ದುಬೈ: ಸಿಎಸ್ಕೆ ಬೌಲರ್ಗಳ ಕರಾರುವಾಕ್ ದಾಳಿಯ ನಡುವೆಯೂ ಮೂರು ವರ್ಷಗಳ ಬಳಿಕ ಐಪಿಎಲ್ನಲ್ಲಿ ಆಡುವ ಅವಕಾಶ ಪಡೆದಿದ್ದ ಸೌರಭ್ ತಿವಾರಿ(42) ಉತ್ತಮ ಬ್ಯಾಟಿಂಗ್ ನೆರವಿನಿಂದ ಮುಂಬೈ ಉದ್ಘಾಟನಾ ಪಂದ್ಯದಲ್ಲಿ 162 ರನ್ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿದೆ.
ಶನಿವಾರ ಅಬುಧಾಬಿಯ ಶೇಕ್ ಜಾಯೇದ್ ಸ್ಟೇಡಿಯಂನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಸಿಎಸ್ಕೆ ಮುಂಬೈಗೆ ಬ್ಯಾಟಿಂಗ್ ಆಹ್ವಾನಿಸಿತು. ಇದರಂತೆ ಮುಂಬೈ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 162 ರನ್ಗಳಿಸಿದೆ.
ಆರಂಭಿಕರಾಗಿ ಕಣಕ್ಕಿಳಿದು ಮೊದಲ ಎಸೆತದಲ್ಲೇ ಬೌಂಡರಿ ಸಿಡಿಸಿ ಎದುರಾಳಿಗೆ ಎಚ್ಚರಿಕೆ ನೀಡಿದ್ದ ನಾಯಕ ರೋಹಿತ್ ಶರ್ಮಾ ಸ್ಪಿನ್ನರ್ ಪಿಯುಷ್ ಚಾವ್ಲಾ ಓವರ್ನಲ್ಲಿ ಕೇವಲ 12 ರನ್ಗಳಿಸಿ ಔಟಾದರು. ರೋಹಿತ್ ಬೆನ್ನಲ್ಲೇ ಮತ್ತೊಬ್ಬ ಆರಂಭಿಕ ಬ್ಯಾಟ್ಸ್ಮನ್ ಡಿಕಾಕ್ 20 ಎಸೆತಗಳಲ್ಲಿ 5 ಬೌಂಡರಿ ಸಹಿತ 33 ರನ್ಗಳಿಸಿ ಸ್ಯಾಮ್ ಕರನ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು.
ದೀಪಕ್ ಚಹಾರ್ ವಿಕೆಟ್ ಪಡೆದ ಸಂಭ್ರಮ ಆರಂಭಿಕರ ಪತನದ ನಂತರ ಜೊತೆಗೂಡಿದ ಸೌರಭ್ ತಿವಾರಿ(43) ಹಾಗೂ ಸೂರ್ಯಕುಮಾರ್ ಯಾದವ್(17) 44 ರನ್ಗಳ ಜೊತೆಯಾಟ ನೀಡಿದರು. ಈ ಸಂದರ್ಭದಲ್ಲಿ ಸೂರ್ಯ ಕುಮಾರ್ ಚಹಾರ್ ಬೌಲಿಂಗ್ನಲ್ಲಿ ಕರನ್ಗೆ ಕ್ಯಾಚ್ ನೀಡಿ ಔಟಾದರು. ತಿವಾರಿ 31 ಎಸೆತಗಳಲ್ಲಿ 3 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 42 ರನ್ ಜಡೇಜಾ ಓವರ್ನಲ್ಲಿ ಡುಪ್ಲೆಸಿಸ್ಗೆ ಕ್ಯಾಚ್ ನೀಡಿ ಔಟಾದರು. ಅದೇ ಓವರ್ನಲ್ಲೇ ಹಾರ್ದಿಕ್ ಪಾಂಡ್ಯ(14) ಕೂಡ ಪ್ಲೆಸಿಸ್ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿಕೊಂಡರು.
ನಂತರ ಬಂದ ಯಾವುದೇ ಬ್ಯಾಟ್ಸ್ಮನ್ಗಳು ಸಿಎಸ್ಕೆ ಬೌಲರ್ಗಳ ದಾಳಿಯ ಮುಂದೆ ನಿಲ್ಲಲಾರದಾದರು. ಕೃನಾಲ್ ಪಾಂಡ್ಯ ಕೇವಲ 3 ರನ್, ಕೀರನ್ ಪೊಲಾರ್ಡ್ 18, ಜೇಮ್ಸ್ ಪ್ಯಾಟಿನ್ಸನ್ 11, ಟ್ರೆಂಟ್ ಬೌಲ್ಟ್ 0 ಗೆ ವಿಕೆಟ್ ಒಪ್ಪಿಸಿದರು.
ಒಟ್ಟಾರೆ 20 ಓವರ್ಗಳಲ್ಲಿ ಮುಂಬೈ ಇಂಡಿಯನ್ಸ್ 9 ವಿಕೆಟ್ ನಷ್ಟಕ್ಕೆ 162 ರನ್ಗಳಿಸಿದೆ.
ಸಿಎಸ್ಕೆ ಪರ ಲುಂಗಿ ಎಂಗಿಡಿ 38ಕ್ಕೆ 3, ದೀಪಕ್ ಚಹಾರ್ 32ಕ್ಕೆ 2, ರವೀಂದ್ರ ಜಡೇಜಾ 42ಕ್ಕೆ 2 ಸ್ಯಾಮ್ ಕರನ್ ಹಾಗೂ ಚಾವ್ಲಾ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.