ಮುಂಬೈ: ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಟಿ20 ಕ್ರಿಕೆಟ್ ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಮಣಿಸಿ ಚೊಚ್ಚಲ ಟ್ರೋಫಿ ಎತ್ತಿ ಹಿಡಿದಿದ್ದ ಸಾಧನೆಗೀಗ 12 ವರ್ಷಗಳ ಸಂಭ್ರಮ. ಅಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಹೆಡೆಮುರಿಕಟ್ಟಿದ್ದ ಫೈನಲ್ ಪಂದ್ಯ ಇಂದಿಗೂ ನಮ್ಮ ಕಣ್ಣುಮುಂದಿದೆ.
ಚೊಚ್ಚಲ ಟಿ20 ವಿಶ್ವಕಪ್ಗೆ ಸಚಿನ್, ದ್ರಾವಿಡ್, ಗಂಗೂಲಿ ಅನಿಲ್ ಕುಂಬ್ಳೆಯಂತಹ ಹಿರಿಯ ಆಟಗಾರರ ಅನುಪಸ್ಥತಿಯಲ್ಲಿ ವಿಕೆಟ್ ಕೀಪರ್ ಧೋನಿ ನೇತೃತ್ವದಲ್ಲಿ ಯುವ ತಂಡವನ್ನು ದಕ್ಷಿಣ ಆಫ್ರಿಕಾಗೆ ಕಳುಹಿಸಲಾಗಿತ್ತು. ಈ ಟೂರ್ನಿಯಲ್ಲಿ ಭಾರತ ತಂಡದಿಂದ ಚಾಂಪಿಯನ್ ಪಟ್ಟವಿರಲಿ ಲೀಗ್ನಲ್ಲಿ ಹೊರಬರದಿದ್ದರೆ ಸಾಕು ಎನ್ನುವಂತ ಪರಿಸ್ಥಿತಿ ಇತ್ತು. ಏಕೆಂದರೆ ಅದಾಗಲೇ ಏಕದಿನ ವಿಶ್ವಕಪ್ನಲ್ಲಿ ಲೀಗ್ ಹಂತದಲ್ಲೇ ಟೀಂ ಇಂಡಿಯಾ ಹೊರಬಿದ್ದಿತ್ತು.
ಆದರೆ ಭಾರತದ ಯುವ ಪಡೆ ಇಡೀ ವಿಶ್ವವನ್ನೇ ಬೆರಗುಗೊಳಿಸುವಂತಹ ಪ್ರದರ್ಶನ ನೀಡಿತ್ತು. ಸ್ಕಾಟ್ಲೆಂಡ್ ವಿರುದ್ಧ ಮೊದಲ ಪಂದ್ಯ ಮಳೆಗೆ ಆಹುತಿಯಾಗಿತ್ತು. 2ನೇ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಟೈ ಸಾಧಿಸಿ ಬಾಲ್ ಔಟ್ನಲ್ಲಿ ಜಯಗಳಿಸುವ ಮೂಲಕ ಸೂಪರ್ 8 ಪ್ರವೇಶಿಸಿತ್ತು. ನಂತರ ಸೂಪರ್ 8 ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 10 ರನ್ಗಳಿಂದ ಸೋತಿದ್ದ ಟೀಂ ಇಂಡಿಯಾ ನಂತರದ ಪಂದ್ಯದಲ್ಲಿ ಯುವರಾಜ್ ಸಿಂಗ್(6 ಬಾಲಿಗೆ 6 ಸಿಕ್ಸರ್) ಅಬ್ಬರದ ನೆರವಿನಿಂದ ಇಂಗ್ಲೆಂಡ್ ವಿರುದ್ಧ 18 ರನ್ಗಳಿಂದ, ದಕ್ಷಿಣ ಆಫ್ರಿಕಾ ವಿರುದ್ಧ 37 ರನ್ಗಳಿಂದ ಜಯ ಸಾಧಿಸುವ ಮೂಲಕ ಸೆಮಿಫೈನಲ್ ಪ್ರವೇಶ ಪಡೆದಿತ್ತು.
ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿದಿದ್ದ ಭಾರತ ತಂಡ, ಮೊದಲು ಬ್ಯಾಟಿಂಗ್ ನಡೆಸಿ 189 ರನ್ಗಳ ಟಾರ್ಗೆಟ್ ನೀಡಿತ್ತು. ಈ ಮೊತ್ತವನ್ನು ಬೆನ್ನೆತ್ತಿದ್ದ ಆಸ್ಟ್ರೇಲಿಯಾ 20 ಓವರ್ಗಳಲ್ಲಿ 173 ರನ್ ಗಳಿಸಲಷ್ಟೇ ಶಕ್ತವಾಗಿ 15 ರನ್ಗಳಿಂದ ಸೋಲನುಭವಿಸಿತ್ತು. ಈ ಪಂದ್ಯದಲ್ಲಿ ಕೇವಲ 35 ಎಸೆತಗಳಲ್ಲಿ 70 ರನ್ ಗಳಿಸಿದ್ದ ಯುವರಾಜ್ ಸಿಂಗ್ ಭಾರತದ ಗೆಲುವಿಗೆ ಕಾರಣರಾಗಿದ್ದರು.