ಬರೋಡಾ:ಟೀಂ ಇಂಡಿಯಾದ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ಎಲ್ಲ ಮಾದರಿ ಕ್ರಿಕೆಟ್ನಿಂದ ನಿವೃತ್ತಿ ಘೋಷಣೆ ಮಾಡಿದ್ದು, ತಮ್ಮ 17 ವರ್ಷದ ಕ್ರಿಕೆಟ್ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ.
ಅಂಡರ್-19 ತಂಡದಲ್ಲಿ ಅದ್ಭುತ ಪ್ರದರ್ಶನ ನೀಡಿದ ಬಳಿಕ ಟೀಂ ಇಂಡಿಯಾ ಹಿರಿಯರ ತಂಡ ಸೇರಿಕೊಂಡಿದ್ದ ಸ್ವಿಂಗ್ ಮಾಸ್ಟರ್ ಇರ್ಫಾನ್ ಅನೇಕ ಪಂದ್ಯಗಳಲ್ಲಿ ಟೀಂ ಇಂಡಿಯಾ ತಂಡಕ್ಕೆ ಗೆಲುವಿನ ಉಡುಗೊರೆ ನೀಡಿದ್ದಾರೆ.
ಕಡಿಮೆ ಅವಧಿಯಲ್ಲಿ ಕ್ರಿಕೆಟ್ ಪ್ರೇಮಿಗಳ ಮನಗೆದ್ದಿದ್ದ ಈ ಪ್ಲೇಯರ್ ಮೇಲಿಂದ ಮೇಲೆ ಗಾಯದ ಸಮಸ್ಯೆ ಎದುರಿಸಿದ ಕಾರಣ ಟೀಂ ಇಂಡಿಯಾದಿಂದ ಹೊರಗುಳಿದಿದ್ದರು. ಇದೀಗ ತಮ್ಮ ಕ್ರಿಕೆಟ್ ವೃತ್ತಿ ಜೀವನದ ಬಗ್ಗೆ ಮಾತನಾಡಿರುವ 35 ವರ್ಷದ ಇರ್ಫಾನ್ ಪಠಾಣ್, ಇಂಡಿಯಾ ಕ್ಯಾಪ್ ಪಡೆದುಕೊಂಡಿರುವುದು ನನ್ನ ಅಮೋಘ ಕ್ಷಣ, ಕ್ರಿಕೆಟ್ ಪ್ರಯಾಣ ತೃಪ್ತಿ ನೀಡಿದೆ ಎಂದಿದ್ದಾರೆ.
ಕ್ರಿಕೆಟ್ ಪ್ರೇಮಿಗಳು ತಮ್ಮ ಪ್ರೀತಿ ಹಾಗೂ ಆಶೀರ್ವಾದ ನೀಡಿದ್ದರಿಂದಲೇ ನಾನು ಇಷ್ಟೊಂದು ಸಾಧನೆ ಮಾಡಲು ಸಾಧ್ಯವಾಗಿದ್ದು, ಟಾಪ್ 5 ಬೌಲರ್ ಲಿಸ್ಟ್ನಲ್ಲಿ ಕಾಣಿಸಿಕೊಂಡಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದಿದ್ದಾರೆ. ನಾನು ಮುಂದಿನ ದಿನಗಳಲ್ಲೂ ಕ್ರಿಕೆಟ್ ಜತೆ ಸಂಪರ್ಕ ಹೊಂದಿರುತ್ತೇನೆ ಎಂದಿರುವ ಈ ಪ್ಲೇಯರ್ ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ ಅವರಂತಹ ದಿಗ್ಗಜ ಆಟಗಾರರೊಂದಿಗೆ ಡ್ರೆಸ್ಸಿಂಗ್ ರೂಂ ಹಂಚಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದಿದ್ದಾರೆ.