ಮುಂಬೈ: ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾಗಿರುವ ಬಿಸಿಸಿಐನ ಒಟ್ಟು ಮೌಲ್ಯ 2018-19ರ ಹಣಕಾಸು ವರ್ಷದ ಅವಧಿಗೆ 14,489 ಕೋಟಿ ರೂ ಎಂದು ವರದಿಗಳಿಂದ ತಿಳಿದುಬಂದಿದೆ.
ಹಿಂದಿನ ವರ್ಷಕ್ಕೆ ಹೋಲಿಸಿದರೆ 2018-19ರ ವರ್ಷದ ಬಿಸಿಸಿಐನ ಆದಾಯ 2,597.19 ಕೋಟಿ ರೂ ಏರಿಕೆಯಾಗಿದೆ. ಆದರೆ 2019-20 ಬ್ಯಾಲೆನ್ಸ್ ಶೀಟ್ ಇನ್ನು ಬಿಸಿಸಿಐ ಸಾರ್ವಜನಿಕವಾಗಿ ಬಿಡುಗಡೆ ಮಾಡಿಲ್ಲ ಎಂದು ಐಎಎನ್ಎಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಬಿಸಿಸಿಐ 2018ರಲ್ಲಿ 4,017 ಕೋಟಿ ರೂ.ಗಳಷ್ಟು ಆದಾಯ ಗಳಿಸಿದ್ದು, ಇದರಲ್ಲಿ ಬಹುಪಾಲು ಅಂದರೆ ಸುಮಾರು 2407.46 ಕೋಟಿ ರೂ 2018ರ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಿಂದ ಬಂದಿದೆ ಎನ್ನಲಾಗಿದೆ.
ಇನ್ನು ಪಂದ್ಯಗಳ ಮೀಡಿಯಾ ರೈಟ್ಸ್ ಮೂಲಕ ಸುಮಾರು 828 ಕೋಟಿ ರೂ ಪಡೆದಿರುವುದು ಬಿಸಿಸಿಐ ಎರಡನೇ ಆದಾಯ ಮೂಲವಾಗಿದೆ. ಇದೇ ವೇಳೆ ಬಿಸಿಸಿಐ 2018-19 ರ ಅವಧಿಯಲ್ಲಿ ಸುಮಾರು 1,592.12 ಕೋಟಿ ರೂ.ಗಳಷ್ಟು ಹಣವನ್ನು ಖರ್ಚು ಮಾಡಿದೆ ಎಂದು ವರದಿಯಿಂದ ತಿಳಿದುಬಂದಿದೆ. ಇಷ್ಟೇ ಅಲ್ಲದೆ ಬಿಸಿಸಿಐ ಅಂತಾರಾಷ್ಟ್ರೀಯ ಸರಣಿ ಮತ್ತು ಟೂರ್ನಿಗಳ ಆಯೋಜನೆ ಮೂಲಕ 446.26 ಕೋಟಿ ರೂ ಆದಾಯಗಳಿಸಿದೆ. ಇದರ 2018-19ರಲ್ಲಿ ಬ್ಯಾಂಕ್‌ಗಳಲ್ಲಿ ಇರಿಸಲಾಗಿರುವ ಠೇವಣಿಗೆ 290.73 ಕೋಟಿ ರೂಗಳಷ್ಟು ಬಡ್ಡಿಯ ರೂಪದಲ್ಲಿ ಪಡೆದುಕೊಂಡಿದೆ. ಐಸಿಸಿ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನಿಂದಲೂ 25.03 ಕೋಟಿ ಆದಾಯವನ್ನು ಪಡೆದಿದೆ.
ಇವುಗಳ ಜೊತೆಗೆ ಬಿಸಿಸಿಐ ತನ್ನ 7 ಸ್ಪಾನ್ಸರ್ಗಳಾದ ಸ್ಟಾರ್ ಸ್ಪೋರ್ಟ್ಸ್ (ಬ್ರಾಡ್ಕಾಸ್ಟರ್), ಬೈಜೂಸ್ (ಟೀಮ್ ಸ್ಪಾನ್ಸರ್), ಪೇಟಿಯಂ (ಟೈಟಲ್ ಸ್ಪಾನ್ಸರ್), ಡ್ರೀಮ್ 11, ಹ್ಯೂಂಡಯ್, ಅಂಬುಜಾ ಸಿಮೆಂಟ್ಸ್ (ಪಾರ್ಟ್ನರ್ಸ್) ಮತ್ತು ಕಿಟ್ ಸ್ಪಾನ್ಸರ್ (ಎಂಪಿಎಲ್ ಸ್ಪೋರ್ಟ್ಸ್)ನಿಂದಲೂ ಆದಾಯಗಳಿಸುತ್ತಿದೆ.