ಹೈದರಾಬಾದ್:13ನೇ ಐಪಿಎಲ್ ಆರಂಭಗೊಳ್ಳಲು ದಿನಗಣನೆ ಪ್ರಾಂರಂಭವಾಗಿದೆ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ರನ್ನರ್ ಅಪ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.
ಕೋವಿಡ್ ಸಂಕಷ್ಟವನ್ನು ದಾಟಿ ಮಿಲಿಯನ್ ಡಾಲರ್ ಟೂರ್ನಮೆಂಟ್ ನಡೆಯುತ್ತಿದೆ. ಹಿಂದಿನ ಲೀಗ್ಗಳಿಗಿಂತಲೂ ಈ ಬಾರಿ ಟೂರ್ನಿ ವಿಭಿನ್ನವಾಗಿರಲಿದೆ. ಪ್ರೇಕ್ಷಕರಿಲ್ಲದೆ, ಮೈದಾನದಲ್ಲೂ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುತ್ತಾ ಪಂದ್ಯವನ್ನು ಆಡಬೇಕಿದೆ. 53 ದಿನಗಳ ದೀರ್ಘ ಕಾಲ ನಡೆಯುವ ಟೂರ್ನಿಗಾಗಿ ಭಾರತದಲ್ಲಷ್ಟೇ ಅಲ್ಲ ವಿಶ್ವದೆಲ್ಲೆಡೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಈಗಾಗಲೆ 12 ಆವೃತ್ತಿಗಳನ್ನುಯಶಸ್ವಿಯಾಗಿ ಮುಗಿಸಿ 13ನೇ ಆವೃತ್ತಿಗೆ ಕಾಲಿಟ್ಟಿರುವ ಐಪಿಎಲ್ ಹಲವಾರು ಮ್ಯಾಚ್ ವಿನ್ನರ್ಗಳನ್ನು ಕಂಡಿದೆ. ಪಂದ್ಯವನ್ನು ಗೆಲ್ಲಲು ಇಡೀ ತಂಡದ ಬೆಂಬಲ ಅಗತ್ಯವಾಗಿದ್ದರೂ ಕೆಲವೊಮ್ಮೆ ಪಂದ್ಯದ ಗತಿಯನ್ನ ಒಬ್ಬ ಆಟಗಾರ ಬದಲಾಯಿಸಬಲ್ಲರು. ಇದಕ್ಕೆ ಕೆಕೆಆರ್ ರಸೆಲ್, ಡೆಲ್ಲಿ ತಂಡದ ರಿಷಭ್ ಪಂತ್ ಉದಾಹರಣೆ. ಇನ್ನು ಐಪಿಎಲ್ನ ಎಲ್ಲಾ ತಂಡಗಳಲ್ಲಿ ಮ್ಯಾಚ್ ವಿನ್ನರ್ ಎಂದು ಗುರುತಿಸಬಹುದಾದ ಆಟಗಾರರ ಬಗ್ಗೆ ಈ ಸುದ್ದಿಯಲ್ಲಿ ತಿಳಿದುಕೊಳ್ಳೋಣ.
ಮುಂಬೈ ಇಂಡಿಯನ್ಸ್: ಹಾರ್ದಿಕ್ ಪಾಂಡ್ಯ
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಸ್ವತಃ ಆಲ್ರೌಂಡರ್ ಆಗಿ ಗುರುತಿಸಿಕೊಂಡಿರುವ ಹಾರ್ದಿಕ್ ಪಾಂಡ್ಯ ಖಂಡಿತವಾಗಿಯೂ ಮುಂಬೈ ತಂಡದ ಪ್ರಮುಖ ಅಸ್ತ್ರವಾಗಲಿದ್ದಾರೆ. ಆರಂಭಿಕ ಬ್ಯಾಟ್ಸ್ಮನ್ಗಳು ವಿಫಲಗೊಂಡರೆ ಏಕಾಂಗಿಯಾಗಿ ಪಂದ್ಯವನ್ನು ಗೆಲುವಿನತ್ತಾ ಕೊಂಡೊಯ್ಯುವ ತಾಕತ್ತು ಹಾರ್ದಿಕ್ ಅವರಿಗಿದೆ.
2015ರಲ್ಲಿ ಐಪಿಎಲ್ಗೆ ಪದಾರ್ಪಣೆ ಮಾಡಿದ ಪಾಂಡ್ಯ 3 ಬಾರಿ ಚಾಂಪಿಯನ್ ತಂಡದ ಭಾಗವಾಗಿದ್ದಾರೆ . ಅವರು ಒಟ್ಟಾರೆ 66 ಪಂದ್ಯಗಳಿಂದ 42 ವಿಕೆಟ್ ಹಾಗೂ 1068 ರನ್ಗಳಿಸಿದ್ದಾರೆ. ಕಳೆದ ಆವೃತ್ತಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದ ಪಾಂಡ್ಯ 14 ವಿಕೆಟ್ ಹಾಗೂ 402 ರನ್ ಸಿಡಿಸಿ ತಂಡ ಚಾಂಪಿಯನ್ ಆಗಲು ಪ್ರಮುಖ ಪಾತ್ರವಹಿಸಿದ್ದರು.
ಚೆನ್ನೈ ಸೂಪರ್ ಕಿಂಗ್ಸ್: ಇಮ್ರಾನ್ ತಾಹೀರ್
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅತ್ಯಂತ ಹಿರಿಯ ಆಟಗಾರನಾಗಿರುವ ತಾಹೀರ್ ವಯಸ್ಸಿಗೂ ಕ್ರಿಕೆಟ್ಗೂ ಯಾವುದೇ ಸಂಬಂಧವಿಲ್ಲ ಎಂದು ತೋರಿಸಿಕೊಟ್ಟಿದ್ದರು. 2014ರಲ್ಲಿ ಡೆಲ್ಲಿ ಡೇರ್ ಡೇವಿಲ್ಸ್ ಪರ ಐಪಿಎಲ್ಗೆ ಪದಾರ್ಪಣೆ ಮಾಡಿದ್ದ ತಾಹೀರ್ ನಂತರ 2016ರಲ್ಲಿ ಪುಣೆ ಹಾಗೂ 2018ರಲ್ಲಿ ಸಿಎಸ್ಕೆ ಬಳಗ ಸೇರಿಕೊಂಡಿದ್ದರು. ಕೇವಲ 55 ಪಂದ್ಯಗಳನ್ನಾಡಿರುವ ಅವರು 79 ವಿಕೆಟ್ ಕಬಳಿಸಿದ್ದಾರೆ.
ಕಳೆದ ಆವೃತ್ತಿಯಲ್ಲಿ 17 ಪಂದ್ಯಗಳಿಂದ 26 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಪಡೆದಿದ್ದ ಅವರು ಸಿಎಸ್ಕೆ ಫೈನಲ್ ತಲುಪುವುದಕ್ಕೆ ಪ್ರಮುಖ ಪಾತ್ರವಹಿಸಿದ್ದರು.
ಡೆಲ್ಲಿ ಕ್ಯಾಪಿಟಲ್:- ರಿಷಭ್ ಪಂತ್
ಈಗಾಗಲೆ ಕಳೆದ ಮೂರು ಆವೃತ್ತಿಗಳಿಂದ ಡೆಲ್ಲಿ ತಂಡದಲ್ಲಿ ಪಂತ್ ಮ್ಯಾಚ್ ವಿನ್ನರ್ ಆಗಿ ಗುರುತಿಸಿಕೊಂಡಿದ್ದಾರೆ. ಅದಕ್ಕಾಗಿಯೇ 15 ಕೋಟಿ ರೂ ನೀಡಿ ಡೆಲ್ಲಿ ತಂಡ ಅವರನ್ನು 2018ರಲ್ಲಿ ತನ್ನಲ್ಲೇ ಉಳಿಸಿಕೊಂಡಿದೆ.
ಪಂತ್ 2016ರಲ್ಲಿ ಐಪಿಎಲ್ಗೆ ಪದಾರ್ಪಣೆ ಮಾಡಿದ್ದರು. ಅಂದಿನಿಂದಲೂ ಡೆಲ್ಲಿ ತಂಡದಲ್ಲೇ ಆಡುತ್ತಿರುವ ಅವರು ಒಟ್ಟಾರೆ 54 ಪಂದ್ಯಗಳಿಂದ 1736 ರನ್ಗಳಿಸಿದ್ದಾರೆ.
2018ರ ಆವೃತ್ತಿಯಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಲೋಕವನ್ನೇ ಬೆರಗಾಗಿಸಿದ್ದ ಪಂತ್ 14 ಪಂದ್ಯಗಳಿಂದ 684 ರನ್ ಸಿಡಿಸಿದ್ದರು. ಬಲಿಷ್ಠ ಬೌಲಿಂಗ್ ಪಡೆ ಹೊಂದಿರುವ ಸನ್ರೈರರ್ಸ್ ವಿರುದ್ಧವೇ ಕೇವಲ 68 ಎಸೆತಗಳಲ್ಲಿ 128 ರನ್ ಚಚ್ಚಿದ್ದರು. ಕಳೆದ ಆವೃತ್ತಿಯಲ್ಲೂ 16 ಪಂದ್ಯಗಳಿಂದ 488 ರನ್ ಸಿಡಿಸಿ 7 ವರ್ಷಗಳ ಬಳಿಕ ಡೆಲ್ಲಿ ತಂಡ ಪ್ಲೇ ಆಫ್ ತಲುಪುವಂತೆ ಮಾಡಿದ್ದರು.
ಸನ್ರೈಸರ್ಸ್ ಹೈದರಾಬಾದ್- ರಶೀದ್ ಖಾನ್
ಟಿ20 ಶ್ರೇಯಾಂಕದಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ರಶೀದ್ ಖಾನ್ ತಂಡದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಅದ್ಭುತಗಳನ್ನ ಸೃಷ್ಟಿಸಿ ತೋರಿಸಿದ್ದಾರೆ. 2014ರ ಆವೃತ್ತಿಯಿಂದಲೂ ಸನ್ರೈಸರ್ಸ್ ಹೈದರಾಬಾದ್ ತಂಡಲ್ಲೇ ಇರುವ ಅವರು 46 ಪಂದ್ಯಗಳಿಂದ 6.5 ಎಕಾನಮಿಯಲ್ಲಿ 55 ವಿಕೆಟ್ ಪಡೆದಿದ್ದಾರೆ.
2018ರಲ್ಲಿ ಸನ್ರೈಸರ್ಸ್ ಹೈದರಾಬಾದ್ ಫೈನಲ್ ತಲುಪುವಲ್ಲಿ ರಶೀದ್ ಪ್ರಮುಖ ಪಾತ್ರವಹಿಸಿದ್ದರು. ಆ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್ ಎನಿಸಿಕೊಂಡಿದ್ದರು.
ಕೋಲ್ಕತ್ತಾ ನೈಟ್ ರೈಡರ್ಸ್- ಆ್ಯಂಡ್ರೆ ರಸೆಲ್
ಕೆಕೆಆರ್ ಎಂದೊಡನೆ ಯಾವುದೇ ಅನುಮಾನವಿಲ್ಲದೆ ರಸೆಲ್ರನ್ನು ಮ್ಯಾಚ್ ಫಿನಿಶರ್ ಎಂದು ಹೇಳಬಹುದು. ಸ್ಫೋಟಕ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಇವರು ತಂಡಕ್ಕೆ ನೆರವಾಗಲಿದ್ದಾರೆ. ಇವರ ಪ್ರದರ್ಶನಕ್ಕೆ ಮಾರು ಹೋಗಿರುವ ಲಕ್ಷಾಂತರ ಅಭಿಮಾನಿಗಳು ಇವರಿಗಾಗಿಯೇ ಕೆಕೆಆರ್ ತಂಡಕ್ಕೆ ಬೆಂಬಲ ನೀಡುತ್ತಾರೆ ಎಂದರೆ ಅತಿಶಯೋಕ್ತಿಯಲ್ಲ.
