ನವದೆಹಲಿ: ಇಂಗ್ಲೆಂಡ್ ಆಲ್ರೌಂಡರ್ ಕ್ರಿಸ್ ವೋಕ್ಸ್ ಬದಲಿಗೆ ದಕ್ಷಿಣ ಆಫ್ರಿಕಾದ ಬೌಲರ್ ಎನ್ರಿಚ್ ನಾರ್ಟ್ಜೆ ಅವರನ್ನು ಮುಂದಿನ ಐಪಿಎಲ್ ಆವೃತ್ತಿಗಾಗಿ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಡೆಲ್ಲಿ ಕ್ಯಾಪಿಟಲ್ ಫ್ರಾಂಚೈಸಿ ಮಂಗಳವಾರ ಖಚಿತಪಡಿಸಿದೆ.
ಎನ್ರಿಚ್ ನಾರ್ಟ್ಜೆ ಕಳೆದ ಐಪಿಎಲ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿದ್ದರು. ಆದರೆ ಭುಜದ ಗಾಯಕ್ಕೆ ಒಳಗಾಗಿದ್ದರಿಂದ ಅವರು ಐಪಿಎಲ್ನಲ್ಲಿ ಆಡುವ ಅವಕಾಶ ತಪ್ಪಿಸಿಕೊಂಡಿದ್ದರು.
ನಾರ್ಟ್ಜೆ ದಕ್ಷಿಣ ಆಫ್ರಿಕಾ ಪರ 2019ರಲ್ಲಿ ಭಾರತದ ವಿರುದ್ಧ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಒಟ್ಟಾರೆ 6 ಟೆಸ್ಟ್ ಪಂದ್ಯಗಳಲ್ಲಿ 19 ವಿಕೆಟ್, 7 ಏಕದಿನ ಪಂದ್ಯಗಳಲ್ಲಿ 14 ವಿಕೆಟ್ ಹಾಗೂ 3 ಟಿ-20ಯಲ್ಲಿ 2 ವಿಕೆಟ್ ಪಡೆದಿದ್ದಾರೆ. ಇವರು ಕ್ರಿಕೆಟ್ ದಕ್ಷಿಣ ಆಫ್ರಿಕಾದ 2020ರ ವರ್ಷದ ಉತ್ತಮ ಹೊಸ ಆಟಗಾರ(Newcomer of the Year for 2020)' ಪ್ರಶಸ್ತಿ ಪಡೆದುಕೊಂಡಿದ್ದರು.
2019ರ ಐಪಿಎಲ್ ಹರಾಜಿನಲ್ಲಿ 1.5 ಕೋಟಿಗೆ ಡೆಲ್ಲಿ ಕ್ಯಾಪಿಟಲ್ ಖರೀದಿಸಿತ್ತು. ಆದರೆ ವೋಕ್ಸ್ ಮುಂಬರುವ ಬೇಸಿಗೆ ಆವೃತ್ತಿಯ ಕ್ರಿಕೆಟ್ಗೆ ತಯಾರಾಗಲು ಹಾಗೂ ಫಿಟ್ನೆಸ್ ಕಾಪಾಡಿಕೊಳ್ಳುವ ದೃಷ್ಟಿಯಿಂದ 2020ರ ಐಪಿಎಲ್ನಿಂದ ಹೊರ ಉಳಿಯುವುದಾಗಿ ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
2020ರ ಐಪಿಎಲ್ ಸೆಪ್ಟೆಂಬರ್ 19ರಿಂದ ಯುಎಇನಲ್ಲಿ ಆರಂಭವಾಗಲಿದೆ. ನವೆಂಬರ್ 10ರಂದು ಟೂರ್ನಮೆಂಟ್ ಫೈನಲ್ ಪಂದ್ಯ ನಡೆಯಲಿದೆ.