ಅಡಿಲೇಡ್:ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ವೇಳೆ ರಿಕಿ ಪಾಂಟಿಂಗ್, ಟೀಂ ಇಂಡಿಯಾ ಆಟಗಾರ ಪೃಥ್ವಿ ಶಾ ವೀಕ್ನೆಸ್ ಬಿಚ್ಚಿಟ್ಟಿದ್ದು ಅದರಂತೆ ವಿಕೆಟ್ ಒಪ್ಪಿಸಿ ಶಾ ಸೊನ್ನೆ ಸುತ್ತಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಡೆಲ್ಲಿ ತಂಡದ ಕೋಚ್ ಆಗಿರುವ ಪಾಂಟಿಂಗ್ಗೆ ಪೃಥ್ವಿ ಶಾ ವೀಕ್ನೆಸ್ ಗೊತ್ತಿತ್ತು. ಅದರಂತೆ ಇಂದು ಆರಂಭವಾದ ಟೆಸ್ಟ್ ಪಂದ್ಯದ ಮೊದಲನೇ ಎಸೆತದ ನಂತರ ಪಾಂಟಿಂಗ್ ಶಾ ಅವರ ವೀಕ್ನೆಸ್ ವಿವರಿಸಿದ್ರು.
"ಪೃಥ್ವಿ ಶಾ ತಮ್ಮ ರಕ್ಷಣಾತ್ಮ ಆಟದಲ್ಲಿ ಕೊಂಚ ಬಿರುಕು ಹೊಂದಿದ್ದಾರೆ. ಚೆಂಡನ್ನು ಮುಂದಕ್ಕೆ ಎಸೆದರೆ ಅದನ್ನು ಹೊಡೆಯುವ ಪ್ರಯತ್ನದಲ್ಲಿ ಆತನ ಬ್ಯಾಟ್ ಹಾಗೂ ಪ್ಯಾಡ್‌ನ ಮಧ್ಯೆ ದೊಡ್ಡ ಅಂತರ ಇರುತ್ತದೆ, ಆಸೀಸ್ ಬೌಲರ್‌ಗಳು ಅದನ್ನು ಟಾರ್ಗೆಟ್ ಮಾಡಬೇಕು" ಎಂದು ಪಾಂಟಿಂಗ್ ವಿವರಿಸಿದ್ರು. ಹೀಗೆ ಹೇಳಿದ ನಂತರದ ಎಸೆತದಲ್ಲೆ ಸ್ಟಾರ್ಕ್ ಅಂತಹದ್ದೇ ಎಸೆತ ಎಸೆದು ಪೃಥ್ವಿ ಶಾ ವಿಕೆಟ್ ಪಡೆದ್ರು.
ರಿಕಿ ಪಾಂಟಿಂಗ್ ಹೇಳಿದ ಮಾದರಿಯಲ್ಲೇ ಪೃಥ್ವಿ ಶಾ ವಿಕೆಟ್ ಒಪ್ಪಿಸಿದ್ದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಸದ್ಯ ಪಾಂಟಿಂಗ್ ಕಮೆಂಟರಿ ವೇಳೆ ನುಡಿದಿದ್ದ ಭವಿಷ್ಯದ ವಿಡಿಯೋ ಸಾಕಷ್ಟು ವೈರಲ್ ಆಗಿದೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿರುವ ಟೀಂ ಇಂಡಿಯಾ 3 ವಿಕೆಟ್ ನಷ್ಟಕ್ಕೆ 136 ರನ್ ಗಳಿಸಿದ್ದು, ನಾಯಕ ವಿರಾಟ್ ಹೊಹ್ಲಿ ಮತ್ತು ಉಪನಾಯಕ ಅಜಿಂಕ್ಯಾ ರಹಾನೆ ಬ್ಯಾಟಿಂಗ್ ಮಾಡುತ್ತಿದ್ದಾರೆ