ಮೆಲ್ಬೋರ್ನ್: 3ನೇ ಟೆಸ್ಟ್ ಮೂಲಕ ಟೀಮ್ ಇಂಡಿಯಾಗೆ ಕಮ್ಬ್ಯಾಕ್ ಮಾಡುತ್ತಿರುವ ಸ್ಫೋಟಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಅವರಿಗಾಗಿ ಆಸ್ಟ್ರೇಲಿಯಾ ತಂಡ ಯೋಜನೆಗಳನ್ನು ರೂಪಿಸಿಕೊಂಡಿದೆ.
ರೋಹಿತ್ ಗಾಯದಿಂದ ಚೇತರಿಸಿಕೊಳ್ಳುವುದಕ್ಕಾಗಿ ಸೀಮಿತ ಓಪರ್ಗಳ ಸರಣಿ ಹಾಗೂ ಮೊದಲೆರಡು ಟೆಸ್ಟ್ ಪಂದ್ಯಗಳನ್ನು ತಪ್ಪಿಸಿಕೊಂಡಿದ್ದರು. ಇದೀಗ ಸಿಡ್ನಿಯಲ್ಲಿ ನಡೆಯುವ ಮೂರನೇ ಟೆಸ್ಟ್ ಮೂಲಕ ಭಾರತ ತಂಡ ಸೇರಿಕೊಂಡಿದ್ದಾರೆ. ಆದರೆ ಆಸೀಸ್ ಸ್ಪಿನ್ನರ್ ನಾಥನ್ ಲಿಯಾನ್, ಟೀಮ್ ಇಂಡಿಯಾದಸ್ಫೋಟಕ ಬ್ಯಾಟ್ಸ್ಮನ್ ಬಗ್ಗೆ ಜಾಗೃತರಾಗಿದ್ದೇವೆ ಎಂದು ತಿಳಿಸಿದ್ದಾರೆ.
"ಖಂಡಿತವಾಗಿಯೂ ರೋಹಿತ್ ಶರ್ಮಾ ಪ್ರಸ್ತುತ ವಿಶ್ವದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು. ಅವರನ್ನು ಎದುರಿಸುವುದು ನಮ್ಮ ಬೌಲರ್ಗಳಿಗೆ ಕಠಿಣ ಸವಾಲಾಗಲಿದೆ. ಆದರೆ ನಾವು ನಮ್ಮ ಶಕ್ತಿಯನ್ನು ತೋರಿಸಲಿದ್ದೇವೆ. ನಮ್ಮನ್ನು ನಾವು ಸವಾಲಿಗೊಳಪಡಿಸಿಕೊಳ್ಳುವುದನ್ನ ಇಷ್ಟ ಪಡುತ್ತೇವೆ" ಎಂದು ಅವರು ವರ್ಷುವಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ರೋಹಿತ್ ಭಾರತ ತಂಡದ ಬಹುದೊಡ್ಡ ಅಸ್ತ್ರ. ಅವರಲ್ಲಿ ಯಾರು ಹೊರ ಬರುತ್ತಾರೆ(ಆರಂಭಿಕರಾಗಿ) ಎನ್ನುವುದನ್ನು ನೋಡುವುದು ನಿಜಕ್ಕೂ ಆಸಕ್ತಿಕರವಾಗಿದೆ ಎಂದಿದ್ದಾರೆ.
ಆದರೆ ನಾವು ರೋಹಿತ್‌ಗಾಗಿ ನಮ್ಮ ಯೋಜನೆಗಳನ್ನು ಸಿದ್ಧಪಡಿಸಿಕೊಂಡಿದ್ದೇವೆ. ಹಾಗೂ ಆಶಾದಾಯಕವಾಗಿ ನಾವು ಅವರ ವಿರುದ್ಧ ಬೇಗ ಹಿಡಿತ ಸಾಧಿಸಬಹುದು ಎಂದುಕೊಂಡಿದ್ದೇನೆ. ಆದರೆ ರೋಹಿತ್ ಅವರಂತಹ ಅತ್ಯುತ್ತಮ ಅಟಗಾರನನ್ನು ನಾವು ಗೌರವಿಸುತ್ತೇವೆ" ಎಂದು 100ನೇ ಟೆಸ್ಟ್ ಸನಿಹದಲ್ಲಿರುವ ಲಿಯಾನ್ ಹೇಳಿದ್ದಾರೆ.