ಹೈದರಾಬಾದ್:ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಮನರಂಜಿಸುವ ತಂಡವಾಗಿರುವ ರಾಯಲ್ ಚಾಲಂಜರ್ಸ್ ಟ್ರೋಪಿ ವಿಚಾರದಲ್ಲಿ ದಕ್ಷಿಣ ಆಫ್ರಿಕಾಗಿಂತ ಹೆಚ್ಚು ಚೋಕರ್ಸ್ ಆಗಿದ್ದಾರೆ. ಒಂದಲ್ಲ, ಎರಡಲ್ಲ ಮೂರು ಬಾರಿ ಫೈನಲ್ ಪ್ರವೇಶಿಸಿದರೂ ಪ್ರಶಸ್ತಿಗೆ ಮುತ್ತಿಡುವ ಸೌಭಾಗ್ಯ ಮಾತ್ರ ಇನ್ನೂ ಬೆಂಗಳೂರಿಗೆ ಸಿಕ್ಕಿಲ್ಲ. ಆದರೆ ಈ ಬಾರಿ ಉತ್ತಮ ತಂಡ ಸಂಯೋಜನೆಯಿಂದ ಯುದ್ದಕ್ಕೆ ಸಿದ್ದರಾಗಿರುವ ಕೊಹ್ಲಿ ಪಡೆ ಚೊಚ್ಚಲ ಪ್ರಶಸ್ತಿಯನ್ನು ಎದುರು ನೋಡುತ್ತಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಎರಡನೇ ಆವೃತ್ತಿಯಲ್ಲೇ ಫೈನಲ್ ಪ್ರವೇಶಿಸಿತ್ತು. 144 ರನ್ಗಳ ಟಾರ್ಗೆಟ್ ಪಡೆದಿದ್ದ ಆರ್ಸಿಬಿ ಕಪ್ ಎತ್ತಿ ಹಿಡಿಯುತ್ತದೆ ಎಂದು ಭಾವಿಸಲಾಗಿತ್ತು. ಡೆಕ್ಕನ್ ಚಾರ್ಜಸ್ ಎದುರು 6 ನರ್ಗಳ ಸೋಲಿನೊಂದಿಗೆ ನಿರಾಶೆಯನುಭವಿಸಿತ್ತು. ನಂತರ 2011 ರಲ್ಲಿ ಸಿಎಸ್ಕೆ ವಿರುದ್ಧ ಸೋಲುಕಂಡರೆ, 2016ರಲ್ಲಿ ಕೊಹ್ಲಿಬ್ಯಾಟಿಂಗ್ ವೈಭವದ ನಡುವೆಯೂ ಫೈನಲ್ ಪಂದ್ಯದಲ್ಲಿ 8 ರನ್ಗಳ ಸೋಲುಕಾಣುವ ಮೂಲಕ ಆಘಾತ ಅನುಭವಿಸಿತ್ತು. ನಂತರ ಮೂರು ಆವೃತ್ತಿಗಳಲ್ಲಿ ಅತ್ಯಂತ ಕಳಪೆ ಪ್ರದರ್ಶನದಿಂದ ಪ್ಲೇ ಆಫ್ಗೂ ಪ್ರವೇಶಿಸಲು ಎಣಗಾಡುತ್ತಿರುವುದು ವಿಪರ್ಯಾಸ.
