ಹೋಬರ್ಟ್: ಆಸ್ಟ್ರೇಲಿಯಾ ಕೊನೆಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಇನ್ನು 2 ದಿನಗಳು ಬಾಕಿ ಉಳಿದಿರುವಂತೆ 146 ರನ್ಗಳ ಜಯ ಸಾಧಿಸಿದ್ದು, 4-0ಯಲ್ಲಿ ಆ್ಯಶಸ್ ಸರಣಿ ಗೆದ್ದು ಬೀಗಿದೆ.
3ನೇ ದಿನವಾದ ಇಂದು ಆಸ್ಟ್ರೇಲಿಯಾ ತಂಡ ತನ್ನ 2ನೇ ಇನ್ನಿಂಗ್ಸ್ನಲ್ಲಿ 155ಕ್ಕೆ ಆಲೌಟ್ ಆದರೂ, ಆಂಗ್ಲರಿಗೆ 271 ರನ್ಗಳ ಸ್ಪರ್ಧಾತ್ಮಕ ಗುರಿ ನೀಡಿತ್ತು. ಆದರೆ ಈ ಮೊತ್ತವನ್ನು ಬೆನ್ನಟ್ಟಲಾಗದೆ ಆಂಗ್ಲ ಪಡೆ ಮೊದಲ ವಿಕೆಟ್ಗೆ 68 ರನ್ಗಳ ಜೊತೆಯಾಟದ ಹೊರೆತಾಗಿಯೂ ದಿಢೀರ್ ಕುಸಿತ ಕಂಡು ಕೇವಲ 124 ರನ್ಗಳಿ ಸರ್ವಪತನ ಕಂಡು ಸೋಲುಂಡಿತು.
ವೇಗಿಗಳಾದ ಸ್ಕಾಟ್ ಬೋಲೆಂಡ್ 18ಕ್ಕೆ 3, ಕ್ಯಾಮರಾನ್ ಗ್ರೀನ್ 21ಕ್ಕೆ3, ವಿಕೆಟ್ ಪಡೆದು ಇಂಗ್ಲೆಂಡ್ ಬ್ಯಾಟರ್ಗಳನ್ನ ಪೆವಿಲಿಯನ್ಗಟ್ಟಿದರು. ಬಾಲಂಗೋಚಿಗಳನ್ನು ನಾಯಕ ಪ್ಯಾಟ್ ಕಮ್ಮಿನ್ಸ್ ಕ್ರೀಸ್ಗೆ ಬಂದ ವೇಗದಲ್ಲೇ ವಾಪಸ್ ಕಳುಹಿಸಿದರು. ಅವರು 42 ರನ್ ನೀಡಿ 3 ವಿಕೆಟ್ ಪಡೆದರೆ, ಸ್ಟಾರ್ಕ್ 30 ರನ್ ನೀಡಿ 1 ವಿಕೆಟ್ ಪಡೆದರು. ಇಂಗ್ಲೆಂಡ್ ಪರ ಜಾಕ್ ಕ್ರಾಲೆ 36 ರನ್ ಸಿಡಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು.