ಅಬುಧಾಬಿ: ನಿತೀಶ್ ರಾಣಾ ಅಬ್ಬರದ ಬ್ಯಾಟಿಂಗ್ ಹಾಗೂ ವರುಣ್ ಚಕ್ರವರ್ತಿ, ಕಮ್ಮಿನ್ಸ್ ಅವರ ಅದ್ಭುತ ಬೌಲಿಂಗ್ ನೆರವಿನಿಂದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 59 ರನ್ಗಳ ಅಂತರದಿಂದ ಮಣಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್ ನಿತೀಶ್ ರಾಣಾ(81) ಹಾಗೂ ಸುನೀಲ್ ನರೈನ್(64) ಅವರ ಭರ್ಜರಿ ಅರ್ಧಶತಕದ ನೆರವಿನಿಂದ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 194 ರನ್ಗಳಿಸಿತ್ತು. ಇದಕ್ಕುತ್ತರವಾಗಿ ಡೆಲ್ಲಿ ತಂಡ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು133 ರನ್ಗಳಿಸಿ 59 ರನ್ಗಳ ಹೀನಾಯ ಸೋಲು ಕಂಡಿತು.
195 ರನ್ಗಳ ಗುರಿ ಪಡೆದ ಡೆಲ್ಲಿ ಕಳಪೆ ಆರಂಭ ಪಡೆಯಿತು. ಅಜಿಂಕ್ಯಾ ರಹಾನೆ ಡಕ್ ಔಟಾದರೆ, ಕಳೆದೆರಡು ಪಂದ್ಯಗಳಲ್ಲಿ ಶತಕ ಸಿಡಿಸಿದ್ದ ಧವನ್ 6 ರನ್ಗಳಿಸಿ ಪ್ಯಾಟ್ ಕಮ್ಮಿನ್ಸ್ಗೆ ವಿಕೆಟ್ ನೀಡಿದರು.
ಆದರೆ 3ನೇ ವಿಕೆಟ್ಗೆ 63 ರನ್ಗಳ ಜೊತೆಯಾಟ ನೀಡಿದ ನಾಯಕ ಶ್ರೇಯಸ್ ಅಯ್ಯರ್ ಹಾಗೂ ಪಂತ್ ಚೇತರಿಕೆ ನೀಡಿದರಾದರು ನಿರ್ಣಾಯಕ ಹಂತದಲ್ಲಿ ಇಬ್ಬರು ವಿಕೆಟ್ ಒಪ್ಪಿಸಿದರು. ನಿಧಾನಗತಿ ಆಟವಾಡಿದ ಪಂತ್ 33 ಎಸೆತಗಳಲ್ಲಿ 27 ರನ್ಗಳಿಸಿದರು. ನಂತರ ಬಂದ ಹೆಟ್ಮೈರ್ 10 ರನ್ ಹಾಗೂ 38 ಎಸೆತಗಳಲ್ಲಿ 47 ರನ್ಗಳಿಸಿದ್ದ ಅಯ್ಯರ್ ಬ್ಯಾಕ್ ಟು ಬ್ಯಾಕ್ ಎಸೆತಗಳಲ್ಲಿ ವರುಣ್ ವಕ್ರವರ್ತಿಗೆ ವಿಕೆಟ್ ಒಪ್ಪಿಸಿದರು.
ನಂತರ ಬಂದಂತಹ ಸ್ಟೋಯ್ನಿಸ್ 6, ಅಕ್ಷರ್ ಪಟೇಲ್ 9, ರಬಾಡ 9 ತುಷಾರ್ ದೇಶಪಾಂಡೆ 1 ರನ್ಗಳಿಗೆ ಔಟಾದರು. ಅಶ್ವಿನ್ 14 ರನ್ಗಳಿಸಿ ಔಟಾಗದೆ ಉಳಿದರು.
ಕೋಲ್ಕತ್ತಾ ನೈಟ್ ರೈಡರ್ಸ್ ಪರ ವರುಣ್ ಚಕ್ರವರ್ತಿ 20 ರನ್ ನೀಡಿ 5 ವಿಕೆಟ್ ಪಡೆದರೆ, ಪ್ಯಾಟ್ ಕಮ್ಮಿನ್ಸ್ 17 ರನ್ ನೀಡಿ 3 ವಿಕೆಟ್ ಪಡೆದರು. ಲೂಕಿ ಫರ್ಗ್ಯಷನ್ 1 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.