ಹೈದರಾಬಾದ್:ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ನಡುವಿನ ವಿಶ್ವಕಪ್ ಫೈನಲ್ ಪಂದ್ಯದ ಸೂಪರ್ ಓವರ್ ನಡೆಯುವ ವೇಳೆ ಕಿವೀಸ್ ಆಟಗಾರ ಜಿಮ್ಮಿ ನಿಶಮ್ ಬಾಲ್ಯದ ಕೋಚ್ ಡೇವಿಡ್ ಜೆಮ್ಸ್ ಜಾರ್ಡನ್ ಸಾವಿಗೀಡಾಗಿದ್ದಾರೆ.
ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ತಂಡದ ನಡುವೆ ನಡೆದ ವಿಶ್ವಕಪ್ ಫೈನಲ್ ಪಂದ್ಯ ಡ್ರಾ ಆದಗ ಐಸಿಸಿ, ಸೂಪರ್ ಓವರ್ ನಡೆಸಲು ನಿರ್ಧರಿಸಿತು. ಸೂಪರ್ ಓವರ್ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ತಂಡ 15 ರನ್ಗಳಿಸಿ 16 ರನ್ಗಳ ಟಾರ್ಗೆಟ್ ನೀಡಿತು.
ಸೂಪರ್ ಓವರ್ನಲ್ಲಿ ಕಿವೀಸ್ ಪರ ಬ್ಯಾಟಿಂಗ್ ನಡೆಸಲು ಕಣಕ್ಕಿಳಿದ ಜಿಮ್ಮಿ ನಿಶಮ್ ಮೊದಲ ಎಸೆತದಲ್ಲಿ 2 ರನ್ ಗಳಿಸಿ ಎರಡನೇ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ್ರು. ಈ ವೇಳೆ ಡೇವಿಡ್ ಜೆಮ್ಸ್ ಜಾರ್ಡನ್ ಪುತ್ರಿ ಲಿಯೋನಿ, ತಂದೆಗೆ ನಿಶಮ್ ಸಿಕ್ಸ್ ಸಿಡಿಸಿದ್ದಾಗಿ ತಿಳಿಸಿದ್ದಾರೆ. ಅದೇ ಸಮಯದಲ್ಲಿ ಡೇವಿಡ್ ಜೆಮ್ಸ್ ಜಾರ್ಡನ್ ಉಸಿರಾಟ ನಿಲ್ಲಿಸಿದ್ದಾರೆ.
ತಂದೆಯ ಸಾವಿನ ವಿಷಯವನ್ನ ಪುತ್ರಿ ಲಿಯೋನಿ, ನಿಶಮ್ಗೆ ತಿಳಿಸಿದ್ದಾರೆ. ವಿಷಯ ತಿಳಿದ ನಿಶಮ್ ಟ್ವಿಟ್ಟರ್ನಲ್ಲಿ ಸಂತಾಪ ಸೂಚಿಸಿದ್ದಾರೆ. ಡೇವಿಡ್ ಜೆಮ್ಸ್ ಜಾರ್ಡನ್ ನನಗೆ ಶಿಕ್ಷಕ, ಸ್ನೇಹಿತ, ತರಬೇತುದಾರನಾಗಿದ್ದರು. ಅವರಿಗೆ ಕ್ರಿಕೆಟ್ ಎಂದರೆ ತುಂಬಾ ಪ್ರೀತಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಟ್ವೀಟ್ ಮಾಡಿದ್ದಾರೆ.
ಕಳೆದ ಕೆಲ ವಾರಗಳ ಹಿಂದೆಯಷ್ಟೆ ಜಾರ್ಡನ್ ಅವರಿಗೆ ಹೃದಯ ವೈಫಲ್ಯವಾಗಿದ್ದರಿಂದ ಚಿಕಿತ್ಸೆ ಪಡೆಯುತ್ತಿದ್ದರು. ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದ ಲೂಕಿ ಫರ್ಗ್ಯುಸನ್ ಅವರಿಗೂ ಜಾರ್ಡನ್ ತರಬೇತುದಾರರಾಗಿದ್ದರು.