಿಂಗ್ಸ್ನಲ್ಲಿ ಭಾರತ ಬ್ಯಾಟಿಂಗ್ ವೈಫಲ್ಯ ಅನುಭವಿಸಿತ್ತು. ಆರಂಭಿಕರು ನಿರೀಕ್ಷಿತ ಆಟವಾಡಲಿಲ್ಲ. ಏಳನೇ ವಿಕೆಟ್‌ಗೆ ಒಂದಾದ ಸುಂದರ್ ಮತ್ತು ಶಾರ್ದೂಲ್ ಠಾಕೂರ್ 123 ರನ್ ಕಲೆ ಹಾಕಿದ್ರು. ಠಾಕೂರ್ 67 ರನ್ಗಳಿಸಿದ್ದರೆ, ಸುಂದರ್ 62 ರನ್ಗಳಿಸಿ ಸಮಯೋಚಿತ ಆಟದಿಂದ ಆಸೀಸ್ರನ್ನು ಕಾಡಿದ್ರು. ಭಾರತ 336 ರನ್ಗಳಿಸಲು ಕಾರಣರಾದರು. ಎರಡನೇ ಇನ್ನಿಂಗ್ಸ್ನಲ್ಲಿ ಆಸೀಸ್ ಉತ್ತಮ ಆರಂಭ ಪಡೆದ್ರು.
ಮೊಹ್ಮದ್ ಸಿರಾಜ್ ಅವರ ಮಾರಕ ಬೌಲಿಂಗ್ನಿಂದಾಗಿ ಮಧ್ಯಮ ಕ್ರಮಾಂಕ ಕುಸಿಯಿತು. ಐದು ವಿಕೆಟ್ ಪಡೆದ ಸಿರಾಜ್ ಕಾಂಗರೂ ಪಡೆಯನ್ನು 294 ರನ್ಗೆ ಕಟ್ಟಿ ಹಾಕಲು ನೆರವಾದರು. ಇನ್ನೂ ಬ್ಯಾಟಿಂಗ್ನಲ್ಲಿ ಶುಭ್ಮನ್ ಗಿಲ್ ಆಕರ್ಷಕ 91 ರನ್ಗಳ ಮೂಲಕ ಮಿಂಚಿದ್ರು. ಪೂಜಾರ ಎಂದಿನಿಂತೆ ವಿಕೆಟ್ ಕಾಯ್ದುಕೊಂಡು 56 ರನ್ಗಳಿಸಿ, ಬಂದವಿರಿಗೆ ಸಿಡಿಯಲು ದಾರಿ ಮಾಡಿಕೊಟ್ಟರು. ಮತ್ತೊಂದೆಡೆ ಯುವ ಆಟಗಾರ ರಿಶಭ್ ಪಂತ್ ತಮ್ಮ ಸ್ವಾಭಾವಿಕ ಆಟದಿಂದ ಕಾಂಗೂರುಗಳನ್ನ ಬೇಟೆಯಾಡಿದರು. ನಾಲ್ಕನೇ ಟೆಸ್ಟ್ನ ಕೊನೆಯ ಇನ್ನಿಂಗ್ಸ್ನಲ್ಲಿ ಅದ್ಭುತ ಆಟವಾಡಿದ ರಿಷಭ್ ಪಂತ್ ಆಸೀಸ್ ಸೋಲಿಗೆ ಕಾರಣವಾದರು.
ರಹಾನೆ - ಶಾಸ್ತ್ರಿ ಗೆಲುವಿನ ಮಂತ್ರ :ಯಂಗ್ ಇಂಡಿಯಾ ಉತ್ತಮ ಪ್ರದರ್ಶನ ನೀಡಲು ಕಾರಣ ನಾಯಕ ರಹಾನೆ ಮತ್ತು ಕೋಚ್ ರವಿಶಾಸ್ತ್ರಿ. ಹಿರಿಯ ಆಟಗಾರರ ಅನುಪಸ್ಥಿತಿ ಟೀಂ ಇಂಡಿಯಾದ ಮೇಲೆ ಯಾವುದೇ ರೀತಿ ಅಡ್ಡ ಪರಿಣಾಮ ಬೀರದಂತೆ ನೋಡಿಕೊಂಡವರು ಕೋಚ್ ಮತ್ತು ಕ್ಯಾಪ್ಟನ್. ರವಿಶಾಸ್ತ್ರಿ ಅವರ ಸ್ಫೂರ್ತಿದಾಯಕ ಮಾತುಗಳು ಯುವಕರನ್ನು ಹುರಿದುಂಬಿಸಿದ್ರೆ, ರಹಾನೆ ಅವರು ಸರಿಯಾಗಿ ಆಟವನ್ನು ರೀಡ್ ಮಾಡಿದ್ರು. ಮತ್ತೊಂದೆಡೆ ರೋಹಿತ್ ಶರ್ಮಾ ಅವರು ಸೂಕ್ತ ಸಲಹೆ ಅಜಿಂಕ್ಯಾ ರಹಾನೆ ಮತ್ತು ಯಂಗ್ ಆಟಗಾರರಿಗೆ ಯಾವ ರೀತಿ ಆಡಬೇಕು ಆಸೀಸ್ ನೆಲದಲ್ಲಿ ಎಂಬ ಅರಿವು ಮೂಡಿಸಿದ್ರು.
