ಅಬುಧಾಬಿ: ಅನುಭವಿ ಭುವನೇಶ್ವರ್ ಕುಮಾರ್ ಹಾಗೂ ಸ್ಪಿನ್ನರ್ ರಶೀದ್ ಖಾನ್ರ ಅತ್ಯುತ್ತಮ ಬೌಲಿಂಗ್ ನೆರವಿನಿಂದ ಸನ್ರೈಸರ್ಸ್ ಹೈದರಾಬಾದ್ ತಂಡ 15 ರನ್ಗಳಿಂದ ಡೆಲ್ಲಿ ಕ್ಯಾಪಿಟಲ್ ತಂಡವನ್ನು ಮಣಿಸುವ ಮೂಲಕ ಅಂಕಪಟ್ಟಿಯಲ್ಲಿ ಖಾತೆ ತೆರೆದಿದೆ.
ಟೂರ್ನಿಯಲ್ಲಿ ಸತತ ಎರಡು ಸೋಲು ಕಂಡಿದ್ದ ಸನ್ರೈಸರ್ಸ್ ಕೊನೆಗೂ ಡೆಲ್ಲಿ ಕ್ಯಾಪಿಟಲ್ ತಂಡವನ್ನು ತನ್ನ ಬೌಲಿಂಗ್ ಶಕ್ತಿಯಿಂದ ಕಟ್ಟಿ ಹಾಕಿ 15 ರನ್ಗಳಿಂದ ಮಣಿಸುವ ಮೂಲಕ ಪಂದ್ಯದಲ್ಲಿ ಪ್ರಾಬಲ್ಯ ಸಾಧಿಸಿತು.
163 ರನ್ಗಳ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ ಮೊದಲ ಓವರ್ನಲ್ಲೇ ಕಳೆದ ಪಂದ್ಯದ ಹೀರೋ ಪೃಥ್ವಿ ಶಾ ಅವರ ವಿಕೆಟ್ ಕಳೆದುಕೊಂಡಿತು. ಭುವನೇಶ್ವರ್ ಕುಮಾರ್ ಬೌಲಿಂಗ್ನಲ್ಲಿ ಶಾ ಕೀಪರ್ಬೈರ್ಸ್ಟೋವ್ಗೆ ಕ್ಯಾಚ್ ನೀಡಿ ಔಟಾದರು.
ನಂತರ ಬಂದ ನಾಯಕ ಶ್ರೇಯಸ್ ಅಯ್ಯರ್ ವಿಕೆಟ್ ಕಾಯ್ದುಕೊಳ್ಳುವುದಕ್ಕೆ ಮುಂದಾದರೂ ರನ್ಗಳಿಸುವಲ್ಲಿ ವಿಫರಾದರು. ಇವರು ಶಿಖರ್ ಧವನ್ ಜೊತೆಗೂಡಿ 40 ರನ್ಗಳ ಜೊತೆಯಾಟ ನೀಡಿದರು. ಆದರೆ 21 ಎಸೆತಗಳಲ್ಲಿ ಕೇವಲ 17 ರನ್ಗಳಿಸಿ ರಶೀದ್ ಖಾನ್ಗೆ ವಿಕೆಟ್ ಒಪ್ಪಿಸಿದರು. ಶಿಖರ್ ಧವನ್ ಕೂಡ 31 ಎಸೆತಗಳಲ್ಲಿ 34 ರನ್ಗಳಿಸಿ ರಶೀದ್ಗೆ 2ನೇ ಬಲಿಯಾದರು.
4ನೇ ವಿಕೆಟ್ ಜೊತೆಯಾದ ಹೆಟ್ಮೈರ್ ಮತ್ತು ರಿಷಭ್ ಪಂತ್ 42 ರನ್ಗಳ ಜೊತೆಯಾಟ ನೀಡಿ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದರಾದರೂ, 21 ಎಸೆತಗಳಲ್ಲಿ 21 ರನ್ಗಳಿಸಿದ್ದ ಹೆಟ್ಮೈರ್, ಭುವನೇಶ್ವರ್ ಕುಮಾರ್ ಸ್ವಿಂಗ್ ಎಸೆತವನ್ನು ಅರಿಯುವಲ್ಲಿ ವಿಫಲರಾಗಿ ಮನೀಶ್ ಪಾಂಡೆಗೆ ಕ್ಯಾಚ್ ನೀಡಿ ಔಟಾದರು.
ಇವರ ಬೆನ್ನಲ್ಲೇ ಡೆಲ್ಲಿ ತಂಡದ ಆಪತ್ಪಾಂಧವ ಪಂತ್, ರಶೀದ್ ಸ್ಪಿನ್ ಮೋಡಿಗೆ ಬಲಿಯಾದರು. 27 ಎಸೆತಗಳಲ್ಲಿ 2 ಸಿಕ್ಸರ್, ಒಂದು ಬೌಂಡರಿ ಸಹಿತ 28 ರನ್ಗಳಿಸಲಷ್ಟೇ ಶಕ್ತವಾದರು. ಉಳಿದಂತೆ ಸ್ಟೋಯ್ನಿಸ್ 11, ಅಕ್ಷರ್ ಪಟೇಲ್ 5 ರನ್ಗಳಿಸಿ ಔಟಾದರೆ, ರಬಾಡ 15 ರನ್ಗಳಿಸಿ ಔಟಾಗದೆ ಉಳಿದರು.
ಟೂರ್ನಿಯಲ್ಲಿ ಬಲಿಷ್ಠ ಬೌಲಿಂಗ್ ಶಕ್ತಿಯನ್ನು ಹೊಂದಿರುವ ಸನ್ರೈಸರ್ಸ್ ಹೈದರಾಬಾದ್ ತಂಡ ಕೊನೆಗೂ ತನ್ನ ಮೂರನೇ ಪಂದ್ಯದಲ್ಲಿ ಗೆಲುವಿನ ನಗೆ ಬೀರಿತು. ಅನುಭವಿ ಭುವನೇಶ್ವರ್ ಕುಮಾರ್ 25ಕ್ಕೆ 2, ರಶೀದ್ ಖಾನ್ 14ಕ್ಕೆ 3 ಎನ್ ನಟರಾಜನ್ 25ಕ್ಕೆ 1, ಹಾಗೂ ಖಲೀಲ್ ಅಹ್ಮದ್ 43 ಕ್ಕೆ 1 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಇದಕ್ಕು ಮೊದಲು ಬ್ಯಾಟಿಂಗ್ ಮಾಡಿದ್ದ ಸನ್ರೈಸರ್ಸ್ ಹೈದರಾಬಾದ್, ವಾರ್ನರ್ 45, ಬೈರ್ಸ್ಟೋವ್ 53 ಹಾಗೂ ವಿಲಿಯಮ್ಸನ್ ಅವರ 41 ರನ್ಗಳ ನೆರವಿನಿಂದ 162 ರನ್ಗಳಿಸಿತ್ತು.