ಟಿ20, ಕ್ರಿಕೆಟ್ ಪ್ರೇಮಿಗಳಿಗೆ ರಸದೌತಣ ನೀಡುವ ಹಬ್ಬ. ಅಭಿಮಾನಿಗಳನ್ನು ತುದಿಗಾಲ ಮೇಲೆ ನಿಲ್ಲಿಸಿರುವ ಚುಟುಕು ಮಾದರಿಯ ವಿಶ್ವಕಪ್ಗೆ ನಾಳೆಯಿಂದ ಆಸ್ಟ್ರೇಲಿಯಾದಲ್ಲಿ ವಿದ್ಯುಕ್ತ ಚಾಲನೆ ಸಿಗಲಿದೆ. ವಿಶ್ವಕಪ್ ಕಾದಾಟಕ್ಕೆ ಆಸ್ಟ್ರೇಲಿಯಾದಲ್ಲಿ ಭೂಮಿಕೆ ಸಿದ್ಧವಾಗಿದ್ದು, ಅದಕ್ಕೂ ಮೊದಲು ಇಂದು ಕ್ಯಾಪ್ಟನ್ ಡೇ ಕಾರ್ಯಕ್ರಮದಲ್ಲಿ 16 ತಂಡಗಳ ಎಲ್ಲ ನಾಯಕರು ಒಂದೇ ಫ್ರೇಮ್ನಲ್ಲಿ ವಿಶ್ವಕಪ್ ಟ್ರೋಫಿ ಜೊತೆಗೆ ಪೋಸ್ ನೀಡಿದರು.
ಬಳಿಕ ಮಾಧ್ಯಮದವರೊಂದಿಗೆ ಸಂವಾದ ನಡೆಸಿ, ಮೆಗಾ ಟೂರ್ನ್ಮೆಂಟ್ಗೆ ಹೇಗೆ ತಯಾರಿ ನಡೆಸಿದ್ದೇವೆ ಎಂದು ಹಂಚಿಕೊಂಡರು. ಎಲ್ಲ ನಾಯಕರುಳ್ಳ ಫೋಟೋವನ್ನು ಐಸಿಸಿ ತನ್ನ ಟ್ವಿಟರ್ನಲ್ಲಿ ಹಂಚಿಕೊಂಡಿದೆ. "ಒಂದೇ ಫ್ರೇಮ್ನಲ್ಲಿ 16 ನಾಯಕರು" ಎಂದು ಬರೆದುಕೊಂಡಿದ್ದು, ನಾಯಕರು ಸೆಲ್ಫಿ ತೆಗೆದುಕೊಂಡ ಫೋಟೋ ಕೂಡ ಇದೆ.
ಬಲಿಷ್ಠ ತಂಡವಾಗಿ ವಿಶ್ವಕಪ್ಗೆ ಎಂಟ್ರಿ ಕೊಟ್ಟಿರುವ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಕೂಡ ತಂಡದ ತಯಾರಿ ಬಗ್ಗೆ ಮಾತನಾಡಿದರು. ಪಾಕಿಸ್ತಾನದ ಜೊತೆ ಕಣಕ್ಕಿಳಿಯುವ ಮೂಲಕ ವಿಶ್ವಕಪ್ ಅಭಿಯಾನ ಆರಂಭಿಸುವ ಬಗ್ಗೆಯೂ ಅಭಿಪ್ರಾಯ ಹಂಚಿಕೊಂಡರು.
ನಾಳೆಯಿಂದ ಅರ್ಹತಾ ಸುತ್ತಿನ ಪಂದ್ಯಗಳು:ವಿಶ್ವಕಪ್ಗಾಗಿ ಒಟ್ಟಾರೆ 12 ತಂಡಗಳು ಕಾದಾಟ ನಡೆಸಲಿವೆ. ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲ್ಯಾಂಡ್, ಬಾಂಗ್ಲಾದೇಶ, ಭಾರತ, ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ಈಗಾಗಲೇ ಸೂಪರ್-12 ಗೆ ಅರ್ಹತೆ ಪಡೆದಿವೆ.
ಅರ್ಹತಾ ಸುತ್ತಿನಲ್ಲಿ ಎ ಗುಂಪಿನಲ್ಲಿರುವ ನಮೀಬಿಯಾ, ನೆದರ್ಲೆಂಡ್ಸ್, ಶ್ರೀಲಂಕಾ, ಯುಎಇ ತಂಡಗಳು ಮತ್ತು ಬಿ ಗುಂಪಿನಲ್ಲಿರುವ ಐರ್ಲೆಂಡ್, ಸ್ಕಾಟ್ಲೆಂಡ್, ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ ತಂಡಗಳು ಸೆಣಸಾಡಿ, ಇದರಲ್ಲಿ ಅಗ್ರ ನಾಲ್ಕು ತಂಡಗಳು ಸೂಪರ್ 12 ಪ್ರವೇಶಿಸಲಿವೆ. ಪ್ರತಿ ತಂಡ ಗುಂಪಿನಲ್ಲಿರುವ ಉಳಿದ ಮೂರು ತಂಡಗಳ ವಿರುದ್ಧ ಒಂದು ಪಂದ್ಯ ಆಡಲಿವೆ. ಕೊನೆಯಲ್ಲಿ ಪ್ರತಿ ಗುಂಪಿನಲ್ಲಿ ಅಗ್ರ ಎರಡು ತಂಡಗಳು ಸೂಪರ್-12 ನಲ್ಲಿ ಆಡುವ ಅವಕಾಶವನ್ನು ಪಡೆಯುತ್ತವೆ.
22 ರಿಂದ ಸೂಪರ್ 12 ಪಂದ್ಯಗಳು:ನಾಳೆಯಿಂದ ಶುರುವಾಗುವ ಅರ್ಹತಾ ಸುತ್ತಿನ ಪಂದ್ಯಗಳು ಮುಕ್ತಾಯದ ಬಳಿಕ ಅ.22 ರಿಂದ ಸೂಪರ್-12 ಪಂದ್ಯಗಳು ಆರಂಭವಾಗಲಿವೆ. ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿ ಆಸ್ಟ್ರೇಲಿಯಾಕ್ಕೆ ಜಿಗಿದಿರುವ ಭಾರತ 2007ರ ಬಳಿಕ ಮತ್ತೆ ಚುಟುಕು ಮಾದರಿಯ ವಿಶ್ವಕಪ್ ಎತ್ತಿ ಹಿಡಿಯಲಿ ಎಂದು ಆಲ್ ದ ಬೆಸ್ಟ್ ಹೇಳೋಣ.
ಓದಿ:ಟಿ20 ವಿಶ್ವಕಪ್ 2022ಗೆ ಬುಮ್ರಾ ಬದಲಿಗೆ ಶಮಿ ಫಿಕ್ಸ್.. ಬಿಸಿಸಿಐ ಕನ್ಫರ್ಮ್