2012ರಲ್ಲಿ ಡೆಲ್ಲಿ ಪರ ಐಪಿಎಲ್ಗೆ ಪದಾರ್ಪಣೆ ಮಾಡಿದ ರಸೆಲ್ ಅಲ್ಲಿ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾದರು. ಆದರೆ 2 ವರ್ಷಗಳ ನಂತರ ಕೆಕೆಆರ್ ಸೇರಿದ ಮೇಲೆ ತಂಡದ ಮ್ಯಾಚ್ವಿನ್ನರ್ ಆಗಿ ಬದಲಾಗಿದ್ದಾರೆ. 64 ಪಂದ್ಯಗಳಲ್ಲಿ ಅವರು 55 ವಿಕೆಟ್ ಹಾಗೂ 1400 ರನ್ ಸಿಡಿಸಿದ್ದಾರೆ.
ಕಳೆದ ವರ್ಷ ಏಕಾಂಗಿಯಾಗಿ ಹೋರಾಡಿದ್ದ ಅವರು 14 ಪಂದ್ಯಗಳಿಂದ 204 ಸ್ಟ್ರೈಕ್ರೇಟ್ನಲ್ಲಿ 510 ರನ್ ಸಿಡಿಸಿದ್ದರು. ಆದರೆ ತಂಡದಿಂದ ಬೆಂಬಲ ಸಿಗದ ಕಾರಣ ತಂಡ ಫ್ಲೇಆಫ್ ತಲುಪಲು ವಿಫಲವಾಗಿತ್ತು.
ಕಿಂಗ್ಸ್ ಇಲೆವೆನ್ ಪಂಜಾಬ್- ಗ್ಲೆನ್ ಮ್ಯಾಕ್ಸ್ವೆಲ್
ಆಸ್ಟ್ರೇಲಿಯಾದ ಆಲ್ರೌಂಡರ್ ಟಿ20 ಕ್ರಿಕೆಟ್ನ ಡೇಂಜರಸ್ ಬ್ಯಾಟ್ಸ್ಮನ್ ಎಂದೇ ಖ್ಯಾತರಾಗಿದ್ದಾರೆ. ಅವರು ಕಳೆದ ಆವೃತ್ತಿಯಲ್ಲಿ ಐಪಿಎಲ್ನಲ್ಲಿ ಆಡಿರಲಿಲ್ಲ. ಆದರೆ 2014ರಲ್ಲಿ ಯುಎಇನಲ್ಲಿ ನಡೆದಿದ್ದ ಟೂರ್ನಮೆಂಟ್ನಲ್ಲಿ ಬೌಲರ್ಗಳನ್ನ ಚೆಂಡಾಡಿದ್ದರು. ಅಲ್ಲದೆ ತಂಡವನ್ನು ಮೊದಲ ಬಾರಿಗೆ ಫೈನಲ್ ತಲುಪಿಸುವಲ್ಲಿ ಇವರ ಪಾತ್ರ ಮಹತ್ವದ್ದಾಗಿತ್ತು.
ವಿಲಿಯರ್ಸ್ ಬಿಟ್ಟರೆ ಯಾವುದೇ ಕೋನದಲ್ಲಾದರೂ ಸಿಕ್ಸರ್ ಸಿಡಿಸಬಲ್ಲ ಏಕೈಕ ಬ್ಯಾಟ್ಸ್ಮನ್ ಆಗಿರುವ ಮ್ಯಾಕ್ಸಿ, 69 ಪಂದ್ಯಗಳಿಂದ 1397 ರನ್ ಸಿಡಿಸಿದ್ದಾರೆ. ಈ ಬಾರಿ ಖಂಡಿತ ಕಿಂಗ್ಸ್ ಇಲೆವೆನ್ಗೆ ಇವರು ಟ್ರಂಪ್ ಕಾರ್ಡ್ ಆಗಲಿದ್ದಾರೆ.
