ಅದು ಜೂನ್ 25, 1983. ಭಾರತ ಕ್ರಿಕೆಟ್ಗೆ ಐತಿಹಾಸಿಕ ದಿನ. ಅಂದು ವಿಶ್ವದ ಬಲಾಢ್ಯ ತಂಡವಾಗಿದ್ದ ವೆಸ್ಟ್ ಇಂಡೀಸ್ ದೈತ್ಯರನ್ನು ಸದೆಬಡಿದು ಭಾರತ ಚೊಚ್ಚಲ ಏಕದಿನ ವಿಶ್ವಕಪ್ ಎತ್ತಿ ಹಿಡಿದಿತ್ತು. ಅಂದಿನ ಮಹತ್ಸಾಧನೆಗೆ ಇಂದಿಗೆ 40ರ ತುಂಬು ಸಂಭ್ರಮ. ಎಲ್ಲ ಅಸಾಧ್ಯಗಳನ್ನು ಮೆಟ್ಟಿನಿಂತು ಕಪಿಲ್ ದೇವ್ ನಾಯಕತ್ವದ ಭಾರತ ತಂಡ ಚಾಂಪಿಯನ್ ಆಗಿದ್ದನ್ನು ವಿಶ್ವವೇ ಬೆರಗುಗಣ್ಣಿನಿಂದ ನೋಡಿ ಖುಷಿಪಟ್ಟಿತ್ತು. ವಿಶ್ವಕಪ್ ಗೆದ್ದು 40 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅದಾನಿ ಸಮೂಹ ಅಂದಿನ ವಿಜೇತ ತಂಡದ ಸದಸ್ಯರನ್ನು ಗೌರವಿಸಿದೆ.
ಆ ದಿನಗಳಲ್ಲಿ ಕ್ರಿಕೆಟ್ ಅಂದರೆ ಅದು ವೆಸ್ಟ್ ಇಂಡೀಸ್ ಎಂಬಂತಿತ್ತು. ಕ್ಲೈವ್ ಲಾಯ್ಡ್, ವಿವ್ ರಿಚರ್ಡ್ಸ್, ಲ್ಯಾರಿ ಗೋಮ್ಸ್, ಆ್ಯಂಡಿ ರಾಬರ್ಟ್ಸ್, ಮೈಕೆಲ್ ಹೋಲ್ಡಿಂಗ್ರಂತಹ ದೈತ್ಯ ಆಟಗಾರರು ಇದ್ದಲ್ಲಿ ಜಯ ಕಟ್ಟಿಟ್ಟ ಬುತ್ತಿಯಾಗಿತ್ತು. 15 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ತಂಡ ಪ್ರಾಬಲ್ಯ ಸಾಧಿಸಿತ್ತು. 1983ರ ವಿಶ್ವಕಪ್ ಗೆಲುವಿನ ಏಕೈಕ ನೆಚ್ಚಿನ ತಂಡವಾಗಿತ್ತು.
ಆದರೆ, ಭಾರತದ ಕಪಿಲ್ ದೇವ್, ಸುನೀಲ್ ಗವಾಸ್ಕರ್, ಮದನ್ನಾಲ್, ಕೃಷ್ಣಮಾಚಾರಿ ಶ್ರೀಕಾಂತ್, ಮೊಹಿಂದರ್ ಅಮರನಾಥ್ ಅವರನ್ನೊಳಗೊಂಡ ತಂಡ ವಿಂಡೀಸ್ ಸಂಹಾರ ಮಾಡಿ ವಿಶ್ವಕಪ್ ಜಯಿಸುತ್ತೆ ಅಂತ ಯಾರೂ ಕೂಡ ಊಹಿಸಿರಲಿಲ್ಲ. ಕೃಷ್ಣಮಾಚಾರಿ ಶ್ರೀಕಾಂತ್ ಅವರ ಬ್ಯಾಟಿಂಗ್, ಮದನ್ಲಾಲ್ ಮತ್ತು ಮೊಹಿಂದರ್ ಅಮರನಾಥ್ರ ಸಾಹಸದಿಂದ ತಂಡ ಫೈನಲ್ ಗೆದ್ದು ನೂತನ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
ಹೀಗಿತ್ತು ರೋಚಕ ಫೈನಲ್ ಪಂದ್ಯ:ಭಾರತ ಆಡಿದ 7 ಪಂದ್ಯಗಳಲ್ಲಿ 6ರಲ್ಲಿ ಗೆದ್ದು ವೆಸ್ಟ್ ಇಂಡೀಸ್ ವಿರುದ್ಧವೇ 1 ಪಂದ್ಯ ಸೋತು ಫೈನಲ್ಗೇರಿತ್ತು. ಅತ್ತ ಕೆರೆಬಿಯನ್ನರು ಕೂಡ ಅದೇ ಹಾದಿಯಲ್ಲಿ ಅಂತಿಮ ಕದನಕ್ಕೆ ಬಂದಿದ್ದರು. ಫೈನಲ್ನಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ಎದುರಾದಾಗ ಇಡೀ ವಿಶ್ವವೇ ಮತ್ತೊಮ್ಮೆ ವಿಂಡೀಸ್ ಚಾಂಪಿಯನ್ ಆಗಲಿದೆ ಎಂದು ಷರಾ ಬರೆದಿದ್ದರು. ಆದರೆ, ಕಪಿಲ್ದೇವ್ ನೇತೃತ್ವದ ಭಾರತ ತಂಡ ಅಸಾಧಾರಣ ಪ್ರದರ್ಶನ ತೋರಿತು. ದೈತ್ಯ ವಿಂಡೀಸ್ ಬೌಲರ್ಗಳನ್ನು ಎದುರಿಸಿ 183 ರನ್ ಗಳಿಸಿತು.
