ಮೆಲ್ಬೋರ್ನ್: ಭಾರತ ತಂಡ ಮೊದಲ ಟೆಸ್ಟ್ನಲ್ಲಿ 36 ರನ್ಗಳಿಗೆ ಆಲೌಟ್ ಆಗಿ ಅವಮಾನಕರ ಸೋಲು ಕಂಡ ಬಳಿಕ ಎರಡನೇ ಟೆಸ್ಟ್ನಲ್ಲಿ ತಿರುಗಿ ಬಿದ್ದು ಗೆಲುವು ಸಾಧಿಸಿದ್ದು ಕ್ರಿಕೆಟ್ ಇತಿಹಾಸದ ಅದ್ಭುತ ಪುನರಾಗಮನಗಳಲ್ಲಿ ಒಂದು ಎಂದು ಭಾರತ ತಂಡದ ಹೆಡ್ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.
ಮಂಗಳವಾರ ನಾಲ್ಕನೇ ದಿನ ಆಸ್ಟ್ರೇಲಿಯಾ ತಂಡ ನೀಡಿದ 70 ರನ್ಗಳ ಗುರಿಯನ್ನು ಭಾರತ ತಂಡ 2 ವಿಕೆಟ್ ಕಳೆದುಕೊಂಡು ತಲುಪುವ ಮೂಲಕ ಸರಣಿಯನ್ನು 1-1ರಲ್ಲಿ ಸಮಬಲ ಸಾಧಿಸಿದೆ.
ಈ ಪಂದ್ಯದ ನಂತರ ಮಾತನಾಡಿದ ಟೀಮ್ ಇಂಡಿಯಾ ಕೋಚ್ ರವಿಶಾಸ್ತ್ರಿ, "ಈ ಗೆಲುವು ಕ್ರಿಕೆಟ್ ಇತಿಹಾಸದ ಅತ್ಯುತ್ತಮ ಪುನರಾಗಮನಗಳಲ್ಲಿ ಒಂದು. ಮೊದಲ ಪಂದ್ಯದಲ್ಲಿ 36 ರನ್ಗಳಿಗೆ ಔಟಾದ ತಂಡ ಮತ್ತೆ ಈ ರೀತಿ ತಿರುಗಿ ಬೀಳುವುದು ನಿಜಕ್ಕೂ ನಂಬಲಸಾಧ್ಯವಾದದ್ದು" ಎಂದಿದ್ದಾರೆ.
ರಹಾನೆ ನಾಯಕತ್ವದ ಬಗ್ಗೆ ಮಾತನಾಡಿದ ಶಾಸ್ತ್ರಿ, "ಆತ ಬಹಳ ತಾಳ್ಮೆ ಮತ್ತು ಸಂಯೋಜನೆಯುಳ್ಳ ವ್ಯಕ್ತಿ. ತಂಡ 60ಕ್ಕೆ 2 ವಿಕೆಟ್ ಕಳೆದುಕೊಂಡಿದ್ದಾಗ ಬ್ಯಾಟಿಂಗ್ಗೆ ತೆರಳಿದ ಅವರು 6 ಗಂಟೆಗಳ ಕಾಲ ಬ್ಯಾಟಿಂಗ್ ಮಾಡಿ ಅದ್ಭುತ ಶತಕ ಸಿಡಿಸಿದರು. ಅದು ಪಂದ್ಯದ ಟರ್ನಿಂಗ್ ಪಾಯಿಂಟ್. ಅವರು ಪಂದ್ಯವನ್ನು ಅತ್ಯುತ್ತಮವಾಗಿ ಓದುತ್ತಾರೆ. ಹಾಗಾಗಿ ಅವರೊಬ್ಬ ನಿಜವಾದ ನಾಯಕ. ಅಲ್ಲದೆ ಬೌಲರ್ಗಳನ್ನು ಬಳಸಿಕೊಂಡ ರೀತಿಗೆ ಅವರಿಗೆ ಹ್ಯಾಟ್ಸ್ಅಪ್ ಹೇಳಬೇಕು" ಎಂದು ಹೇಳಿದ್ದಾರೆ.
ಇನ್ನು ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಶುಭ್‍ಮನ್ ಗಿಲ್ ಹಾಗೂ ಮೊಹಮ್ಮದ್ ಸಿರಾಜ್ ಆಡಿದ ರೀತಿ ಕೂಡ ಉತ್ತಮವಾಗಿತ್ತು. ಸಿರಾಜ್ ಮೊದಲ ಪಂದ್ಯವಾದರೂ ಶಿಸ್ತಿನಿಂದ ಲಾಂಗ್ ಸ್ಪೆಲ್ ಬೌಲಿಂಗ್ ಮಾಡಿದರು. ಗಿಲ್ ಕೂಡ ಮೊದಲ ಪಂದ್ಯದಲ್ಲೇ ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡಿದರು. ಈ ಇಬ್ಬರು ಹುಡುಗರು ಮುಂಬರುವ ಪಂದ್ಯಗಳಲ್ಲೂ ಇದೇ ಪ್ರದರ್ಶನ ಮುಂದುವರೆಸಿಕೊಂಡು ಹೋಗಲಿದ್ದಾರೆ ಎಂಬ ಭರವಸೆ ಇದೆ ಎಂದು ಶಾಸ್ತ್ರಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ರೋಹಿತ್ ಬಗ್ಗೆ ಕೇಳಿದ್ದಕ್ಕೆ, ಶರ್ಮಾ ನಾಳೆ ತಂಡವನ್ನು ಸೇರಿಕೊಳ್ಳಲಿದ್ದಾರೆ. ಮೊದಲಿಗೆ ಅವರ ದೇಹ ಸ್ಥಿತಿ ಹೇಗಿದೆ ಎನ್ನುವುದರ ಬಗ್ಗೆ ಮಾತನಾಡುತ್ತೇವೆ. ಏಕೆಂದರೆ ಅವರು ಎರಡು ವಾರಗಳ ಕಾಲ ಕ್ವಾರಂಟೈನ್ ಮುಗಿಸಿ ಬಂದಿದ್ದಾರೆ. ನಂತರ ಮೂರನೇ ಪಂದ್ಯದಲ್ಲಿ ಆಡುವ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದ್ದಾರೆ.