ಮುಂಬೈ: ಸಚಿನ್ ತೆಂಡೂಲ್ಕರ್ ಹಾಗೂ ಸೌರವ್ ಗಂಗೂಲಿ ನಂತರ ಭಾರತದ ಯಶಸ್ವಿ ಜೋಡಿ ಎನಿಸಿಕೊಂಡಿರುವ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಆರಂಭಿಕರಾಗಿ ಹಲವಾರು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಧವನ್ ಆರಂಭಿಕನಾಗಿಯೇ ತಮ್ಮ ವೃತ್ತಿ ಜೀವನ ಆರಂಭಿಸಿದರು. ಅವರು ಅಂದಿನಿಂದಲೂ ಆಕ್ರಮಣಕಾರಿ ಮನೋಭಾವದವರು. ಆದರೆ 2013ರಲ್ಲಿ ರೋಹಿತ್ ಜೊತೆಯಾದ ಮೇಲೆ ಈ ಜೋಡಿ ವಿಶ್ವದ ಶ್ರೇಷ್ಠ ಜೋಡಿಯಾಗಿ ಹೊರ ಹೊಮ್ಮಿತ್ತು.
ಈ ಇಬ್ಬರು ಆಟಗಾರರು ಮೈದಾನದ ಒಳಗೆ ಮತ್ತು ಹೊರಗೆ ಅನ್ಯೋನ್ಯವಾಗಿದ್ದಾರೆ. ಉತ್ತಮ ಸ್ನೇಹಿತರಾಗಿರುವ ಇವರಿಬ್ಬರು ಒಬ್ಬರನ್ನೊಬ್ಬರು ಅರಿತಿರುವುದೇ ಈ ಜೋಡಿಯ ಯಶಸ್ಸಿಗೆ ಕಾರಣ ಎಂದು ಭಾರತದ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ಅಭಿಪ್ರಾಯಪಟ್ಟಿದ್ದಾರೆ. ಅದರಲ್ಲೂ ರೋಹಿತ್ ಬ್ಯಾಟಿಂಗ್ ಯಶಸ್ಸಿಗೆ ಧವನ್ ಕೊಡಯಗೆ ಮಹತ್ವದ್ದಾಗಿದೆ ಎಂದಿದ್ದಾರೆ.
ಧವನ್ ಆರಂಭದಿಂದಲೇ ಆಕ್ರಮಕಾರಿ ಆಟ ಪ್ರದರ್ಶನದ ಮೂಲಕ ರನ್ ಗತಿ ಏರಿಸಲು ಪ್ರಯತ್ನಿಸುತ್ತಾರೆ. ಇದರಿಂದ ರೋಹಿತ್ಗೆ ಕ್ರೀಸ್ನಲ್ಲಿ ನೆಲೆಯೂರಲು ಸಾಕಷ್ಟು ಸಮಯವನ್ನು ಅವರು ನೀಡುತ್ತಾರೆ. ರೋಹಿತ್ ಒಮ್ಮೆ ಸೆಟ್ ಆದರೆ ಆಟದ ದಿಕ್ಕನ್ನೇ ಬದಲಾಯಿಸುತ್ತಾರೆ. ಅದಕ್ಕೆ ಬೇಕಾಗುವ ಸಮಯವನ್ನು ಧವನ್ ಮಾಡಿಕೊಡುತ್ತಿದ್ದಾರೆ ಎಂದು ಪಠಾಣ್ ಹೇಳಿದ್ದಾರೆ.
ಜೊತೆಯಾಗಿ ಆಡುವಾಗ ಜೊತೆಗಾರ ಆಟಗಾರರ ಬಲ-ದೌರ್ಬಲ್ಯಗಳ ಬಗ್ಗೆ ಇಬ್ಬರಿಗೂ ಅರಿವಿರಬೇಕು. ಇದನ್ನು ಧವನ್ ಚೆನ್ನಾಗಿ ಅರಿತಿದ್ದಾರೆ. ರೋಹಿತ್ಗೆ ಸೆಟ್ ಆಗಲು ಬೇಕಾಗಿರುವ ಸಮಯವನ್ನು ಧವನ್ ಒದಗಿಸಿಕೊಡುತ್ತಾರೆ. ಅಲ್ಲದೆ ತಾವೂ ರನ್ ಗಳಿಸುವ ಮೂಲಕ ಒತ್ತಡವನ್ನು ನಿಭಾಯಿಸಿಕೊಳ್ಳುತ್ತಾರೆ. ಬೌಲಿಂಗ್ನಲ್ಲಿ ಸ್ಪಿನ್ನರ್ಗಳು ಬರುವ ಸಮಯಕ್ಕೆ ರೋಹಿತ್ ಲಯ ಕಂಡುಕೊಂಡು ಸುಲಭವಾಗಿ ರನ್ ಗಳಿಸುವ ಮೂಲಕ ಧವನ್ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತಾರೆ ಎಂದು ಹೀಗೆ ಇಬ್ಬರ ನಡುವಿನ ಹೊಂದಾಣಿಕೆ ಭಾರತ ತಂಡಕ್ಕೆ ನೆರವಾಗುತ್ತಿದೆ ಎಂದು ಪಠಾಣ್ ಹೇಳಿದ್ದಾರೆ.
ಭಾರತೀಯ ಈ ಜೋಡಿ 109 ಏಕದಿನ ದಿನ ಪಂದ್ಯಗಳಿಂದ 4847 ರನ್ ಗಳಿಸಿದೆ. ಇದರಲ್ಲಿ 16 ಶತಕ ಹಾಗೂ 14 ಅರ್ಧಶತಕ ಸೇರಿವೆ.