ಬಲಿಷ್ಠ ತಂಡದ ಸಂಯೋಜನೆ ಮತ್ತು ಕೋಚ್ ಬಳಗ
ಕಳೆದ ಮೂರು ಆವೃತ್ತಿಗಳಲ್ಲಿ ಆರ್ಸಿಬಿಗೆ ಕಾಡಿದ್ದು ಆರಂಭಿಕರ ಕೊರತೆ ಮತ್ತು ಡೆತ್ ಬೌಲರ್ಗಳು. ಇದೀಗ ಆ ಸಮಸ್ಯೆ ಫಿಂಚ್ ಆಗಮನದೊಂದಿಗೆ ದೂರವಾಗಿದೆ. ಜೊತೆಗೆ ಕರ್ನಾಟಕದ ಯಂಗ್ ಟೈಗರ್ ದೇವದತ್ ಪಡಿಕ್ಕಲ್ ಕೆಪಿಎಲ್, ಸಯ್ಯದ್ ಮುಷ್ತಾಕ್ ಅಲಿ ಹಾಗೂ ವಿಜಯ್ ಹಜಾರೆ ಟ್ರೋಫಿಯಲ್ಲಿ ಅಧಿಕ ರನ್ ಸರದಾರನಾಗಿ ಮಿಂಚಿದ್ದು, ಐಪಿಎಲ್ನಲ್ಲಿ ತಮ್ಮ ಭುಜಬಲದ ಪರಾಕ್ರಮ ತೋರಲು ಕಾಯುತ್ತಿದ್ದಾರೆ. ಜೊತೆಗೆ ಈ ಬಾರಿ ಆ್ಯಡಂ ಜಂಪಾ, ಜೋಶ್ ಫಿಲಿಪ್ಪೆ ಕೂಡ ಆರ್ಸಿಬಿ ಬಳಗ ಸೇರಿಕೊಂಡಿರುವುದರಿಂದ ತಂಡ 2016ರ ತಂಡಕ್ಕೆ ಹೋಲಿಕೆ ಮಾಡಲಾಗುತ್ತಿದೆ.
ಆರ್ಸಿಬಿ ನ್ಯೂಜಿಲ್ಯಾಂಡ್ನ ಮಾಸ್ಟರ್ ಮೈಂಡ್ ಮೈಕಲ್ ಹೆಸನ್ ತಂಡದ ಡೈರೆಕ್ಟರ್ ಆಗಿದ್ದಾರೆ. ಜೊತೆಗೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಸೈಮನ್ ಕ್ಯಾಟಿಚ್ ಮುಖ್ಯ ಕೋಚ್ ಆಗಿದ್ದು, ಈಗಾಗಲೆ ತಂಡಕ್ಕೆ ಹಲವು ಯೋಜನೆಗಳನ್ನು ಸಿದ್ದಪಡಿಸಿಕೊಂಡಿದ್ದಾರೆ. ಹಲವಾರು ಸಂದರ್ಶನಗಳಲ್ಲಿ ಈಗಾಗಲೆ ಕೊಹ್ಲಿ, ವಿಲಿಯರ್ಸ್ ಈ ಬಗ್ಗೆ ಹೇಳಿಕೊಂಡಿದ್ದಾರೆ.
ವಿಶ್ವ ದರ್ಜೆಯ ಬ್ಯಾಟ್ಸ್ಮನ್ಗಳ ಬಲ
ಮೇಲೆ ಹೇಳಿದಂತೆ ಫಿಂಚ್ ಆಗಮನದೊಂದಿಗೆ ಆರಂಭಿಕ ಸ್ಥಾನಕ್ಕೆ ಆನೆಬಲ ಬಂದಿದೆ. ಅವರೊಂದಿಗೆ ಯುವ ಆಟಗಾರ ದೇವದತ್ ಪಡಿಕ್ಕಲ್ ಅಥವಾ ಪಾರ್ಥೀವ್ ಪಟೇಲ್ ಜೊತೆ ಇನ್ನಿಂಗ್ಸ್ ಆರಂಭಿಸಲಿದ್ದಾರೆ. 3 ಮತ್ತು 4ನೇ ಕ್ರಮಾಂಕದಲ್ಲಿ ವಿರಾಟ್ -ಎಬಿಡಿ ಯಾವುದೇ ಒತ್ತಡವಿಲ್ಲದೆ ಲೀಲಾ ಜಾಲವಾಗಿ ಬ್ಯಾಟ್ ಬೀಸಲು ಅವಕಾಶ ದೊರೆತಿದೆ. ಮಧ್ಯಮ ಕ್ರಮಾಂದಲ್ಲಿ ಶಿವಂ ದುಬೆ, ಗುರುಕೀರತ್ ಸಿಂಗ್, ಮೊಯಿನ್ ಅಲಿ, ಪವನ್ ನೇಗಿ ಹಾಗೂ ಕ್ರಿಸ್ ಮೊರೀಸ್ ಅವರಂತಹ ಆಲ್ರೌಂಡರ್ಗಳ ಬಲವಿದೆ.