ಅಹ್ಮದಾಬಾದ್ :ಭಾರತ ಮತ್ತು ಇಂಗ್ಲೆಂಡ್ ನಡುವಿನ 3ನೇ ಟೆಸ್ಟ್ ಪಂದ್ಯ ಬುಧವಾರದಿಂದ ಅಹ್ಮದಾಬಾದ್ನಲ್ಲಿ ನಡೆಯಲಿದೆ. ಸರಣಿಯಲ್ಲಿ ತಲಾ ಒಂದು ಜಯ ಕಂಡಿರುವ ಎರಡೂ ತಂಡಗಳಿಗೂ ಈ ಟೆಸ್ಟ್ ಪಂದ್ಯ ನಿರ್ಣಾಯಕವಾಗಲಿದೆ.
2014ರ ಬಳಿಕ ಈ ಕ್ರೀಡಾಂಗಣದಲ್ಲಿ ಮೊದಲ ಅಂತಾರಾಷ್ಟ್ರೀಯ ಪಂದ್ಯ ನಡೆಯಲಿದೆ. ನವೀಕರಣಗೊಂಡ ನಂತರ ಈ ಮೈದಾನದಲ್ಲಿ ಕೇವಲ ದೇಶಿ ಟಿ20 ಲೀಗ್ನ ನಾಕೌಟ್ ಪಂದ್ಯಗಳು ಮಾತ್ರ ನಡೆದಿವೆ. ಪ್ರೇಕ್ಷಕರ ಸಮ್ಮುಖದಲ್ಲಿ ನಡೆಯಲಿರುವ ಮೊದಲ ಅಂತಾರಾಷ್ಟ್ರೀಯ ಪಂದ್ಯ ಅತ್ಯಾಕರ್ಷಣೀಯವಾಗಿದೆ.
ಈ ಮೊಟೆರಾ ಕ್ರೀಡಾಂಗಣ ಈ ಹಿಂದೆ ಹಲವು ಅದ್ಭುತ ಮೈಲುಗಲ್ಲುಗಳಿಗೆ ಸಾಕ್ಷಿಯಾಗಿದೆ. ಲಿಟ್ಲ್ ಮಾಸ್ಟರ್ ಖ್ಯಾತಿಯ ಸುನೀಲ್ ಗವಾಸ್ಕರ್ 10,000 ಟೆಸ್ಟ್ ರನ್ ಪೂರೈಸಿದ್ದು ಮತ್ತು ಕಪಿಲ್ ದೇವ್ ಅತ್ಯುತ್ತಮ ಬೌಲಿಂಗ್ ಪ್ರದರ್ಶನ (83ಕ್ಕೆ9) ನೀಡಿದ್ದು ಇಲ್ಲೇ ಎಂಬುದು ವಿಶೇಷ.
ಬುಧವಾರ ಆರಂಭವಾಗಲಿರುವ ಟೆಸ್ಟ್ ಪಂದ್ಯ ಭಾರತ ತಂಡದ ವೇಗಿ ಇಶಾಂತ್ ಶರ್ಮಾ ಅವರ 100ನೇ ಟೆಸ್ಟ್ ಪಂದ್ಯವಾಗಲಿದೆ. ದಿಗ್ಗಜ ಕಪಿಲ್ ದೇವ್ ನಂತರ 100ನೇ ಟೆಸ್ಟ್ ಪಂದ್ಯವನ್ನಾಡಿದ 2ನೇ ವೇಗದ ಬೌಲರ್ ಎಂಬ ಶ್ರೇಯಕ್ಕೆ ದೆಹಲಿ ವೇಗಿ ಪಾತ್ರರಾಗಲಿದ್ದಾರೆ.
ಕಳೆದ ಎರಡು ವರ್ಷಗಳಿಂದ ಶತಕದ ಬರ ಎದುರಿಸುತ್ತಿರುವ ನಾಯಕ ವಿರಾಟ್ ಕೊಹ್ಲಿಗೆ 55 ಸಾವಿರ ಪ್ರೇಕ್ಷಕರ ಮುಂದೆ ಸೆಂಚುರಿ ಸಿಡಿಸುವ ಅವಕಾಶ ಸಿಕ್ಕಿದೆ.
