ನವದೆಹಲಿ:ಭಾರತ ತಂಡ ಇಂಗ್ಲೆಂಡ್ ನೆಲದಲ್ಲಿ ಐತಿಹಾಸಿಕ ನಾಟ್ವೆಸ್ಟ್ ಸರಣಿ ಗೆದ್ದು 18ನೇ ವರ್ಷದ ಸಂಭ್ರಮದಲ್ಲಿದೆ. ಭಾರತದ ಮಾಜಿ ಬ್ಯಾಟ್ಸ್ಮನ್ ಮೊಹಮ್ಮದ್ ಕೈಫ್ ಈ ಗೆಲುವನ್ನು ಮೌಂಟ್ ಎವರೆಸ್ಟ್ ಏರಿದಷ್ಟೇ ಖುಷಿಯಾಗಿತ್ತು ಎಂದು ಬಣ್ಣಿಸಿದ್ದಾರೆ.
ಜುಲೈ 13, 2002ರಲ್ಲಿ ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ಮೈದಾನದಲ್ಲಿ 2 ವಿಕೆಟ್ಗಳ ರೋಚಕ ಗೆಲುವು ಪಡೆದಿದ್ದ ಸೌರವ್ ಗಂಗೂಲಿ ನೇತೃತ್ವದ ಭಾರತ ತಂಡ, ನಾಟ್ವೆಸ್ಟ್ ಟ್ರೋಫಿ ಎತ್ತಿ ಹಿಡಿದಿತ್ತು. ಈ ಸಂದರ್ಭದಲ್ಲಿ ದಾದಾ ತಮ್ಮ ಜರ್ಸಿ ಬಿಚ್ಚಿ ಸಂಭ್ರಮಿಸಿದ್ದರು. ಈ ಕ್ಷಣವನ್ನು ನೆನೆಪಿಸಿಕೊಂಡಿರುವ ಆ ಪಂದ್ಯದ ಹೀರೊ ಮೊಹಮ್ಮದ್ ಕೈಫ್, ಆ ದಿನ ನಮಗೆ ಮೌಂಟ್ ಎವರೆಸ್ಟ್ ಏರಿದಷ್ಟು ಖುಷಿಯಾಗಿತ್ತು ಎಂದು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ನಾಟ್ವೆಸ್ಟ್ ಗೆದ್ದ ಸಂಭ್ರಮದಲ್ಲಿ ಗಂಗೂಲಿ ಪಡೆ "ಜುಲೈ 13, 2002, ಆ ದಿನ ನಾವು ಲಾರ್ಡ್ಸ್ನಲ್ಲಿ ಮೌಂಟ್ ಎವರೆಸ್ಟ್ ಏರಿದ್ದೆವು. ದಾದಾ ಶರ್ಟ್ ಬಿಚ್ಚಿ ಸಂಭ್ರಮಿಸಿದ್ದರು. ಯುವಿಯ ಒತ್ತಡವಿಲ್ಲದ, ಬೆಲೆಕಟ್ಟಲಾಗದ, ಜಹೀರ್ ಖಾನ್ ಬೆಂಬಲ, ನನ್ನ ಭಯವಿಲ್ಲದ ಆಟ.. ಅಳಿಸಲಾಗದ ನೆನೆಪುಗಳು" ಎಂದು ಕೈಫ್ ಟ್ವೀಟ್ ಮಾಡಿದ್ದಾರೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ತಂಡ ಟ್ರೆಸ್ಕೋತಿಕ್(109) ಹಾಗೂ ನಾಸಿರ್ ಹುಸೇನ್(115)ರ ಶತಕಗಳ ನೆರವಿನಿಂದ ಭಾರತಕ್ಕೆ 326 ರನ್ಗಳ ಟಾರ್ಗೆಟ್ ನೀಡಿತ್ತು. ಈ ಮೊತ್ತವನ್ನು ಬೆನ್ನತ್ತಿದ ಭಾರತ ತಂಡ 8 ವಿಕೆಟ್ ಕಳೆದುಕೊಂಡು 49.3 ಓವರ್ಗಳಲ್ಲಿ ಗುರಿ ತಲುಪಿ ಇತಿಹಾಸ ನಿರ್ಮಿಸಿತ್ತು.
326 ರನ್ಗಳ ಟಾರ್ಗೆಟ್ ಪಡೆದಿದ್ದ ಭಾರತ ತಂಡ ಮೊದಲ ವಿಕೆಟ್‌ಗೆ 106ರನ್ಗಳ ಜೊತೆಯಾಟ ನೀಡಿತ್ತು. ಗಂಗೂಲಿ 43 ಎಸೆತಗಳಲ್ಲಿ 60 ಹಾಗೂ ವೀರೇಂದ್ರ ಸೆಹ್ವಾಗ್ 49 ಎಸೆತಗಳಲ್ಲಿ 45 ರನ್ಗಳಿಸಿ ಭರ್ಜರಿ ಆರಂಭ ನೀಡಿದ್ದರು. ಆದರೆ, ನಂತರ ಇಂಗ್ಲೆಂಡ್ ಬೌಲಿಂಗ್ ದಾಳಿಗೆ ದಿಢೀರ್ ಕುಸಿತ ಕಂಡ ಟೀಂ ಇಂಡಿಯಾ 146 ರನ್ಗಳಾಗುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತ್ತು.
ಆದರೆ, 6ನೇ ವಿಕೆಟ್‌ಗೆ ಮೊಹಮ್ಮದ್ ಕೈಫ್(ಔಟಾಗದೆ 87) ಹಾಗೂ ಯುವರಾಜ್(69) 121 ರನ್ಗಳ ಜೊತೆಯಾಟ ನಡೆಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅದರಲ್ಲೂ ಕೊನೆಯವರೆಗೂ ಹೋರಾಡಿದ್ದ ಕೈಫ್ 75 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 6 ಬೌಂಡರಿಗಳ ನೆರವಿನಿಂದ 87 ರನ್ಗಳಿಸಿ ಭಾರತಕ್ಕೆ ಟ್ರೋಫಿ ತಂದುಕೊಟ್ಟಿದ್ದರು.