ಢಾಕಾ: ಎರಡು ಬಾರಿಯ ಕೋವಿಡ್ ಟೆಸ್ಟ್ನಲ್ಲೂ ಪಾಸಿಟಿವ್ ವರದಿ ಬಂದು ಆಘಾತಕ್ಕೊಳಗಾಗಿದ್ದ ಬಾಂಗ್ಲಾದೇಶ ಕ್ರಿಕೆಟ್ ತಂಡದ ಮಾಜಿ ನಾಯಕ ಮುಶ್ರಫ್ ಮೊರ್ತಾಜಾ ಚೇತರಿಸಿಕೊಂಡಿದ್ದಾರೆ.
ಜೂನ್ 20ರಂದು ಮೊರ್ತಾಜಾ ಮೊದಲ ಬಾರಿಗೆ ಕೋವಿಡ್ ಟೆಸ್ಟ್ಗೆ ಒಳಪಟ್ಟಿದ್ದು ಪಾಸಿಟಿವ್ ವರದಿ ಬಂದಿತ್ತು. ಮತ್ತೆ ಜುಲೈ 5ರಂದು ನಡೆಸಿದ್ದ ಪರೀಕ್ಷೆಯಲ್ಲೂ ಪಾಸಿಟಿವ್ ವರದಿ ಬಂದಿತ್ತು. ನಂತರ ಮನೆಯಲ್ಲಿ ಸ್ವಯಂ ಐಸೋಲೇಷನ್ನಲ್ಲಿದ್ದುಕೊಂಡು ಚಿಕಿತ್ಸೆ ಪಡೆಯುತ್ತಿದ್ದರು.
ಇದೀಗ ತಾವು ಕೊರೊನಾ ಸೋಂಕಿನಿಂದ ಸಂಪೂರ್ಣ ಚೇತರಿಸಿಕೊಂಡಿದ್ದು, ಮಂಗಳವಾರ ನಡೆಸಿದ ಕೋವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿದೆ ಎಂದು ಫೇಸ್ಬುಕ್ನಲ್ಲಿ ಹೇಳಿಕೊಂಡಿದ್ದಾರೆ.
"ಎಲ್ಲರೂ ಚೆನ್ನಾಗಿದ್ದೀರಿ ಎಂದು ಭಾವಿಸುತ್ತೇನೆ. ದೇವರ ಕೃಪೆ ಮತ್ತು ಎಲ್ಲರ ಆಶೀರ್ವಾದ ನನ್ನ ಮೇಲಿರುವುದರಿಂದ ನನಗೆ ಕೊರೊನಾ ವೈರಸ್ ಫಲಿತಾಂಶದಲ್ಲಿ ನೆಗೆಟಿವ್ ವರದಿ ಬಂದಿದೆ. ಈ ಕಠಿಣ ಪರಿಸ್ಥಿತಿಯಲ್ಲಿ ನನ್ನ ಬೆಂಬಲಕ್ಕೆ ನಿಂತು, ನನ್ನ ಆರೋಗ್ಯದ ಬಗ್ಗೆ ಕಾಳಜಿ ತೋರಿಸಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ" ಎಂದು ಮೊರ್ತಾಜಾ ಬರೆದುಕೊಂಡಿದ್ದಾರೆ.
ನಾನು ಮನೆಯಲ್ಲಿದ್ದುಕೊಂಡೇ ಚಿಕಿತ್ಸೆ ಪಡೆದು ವೈರಸ್ನಿಂದ ಸಂಪೂರ್ಣ ಗುಣಮುಖನಾಗಿದ್ದೇನೆ. ಯಾರೆಲ್ಲಾ ಈ ಸೋಂಕಿಗೆ ಒಳಗಾಗಿದ್ದೀರೋ ಅವರೆಲ್ಲಾ ಸಕಾರಾತ್ಮಕವಾಗಿರಿ. ಎಲ್ಲರೂ ದೇವರ ಮೇಲೆ ನಂಬಿಕೆಯಿಡಿ ಮತ್ತು ನಿಮಗಳಿಗೆ ಬದ್ಧರಾಗಿರಿ. ನಾವೆಲ್ಲರೂ ಒಟ್ಟಾಗಿ ಕೊರೊನಾ ವಿರುದ್ಧ ಹೋರಾಡೋಣ ಎಂದಿದ್ದಾರೆ.
ಆದರೆ ಕಳೆದ ಎರಡು ವಾರದಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಮೊರ್ತಾಜಾ ಪತ್ನಿ ಸುಮೋನಾ ಹಕ್ ಇನ್ನೂ ಸೋಂಕಿನಿಂದ ಗುಣಮುಖರಾಗಿಲ್ಲ. ಅವಳ ಪರವಾಗಿ ನಿಮ್ಮ ಪ್ರಾರ್ಥನೆಯಿರಲಿ ಎಂದು ಮನವಿ ಮಾಡಿದ್ದಾರೆ.
ಸೋಂಕಿಗೊಳಗಾಗಿದ್ದ ಇತರೆ ಬಾಂಗ್ಲಾದೇಶ ಕ್ರಿಕೆಟಿಗರಾದ ನಜ್ಮುಲ್ ಇಸ್ಲಾಮ್ ಹಾಗೂ ನಫೀಸ್ ಇಕ್ಬಾಲ್ ಕೂಡ ಗುಣಮುಖರಾಗಿದ್ದಾರೆ ಎಂದು ತಿಳಿದು ಬಂದಿದೆ.