ರಾಜಸ್ಥಾನ ರಾಯಲ್ಸ್- ಬೆನ್ ಸ್ಟೋಕ್ಸ್
ಇಂಗ್ಲೆಂಡ್ ಕನಸಾಗಿದ್ದ ವಿಶ್ವಕಪ್ ಅನ್ನು ಗೆದ್ದುಕೊಡುವಲ್ಲಿ ಯಶಸ್ವಿಯಾಗಿದ್ದ ಬೆನ್ಸ್ಟೋಕ್ಸ್ ಎಲ್ಲಾ ಮಾದರಿಯಲ್ಲೂ ಇಂಗ್ಲೆಂಡ್ ತಂಡದ ಆಧಾರ ಸ್ಥಂಭವಾಗಿದ್ದಾರೆ. 2017ರಲ್ಲಿ ರೈಸಿಂಗ್ ಪುಣೆ ಸೂಪರ್ ಜೇಂಟ್ಸ್ ತಂಡದ ಪರ ಪದಾರ್ಪಣೆ ಕಳೆದ ಎರಡು ಆವೃತ್ತಿಯಿಂದ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿದ್ದಾರೆ. ಇವರು 34 ಪಂದ್ಯಗಳಿಂದ 635 ರನ್ ಹಾಗೂ 26 ವಿಕೆಟ್ ಪಡೆದಿದ್ದಾರೆ.
ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಸ್ಥಿರತೆಯುಳ್ಳ ಆಟಗಾರನಾಗಿರುವ ಅವರು ಖಂಡಿತ ರಾಯಲ್ಸ್ಗೆ ರಾಯಲ್ ಪ್ಲೇಯರ್ ಆಗಲಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು- ವಿರಾಟ್ ಕೊಹ್ಲಿ
ಪದಾರ್ಪಣೆ ಆವೃತ್ತಿಯಿಂದಲೂ ಆರ್ಸಿಬಿ ಭಾಗವಾಗಿರುವ ರನ್ಮಷಿನ್ ಖ್ಯಾತಿಯ ವಿರಾಟ್ ಕೊಹ್ಲಿ ತಂಡದ ಆಧಾರ ಸ್ಥಂಭವಾಗಿದ್ದಾರೆ. ಭಾರತ ತಂಡವಾಗಿರಬಹುದು ಐಪಿಎಲ್ ಆಗಿರಬಹುದು ಕೊಹ್ಲಿ ತಂಡದ ಮ್ಯಾಚ್ವಿನ್ನರ್ ಎಂಬುವುದರಲ್ಲಿ ಎರಡು ಮಾತಿಲ್ಲ. ಕೊಹ್ಲಿ 177 ಪಂದ್ಯಗಳಿಂದ 5 ಶತಕ ಹಾಗೂ 36 ಅರ್ಧಶತಕ ಸೇರಿದಂತೆ 5412 ರನ್ ದಾಖಲಿಸುವ ಮೂಲಕ ಟೂರ್ನಿಯ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದಾರೆ.
2016ರಲ್ಲಿ ಕೊಹ್ಲಿ 16 ಇನ್ನಿಂಗ್ಸ್ಗಳಿಂದ 81.08 ಸರಾಸರಿಯಲ್ಲಿ 4 ಶತಕ ಹಾಗೂ 6 ಅರ್ಧಶತಕ ಸೇರಿದಂತೆ 973 ರನ್ ಸಿಡಿಸಿ ದಾಖಲೆ ಬರೆದಿದ್ದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ 900ರ ಗಡಿ ದಾಟಿದ ಏಕೈಕ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.