ನವದೆಹಲಿ :ಭಾರತದ ನಾಯಕ ವಿರಾಟ್ ಕೊಹ್ಲಿ ಅವರ ಪ್ರತಿಷ್ಠಾನವು ತನ್ನ ಪ್ರಾಣಿ ಕಲ್ಯಾಣ ಯೋಜನೆಯ ಭಾಗವಾಗಿ ಮುಂಬೈ ಹೊರವಲಯದಲ್ಲಿ ಎರಡು 'ಪ್ರಾಣಿಗಳ ಆಶ್ರಯ'ಗಳನ್ನು ಸ್ಥಾಪಿಸಲಿದೆ.
ವಿರಾಟ್ ಕೊಹ್ಲಿ ಫೌಂಡೇಶನ್ ವಿವಾಲ್ಡಿಸ್ ಅನಿಮಲ್ ಹೆಲ್ತ್ ಹಾಗೂ ಆವಾಜ್, ವಾಯ್ಸ್ ಆಫ್ ಸ್ಟ್ರೇ ಅನಿಮಲ್ಸ್ ಎಂಬ ಮುಂಬೈ ಮೂಲದ ಎನ್ಜಿಒಗಳ ಜತೆಗಿನ ಸಹಯೋಗದೊಂದಿಗೆ ಈ ಯೋಜನೆ ರೂಪಿಸಿದೆ. ಮಲಾಡ್ ಮತ್ತು ಬೋಯಿಸಾರ್‌ನಲ್ಲಿ ಆಶ್ರಯವನ್ನು ಸ್ಥಾಪಿಸಲಾಗುವುದು ಎಂದು ತಿಳಿದು ಬಂದಿದೆ.
ಮಲಾಡ್‌ನಲ್ಲಿನ ಆಶ್ರಯವು ತಾತ್ಕಾಲಿಕ ಪುನರ್ವಸತಿ ಕೇಂದ್ರವಾಗಲಿದೆ. ಅಲ್ಲಿ ಪ್ರಾಣಿಗಳು (ಸಣ್ಣ ಪ್ರಾಣಿಗಳು, ನಾಯಿಗಳು ಮತ್ತು ಬೆಕ್ಕುಗಳು) ಚೇತರಿಸಿಕೊಳ್ಳುವವರೆಗೆ ತಾತ್ಕಾಲಿಕ ಅವಧಿಗೆ ಆಶ್ರಯ ಪಡೆಯುತ್ತವೆ. ಬೋಯಿಸಾರ್‌ನ ಕೇಂದ್ರವು ಕುರುಡು/ಪಾರ್ಶ್ವವಾಯುವಿಗೆ ಒಳಗಾದ ಪ್ರಾಣಿಗಳಿಗೆ ಶಾಶ್ವತ ಆಶ್ರಯವಾಗಲಿದೆ.
ಇದನ್ನೂ ಓದಿ:ಕೊಹ್ಲಿ-ಎಬಿಡಿ ಜೋಡೆತ್ತಿಗೆ ಮ್ಯಾಕ್ಸ್ವೆಲ್ ಬಲ.. ಮೊದಲ ಟ್ರೋಫಿ ಎತ್ತಿ ಹಿಡಿಯುವ ಕನಸಲ್ಲಿ ಆರ್ಸಿಬಿ!
"ನಮ್ಮ ನಗರದ ಬೀದಿ ಪ್ರಾಣಿಗಳಿಗೆ ಸುರಕ್ಷಿತ ಸ್ಥಳ ಸೃಷ್ಟಿಸುವುದು ನಮ್ಮ ಕನಸು. ವಿವಾಲ್ಡಿಸ್ ಮತ್ತು ಆವಾಜ್ ಅವರೊಂದಿಗೆ ಈ ಯೋಜನೆಯನ್ನು ಕೈಗೊಳ್ಳುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ. ಈ ಪ್ರಾಣಿಗಳಿಗೆ ಸಹಾಯ ಮಾಡಲು ಕೆಲವು ಸೌಲಭ್ಯಗಳನ್ನು ರಚಿಸಲು ಸಮಾನ ಮನಸ್ಸಿನ ಜನರೊಂದಿಗೆ ಕೆಲಸ ಮಾಡುತ್ತಿದ್ದೇನೆ" ಎಂದು ಕೊಹ್ಲಿ ಹೇಳಿದ್ದಾರೆ.