ಅಹಮದಾಬಾದ್:ಇಂಗ್ಲೆಂಡ್ ವಿರುದ್ಧದ ಮೂರನೇ ಟಿ-20 ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ಆರಂಭಿಕ ವೈಫಲ್ಯ ಅನುಭವಿಸಿತು. ಇದ್ರ ನಡುವೆ ಕ್ಯಾಪ್ಟನ್ ವಿರಾಟ್ ಕೊಹ್ಲಿ ತಂಡಕ್ಕೆ ಆಕರ್ಷಕ 77 ರನ್ನುಗಳ ಕೊಡುಗೆ ನೀಡಿದರು. ಈ ಮೂಲಕ ಟೀ ಇಂಡಿಯಾ, ಇಂಗ್ಲೆಂಡ್ ತಂಡಕ್ಕೆ 157 ರನ್ಗಳ ಟಾರ್ಗೆಟ್ ನೀಡಿದೆ.
ಬ್ಯಾಟಿಂಗ್ನಲ್ಲಿ ಅಬ್ಬರಿಸಿದ ವಿರಾಟ್ ಕೊಹ್ಲಿ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಕನ್ನಡಿಗ ಕೆ.ಎಲ್ ರಾಹುಲ್ ಹಾಗೂ ಹಿಟ್ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಮಾರ್ಕ್ ವುಡ್ ಎಸೆದ ಓವರ್ನಲ್ಲಿ ರಾಹುಲ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ಮತ್ತೊಮ್ಮೆ ನಿರಾಸೆ ಅನುಭವಿಸಿದರು.
ಇದಾದ ಬಳಿಕ ಕಣಕ್ಕಿಳಿದ ಹಿಂದಿನ ಪಂದ್ಯದ ಹೀರೋ ಇಶಾನ್ ಕಿಶನ್ ಕೂಡ 4 ರನ್ಗಳಿಕೆ ಮಾಡಿ ಜೋರ್ಡನ್ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ರೋಹಿತ್ ಶರ್ಮಾ 15 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಈ ಮೂಲಕ ಟೀಂ ಇಂಡಿಯಾ 5.2 ಓವರ್ಗಳಲ್ಲಿ 24ರನ್ ಗಳಿಸುವಷ್ಟರಲ್ಲಿ ಪ್ರಮುಖ ಮೂರು ವಿಕೆಟ್ ಕಳೆದುಕೊಂಡಿತು.
ಈ ವೇಳೆ ಒಂದಾದ ರಿಷಭ್ ಪಂತ್ ಹಾಗೂ ಕ್ಯಾಪ್ಟನ್ ವಿರಾಟ್ ಕೊಹ್ಲಿ ತಂಡಕ್ಕೆ ಆಸರೆಯಾದರು. ಈ ಜೋಡಿ ತಂಡದ ಮೊತ್ತ ಏರಿಸುವ ಜೊತೆಗೆ ಎಚ್ಚರಿಕೆ ಆಟವಾಡಿತು. ಆದರೆ 25ರನ್ ಗಳಿಕೆ ಮಾಡಿದ್ದ ವೇಳೆ ರಿಷಭ್ ಪಂತ್ ಇಲ್ಲದ ರನ್ ಕದಿಯಲು ಹೋಗಿ ರನೌಟ್ ಬಲೆಗೆ ಬಿದ್ದರು. ಇದರ ಬೆನ್ನಲ್ಲೇ ಬಂದ ಶ್ರೇಯಸ್ ಅಯ್ಯರ್ ಕೂಡ 9ರನ್ ಗಳಿಕೆ ಮಾಡಿ ನಿರಾಸೆ ಮೂಡಿಸಿದರು. ಈ ವೇಳೆ ತಂಡದ ಸ್ಕೋರ್ 14 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 86ರನ್ ಆಗಿತ್ತು.
ಇದಾದ ಬಳಿಕ ವಿರಾಟ್ ಕೊಹ್ಲಿ ಜತೆ ಒಂದಾದ ಹಾರ್ದಿಕ್ ಪಾಂಡ್ಯ ಉತ್ತಮ ಸಾಥ್ ನೀಡಿದರು. ಇದೇ ವೇಳೆ ವಿರಾಟ್ ಕೊಹ್ಲಿ ಟಿ-20ಯಲ್ಲಿ 27ನೇ ಅರ್ಧಶತಕ ಸಿಡಿಸಿ ಮಿಂಚಿದರು. ಕೇವಲ 46 ಎಸೆತಗಳಲ್ಲಿ 77ರನ್ಗಳಿಕೆ ಮಾಡಿದ ಕ್ಯಾಪ್ಟನ್ ಆಕರ್ಷಕ 4 ಸಿಕ್ಸರ್ ಹಾಗೂ 8 ಬೌಂಡರಿ ಸಿಡಿಸಿದರು. ಹಾರ್ದಿಕ್ ಪಾಂಡ್ಯ 17 ರನ್ ಗಳಿಕೆ ಮಾಡಿ ಕೊನೆ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು.
ಟೀಂ ಇಂಡಿಯಾ ಕೊನೆಯದಾಗಿ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 156 ರನ್ಗಳಿಕೆ ಮಾಡಿದ್ದು, ಎದುರಾಳಿ ತಂಡಕ್ಕೆ 157ರನ್ ಟಾರ್ಗೆಟ್ ನೀಡಿದೆ.
ಇಂಗ್ಲೆಂಡ್ ಪರ ಮಾರ್ಕ್ ವುಡ್ 3 ವಿಕೆಟ್, ಜೋರ್ಡನ್ 2 ವಿಕೆಟ್ ಪಡೆದುಕೊಂಡರು.