ಜೀ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಆದ ಸರಿಗಮಪ ಕಾರ್ಯಕ್ರಮದಿಂದ ರಾಜೇಶ್ ಕೃಷ್ಣನ್ ಹೊರಬಂದು, ಕಲರ್ಸ್ ಕನ್ನಡದ ಎದೆ ತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಭಾಗವಹಿಸಿದ ನಂತರ, ಸರಿಗಮಪ ಕಥೆಯೇನು ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಅದು ಮುಂದುವರೆಯುತ್ತದಾ? ಮುಂದುವರೆದರೂ ಅದರಲ್ಲಿ ರಾಜೇಶ್ ಕೃಷ್ಣನ್ ಇರುತ್ತಾರಾ? ಎಂಬಂತಹ ಹಲವು ಪ್ರಶ್ನೆಗಳು ಕೇಳಿ ಬಂದಿದ್ದವು. ಈ ಪ್ರಶ್ನೆಗಳಿಗೆ ಕೊನೆಗೂ ಉತ್ತರ ಸಿಕ್ಕಿದೆ.
ಸರಿಗಮಪ ಚಾಂಪಿಯನ್ಶಿಪ್ ಕಾರ್ಯಕ್ರಮವು ರಾಜೇಶ್ ಕೃಷ್ಣನ್ ಇಲ್ಲದೆಯೇ ನಡೆಯಲಿದೆ. ಈಗಾಗಲೇ ಅದಕ್ಕೆ ಸಿದ್ಧತೆಗಳು ಪ್ರಾರಂಭವಾಗಿದ್ದು, ಸೆಪ್ಟೆಂಬರ್ 18 ರಿಂದ ಪ್ರಾರಂಭವಾಗಲಿದೆ. ಆ ನಂತರ ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ. ಈ ನಿಟ್ಟಿನಲ್ಲಿ ಈಗಾಗಲೇ ಈ ಕಾರ್ಯಕ್ರಮದ ಮೊದಲ ಪ್ರೋಮೋ ಸಹ ಹೊರ ಬಂದಿದೆ.