ಮುಂಬೈ: ಐಪಿಎಲ್ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಶೆಲ್ಡಾನ್ ಕಾಟ್ರೆಲ್ಗೆ ಒಂದೇ ಓವರ್ನಲ್ಲಿ 5 ಸಿಕ್ಸರ್ ಚಚ್ಚಿ ರಾತ್ರೋರಾತ್ರಿ ಖ್ಯಾತಿಗೆ ಪಾತ್ರರಾಗಿದ್ದ ರಾಜಸ್ಥಾನ್ ರಾಯಲ್ಸ್ ತಂಡದ ಆಲ್ರೌಂಡರ್ ರಾಹುಲ್ ತೆವಾಟಿಯಾ ಮತ್ತೆ ಸುದ್ದಿಗೆ ಬಂದಿದ್ದಾರೆ.
ಆದರೆ ಈ ಐಪಿಎಲ್ನಲ್ಲಿ ಅಲ್ಲ, ಬದಲಿರಾಗಿ ತಮ್ಮ ರಾಜ್ಯದ ಹರಿಯಾಣ ಪರ ಅಂತಹದ್ದೇ ಆಟವನ್ನು ತೋರಿಸಿದ್ದಾರೆ. ಭಾನುವಾರ ಮುಂಬೈನಲ್ಲಿ ಡೆಲ್ಲಿ ವಿರುದ್ಧ ನಡೆದ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯದಲ್ಲಿ ಕೇವಲ 16 ಎಸೆತಗಳಲ್ಲಿ 31 ರನ್ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ವಾಂಖೆಡೆಯಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಶಿಖರ್ ಧವನ್ ನೇತೃತ್ವದ ಡೆಲ್ಲಿ ತಂಡ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 182 ರನ್ಗಳಿಸಿತ್ತು. ನಿತೀಶ್ ರಾಣ 66 , ಹಿತೇಶ್ ದಲಾಲ್ 49, ಅನುಜ್ ರಾವತ್ 34 ರನ್ಗಳಿಸಿದ್ದರು.
183 ರನ್ಗಳ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಹರಿಯಾಣದ ತಂಡ 18.2 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿ ತಲುಪಿದೆ. ಆರಂಭಿಕ ಚೈತನ್ಯ ಬಿಷ್ಣೋಯ್ 35, ಶಿವಂ ಚೌಹಾಣ್ 32 ರನ್ಗಳಿಸಿದರೆ, ರೋಹಿತ್ ಪರ್ಮೋದ್ ಶರ್ಮಾ ಕೇವಲ21 ಎಸೆತಗಳಲ್ಲಿ 2 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅಜೇಯ 48, ಹಾಗೂ ರಾಹುಲ್ ತೆವಾಟಿಯಾ 16 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 31 ರನ್ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದ್ದಲ್ಲದೆ ಟೂರ್ನಿಯಲ್ಲಿ ಆಡಿದ 4 ಪಂದ್ಯಗಳಲ್ಲೂ ಗೆಲುವು ಸಾಧಿಸಿ ಕ್ವಾರ್ಟಲ್ ಫೈನಲ್ಗೆ ಮತ್ತಷ್ಟು ಹತ್ತಿರವಾಗಿದೆ.