'ರೈಡರ್' ಇದು ನಟ ನಿಖಿಲ್ ಕುಮಾರಸ್ವಾಮಿ ಅಭಿನಯದ 4ನೇ ಸಿನಿಮಾ. ಈ ಸಿನಿಮಾದಲ್ಲಿ ಯುವನಟ ಬಾಸ್ಕೆಟ್ ಬಾಲ್ ಆಟಗಾರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ನಿನ್ನೆ (ಬುಧವಾರ) ಚಿತ್ರದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಕಲಾವಿದರ ಸಂಘಕ್ಕೆ ಮೊದಲ ಬಾರಿಗೆ ಅಂಬರೀಶ್ ಅವರೊಡನೆ ಬಂದಿದ್ದನ್ನು ನೆನಪಿಸಿಕೊಂಡರು.
'ಸೀತಾರಾಮ ಕಲ್ಯಾಣ ಚಿತ್ರದ ಚಿತ್ರೀಕರಣ ನಡೆಯಬೇಕಾದಾಗ ನಿರ್ದೇಶಕ ವಿಜಯ್ ಕುಮಾರ್ ಕೊಂಡ ರೈಡರ್ ಚಿತ್ರದ ಕಥೆ ಹೇಳಿದರು. ನಂತರ ಸುನೀಲ್ ಹಾಗು ಲಹರಿ ಸಂಸ್ಥೆ ಮೂಲಕ ಈ ಚಿತ್ರದ ನಿರ್ಮಾಣ ಆರಂಭವಾಯಿತು. ಅರ್ಜುನ್ ಜನ್ಯ ಅವರ ಸಂಗೀತದಲ್ಲಿ ಮೂಡಿ ಬಂದಿರುವ ಈ ಚಿತ್ರದ ಹಾಡುಗಳು ಹಿಟ್ ಆಗಿರುವುದು ಸಂತೋಷ ತಂದಿದೆ. ಡಿ.24ರಂದು ನಮ್ಮ ಚಿತ್ರ ತೆರೆಗೆ ಬರಲಿದೆ. ನಿಮ್ಮೆಲ್ಲರ ಬೆಂಬಲವಿರಲಿ' ಎಂದು ನಿಖಿಲ್ ಮನವಿ ಮಾಡಿದರು.
ಸಿನಿಮಾದಲ್ಲಿ ರಾಜೇಶ್ ನಟರಂಗ, ಗರುಡ ರಾಮ್, ಚಿಕ್ಕಣ್ಣ, ಶಿವರಾಜ್ ಕೆ.ಆರ್.ಪೇಟೆ, ಮಂಜು ಪಾವಗಡ, ಗಿರೀಶ್, ಅರ್ಜುನ್ ಗೌಡ, ಸಂತು, ಚಿಲ್ಲರ್ ಮಂಜು, ಬೇಬಿ ಪ್ರಾಣ್ಯ ಸೇರಿದಂತೆ ಸಾಕಷ್ಟು ಕಲಾವಿದರು ನಟಿಸಿದ್ದಾರೆ.