184 ರನ್ಗಳ ಗುರಿ ಪಡೆದ ವಿಂಡೀಸ್ಗೆ ಭಾರತ ಸುಲಭ ತುತ್ತಾಗಲಿದೆ ಎಂದೇ ಭಾವಿಸಲಾಗಿತ್ತು. ಛಲ ಬಿಡದ ಮದನ್ಲಾಲ್ ಮತ್ತು ಮೊಹಿಂದರ್ ಅಮರ್ನಾಥ್ ಅತಿರಥರ ಸಂಹಾರ ನಡೆಸಿ (ತಲಾ 3 ವಿಕೆಟ್) ಕೆರೆಬಿಯನ್ನರನ್ನು 140 ರನ್ಗೆ ಆಲೌಟ್ ಮಾಡುವ ಮೂಲಕ 43 ರನ್ಗಳಿಂದ ಗೆಲುವು ಸಾಧಿಸಿ ದೇಶಕ್ಕೆ ಮೊದಲ ಏಕದಿನ ವಿಶ್ವಕಪ್ ತಂದುಕೊಟ್ಟರು. ವಿವ್ ರಿಚರ್ಡ್ಸ್ 33, ಕ್ಲೈವ್ ಲಾಯ್ಡ್ರನ್ನು 8 ರನ್ಗೆ ಕಟ್ಟಿ ಹಾಕಲಾಗಿತ್ತು. ನಾಯಕ ಕಪಿಲ್ದೇವ್ ಅವರು ಕಪ್ ಎತ್ತಿ ಹಿಡಿದು ಭಾರತದ ವಿಜಯ ಪತಾಕೆ ಹಾರಿಸಿದ್ದರು.
ಅದಾನಿ ಗ್ರೂಪ್ನಿಂದ ಗೌರವ:1983ರ ವಿಶ್ವಕಪ್ ಗೆಲುವಿಗೆ 40 ವರ್ಷ ಸಂದಿದ ಹಿನ್ನೆಲೆಯಲ್ಲಿ ಅದಾನಿ ಗ್ರೂಪ್ ಅಹಮದಾಬಾದ್ನಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಿತ್ತು. ವಿಶ್ವಕಪ್ ವಿಜೇತ ಸದಸ್ಯರನ್ನು ಒಂದೆಡೆ ಸೇರಿಸಿ ಎಲ್ಲರನ್ನು ಗೌರವಿಸಿತು. ಅದಾನಿ ಗ್ರೂಪ್ ಸಮೂಹದ ಮುಖ್ಯಸ್ಥ ಗೌತಮ್ ಅದಾನಿ ಕಪಿಲ್ ದೇವ್ ಸೇರಿದಂತೆ ಎಲ್ಲ ಆಟಗಾರರಿಗೆ ಸ್ಮರಣಿಕೆ ನೀಡಿ ಸನ್ಮಾನಿಸಿದರು.
ಇದನ್ನೂ ಓದಿ:IND vs WI: ವೆಸ್ಟ್ ಇಂಡೀಸ್ ಪ್ರವಾಸದಿಂದ ಪೂಜಾರಗೆ ಕೊಕ್.. ಮೊದಲಿನಿಂದ ಮತ್ತೆ ಆರಂಭಕ್ಕೆ ಚೇತೇಶ್ವರ ಅಣಿ