ಬಹಳ ವರ್ಷಗಳಿಂದ ಟೆಸ್ಟ್ ಕ್ರಿಕೆಟ್ ನಡೆಯದಿರುವ ಈ ಕ್ರೀಡಾಂಗಣದಲ್ಲಿ ಹೆಚ್ಚಿನ ಅನುಕೂಲವನ್ನು ತವರು ತಂಡ ಪಡೆಯಲಿದೆ ಎನ್ನಲಾಗುತ್ತಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಕನಸಿನಲ್ಲಿರುವ ಭಾರತ ತಂಡಕ್ಕೆ ಸರಣಿಯಲ್ಲಿ 2-1ರಲ್ಲಿ ಮುನ್ನಡೆ ಸಾಧಿಸುವ ಅವಕಾಶ ಕೂಡ ಹೆಚ್ಚಿದೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬ್ಯಾಟ್ಸ್ಮನ್ ರೋಹಿತ್ ಶರ್ಮಾ, ಈ ಪಿಚ್ ಸ್ಪಿನ್ನರ್ಗಳಾದ ಅಶ್ವಿನ್, ಅಕ್ಸರ್ ಪಟೇಲ್ ಅವರಂತಹ ಬೌಲರ್ಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ. ಜೊತೆಗೆ ಇಂದು ಕೊಹ್ಲಿ ಕೂಡ ಅದೇ ಮಾತನ್ನು ಪುನರುಚ್ಚರಿಸಿದ್ದಾರೆ. ಆದರೂ ಪಿಂಕ್ ಬಾಲ್ನಲ್ಲಿ ಹೊಳಪು ಮಾಸುವ ಮುನ್ನ ವೇಗಿಗಳು ಕೂಡ ಮಿಂಚಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಉಮೇಶ್ ಯಾದವ್ ಸೇರ್ಪಡೆ :ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್ ವೇಳೆ ಗಾಯಗೊಂಡಿದ್ದ ಉಮೇಶ್ ಯಾದವ್ ಸೋಮವಾರ ಫಿಟ್ನೆಸ್ ಟೆಸ್ಟ್ ಪಾಸ್ ಮಾಡಿದ್ದಾರೆ. ಮಂಗಳವಾರ ಭಾರತ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.
ಉಮೇಶ್ ಯಾದವ್ ತಂಡಕ್ಕೆ ಸೇರ್ಪಡೆಗೊಂಡಿರುವುದರಿಂದ ಕುಲ್ದೀಪ್ ಯಾದವ್ 3ನೇ ಟೆಸ್ಟ್ನಲ್ಲಿ ಹೊರಗುಳಿಯುವ ಸಾಧ್ಯತೆಯಿದೆ.
ಇತ್ತ ಇಂಗ್ಲೆಂಡ್ ಪರ ಮೊದಲೆರಡು ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿದ್ದ ಜಾನಿ ಬೈರ್ಸ್ಟೋವ್ ತಂಡಕ್ಕೆ ಸೇರಿಕೊಂಡಿರುವುದರಿಂದ ಆಂಗ್ಲರ ಬ್ಯಾಟಿಂಗ್‌ಗೆ ಬಲ ಬಂದಿದೆ. ಜೊತೆಗೆ ಗಾಯಾಳು ಕ್ರಾಲೆ ಕೂಡ ಚೇತರಿಸಿಕೊಂಡಿದ್ದು, 3ನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ.
ಆದರೆ, ಮೋಯಿನ್ ಅಲಿ ತವರಿಗೆ ಮರಳಿರುವುದರಿಂದ ಸ್ಪಿನ್ ಬೌಲಿಂಗ್ ಬಲ ಕುಗ್ಗಿದೆ. ಆದರೂ ಶ್ರೇಷ್ಠ ವೇಗಿಗಳನ್ನು ಹೊಂದಿರುವ ಇಂಗ್ಲೆಂಡ್ ಭಾರತ ತಂಡಕ್ಕೆ ಕಠಿಣ ಸವಾಲನ್ನೊಡ್ಡಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಭಾರತ : ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಮಯಾಂಕ್ ಅಗರ್ವಾಲ್, ಶುಭಮನ್ ಗಿಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ (ಉಪನಾಯಕ), ಕೆ.ಎಲ್. ರಾಹುಲ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ (ವಿಕೆಟ್ ಕೀಪರ್), ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್) ಆರ್ ಅಶ್ವಿನ್, ಕುಲದೀಪ್ ಯಾದವ್, ಅಕ್ಸರ್ ಪಟೇಲ್, ವಾಷಿಂಗ್ಟನ್ ಸುಂದರ್, ಇಶಾಂತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್.
ಇಂಗ್ಲೆಂಡ್ : ಜೋ ರೂಟ್ (ನಾಯಕ), ಜೇಮ್ಸ್ ಆ್ಯಂಡರ್ಸನ್, ಜೋಫ್ರಾ ಆರ್ಚರ್, ಜಾನಿ ಬೈರ್‌ಸ್ಟೋವ್, ಡೊಮಿನಿಕ್ ಬೆಸ್, ಸ್ಟುವರ್ಟ್ ಬ್ರಾಡ್, ರೋರಿ ಬರ್ನ್ಸ್, ಜ್ಯಾಕ್ ಕ್ರಾಲೆ, ಬೆನ್ ಫೋಕ್ಸ್, ಡಾನ್ ಲಾರೆನ್ಸ್, ಜ್ಯಾಕ್ ಲೀಚ್, ಒಲ್ಲಿ ಪೋಪ್, ಡೊಮ್ ಸಿಬ್ಲಿ, ಬೆನ್ ಸ್ಟೋಕ್ಸ್, ಒಲಿ ಸ್ಟೋನ್, ಕ್ರಿಸ್ ವೋಕ್ಸ್, ಮಾರ್ಕ್ ವುಡ್.