ಮತ್ತೊಂದೆಡೆ ರಹಾನೆ ಸಮಯಕ್ಕೆ ತಕ್ಕಂತೆ ಬೌಲರ್ಗಳನ್ನು ಬದಲಿಸಿದ್ರು. ಪ್ರತಿ ಆಟಗಾರರ ವಿರುದ್ಧ ಸೂಕ್ತ ರಣನೀತಿಯೊಂದಿಗೆ ಬಲೆ ಹೆಣೆದ್ರು. ಈ ಸಲ ಭಾರತದ ಹೋಮ್ವರ್ಕ್ ಚೆನ್ನಾಗಿತ್ತು. ಆಸೀಸ್ ಬ್ಯಾಟ್ಸಮನ್ಗಳನ್ನು ಲೆಗ್ ಸೈಡ್ ಜಾಲದಲ್ಲಿ ಕಟ್ಟಿ ಹಾಕಿದ್ರು. ಲೆಗ್ ಸೈಡ್ ಬಲಿಷ್ಠ ಫೀಲ್ಡಿಂಗ್ನಿಂದ ಆಸೀಸ್ ಆಟಗಾರರನ್ನು ಒತ್ತಡಕ್ಕೆ ಸಿಲುಕಿಸಿ ಅವರ ವಿಕೆಟ್ ಪಡೆದರು.
ಜೊತೆಗೆ ಅವರ ರನ್ರೇಟ್ ಹೆಚ್ಚದಂತೆ ನೋಡಿಕೊಳ್ಳಲು ಭಾರತೀಯರು ಯಶಸ್ವಿಯಾದ್ರು. ಭಾರತ ಪ್ರವಾಸ ಕೈಗೊಂಡಾಗ ಆಸೀಸ್ರು ಇಲ್ಲಿ ಅನುಭವಿಸುವಂತಹ ಕಷ್ಟವನ್ನು ಕಾಂಗರೂಗಳು ತಮ್ಮ ನೆಲದಲ್ಲಿ ಅನುಭವಿಸಿದ್ರು. ಭಾರತ ರಚಿಸಿದ ಚಕ್ರವ್ಯೂಹ ಭೇದಿಸುವಲ್ಲಿ ವಿಫಲವಾದ ಆಸೀಸ್ ಯಂಗ್ ಇಂಡಿಯಾದ ಮುಂದೆ ಶರಣಾಗುವ ಮೂಲಕ ಟೆಸ್ಟ್ ಸರಣಿಯನ್ನು ಕೈ ಚೆಲ್ಲಿತು.
ಆಸೀಸ್ ಸರಣಿಯಲ್ಲಿ ಭಾರತ ತೋರಿಸಿದ ಪ್ರದರ್ಶನ ನಿಜಕ್ಕೂ ಪ್ರಶಂಸನೀಯ :ಸರಣಿಯಿಂದ ಭಾರತದ ಬೆಂಚ್ ಶಕ್ತಿ ಹೆಚ್ಚಿದೆ. ಯುವ ಆಟಗಾರರು ಸಹ ಎಂತಹ ಪರಿಸ್ಥಿತಿಯಲ್ಲೂ ತಂಡಕ್ಕೆ ಆಸರೆಯಾಗಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಮತ್ತೊಂದೆಡೆ ರಹಾನೆ ಟೆಸ್ಟ್ಗೆ ಹೇಳಿ ಮಾಡಿಸಿದ ನಾಯಕ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ತಂಡವನ್ನು ಯಾವ ರೀತಿ ಮುನ್ನೆಡಸಬೇಕು. ಯಾವಾಗ ಯಾವ ಆಟಗಾರನನ್ನು ಕಣಕ್ಕಿಳಿಸಬೇಕು, ಫೀಲ್ಡಿಂಗ್ ಹೇಗೆ ಸೆಟ್ ಮಾಡಬೇಕು ಎಲ್ಲದರಲ್ಲೂ ಪರಿಪೂರ್ಣತೆಯನ್ನು ತೋರಿರುವ ರಹಾನೆ ಭವಿಷ್ಯದ ನಾಯಕ ಎಂಬುದನ್ನು ಸಾಬೀತು ಮಾಡಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಮುಡಿಗೇರಿಸಿಕೊಳ್ಳಲು ಭಾರತ ಸರ್ವರೀತಿಯಿಂದ ಸಜ್ಜಾಗಿದೆ.