ಕರ್ನಾಟಕ

karnataka

ETV Bharat / sitara

ಸಾಹಿತಿ ಪ್ರೊ. ದೊಡ್ಡರಂಗೇಗೌಡ ನಿರ್ದೇಶನದ ಚಿತ್ರದಲ್ಲಿ ಇರುವ ಅಂಶಗಳೇನು..? - Doddarangegowda Direction Haruva hamsagalu

ಕನ್ನಡ ಚಿತ್ರರಂಗದಲ್ಲಿ ಗೀತ ಸಾಹಿತಿ ಆಗಿ ಹೆಸರು ಮಾಡಿರುವ ಪ್ರೊ. ದೊಡ್ಡರಂಗೇಗೌಡ ಈಗ ಸಿನಿಮಾವೊಂದನ್ನು ನಿರ್ದೇಶನ ಮಾಡುತ್ತಿದ್ದು ಚಿತ್ರಕ್ಕೆ 'ಹಾರುವ ಹಂಸಗಳು' ಎಂದು ಹೆಸರಿಟ್ಟಿದ್ದಾರೆ. ಮಕ್ಕಳ ಮೇಲೆ ಮೊಬೈಲ್​​ ಹೇಗೆ ದುಷ್ಪರಿಣಾಮ ಬೀರುತ್ತಿದೆ ಎಂಬ ವಿಚಾರವನ್ನು ದೊಡ್ಡರಂಗೇಗೌಡ ತಮ್ಮ ಚಿತ್ರದಲ್ಲಿ ಹೇಳಲು ಹೊರಟಿದ್ದಾರೆ.

Doddarangegowda Direction movie
ದೊಡ್ಡರಂಗೇಗೌಡ

By

Published : Jul 20, 2020, 10:03 AM IST

ಪದ್ಮಶ್ರೀ ಪುರಸ್ಕೃತ, ನಾಡು ಕಂಡ ಪ್ರತಿಭಾನ್ವಿತ ಸಾಹಿತಿ ಪ್ರೊ. ದೊಡ್ಡರಂಗೇಗೌಡ ಅವರು, ಹಲವಾರು ಪ್ರಶಸ್ತಿ, ಪುರಸ್ಕಾರಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಈಗ 74 ರ ವಯಸ್ಸಿನಲ್ಲಿ ನಿರ್ದೇಶನಕ್ಕೆ ಕೂಡಾ ಇಳಿದಿದ್ದಾರೆ.

ಪ್ರೊ. ದೊಡ್ಡರಂಗೇಗೌಡ ಅವರಂತೆ ಸಾರಸ್ವತ ಲೋಕದ ಮತ್ತೊಬ್ಬ ದಿಗ್ಗಜ ಡಾ. ಹೆಚ್​​​​.ಎಸ್. ವೆಂಕಟೇಶಮೂರ್ತಿ ಕೂಡಾ 2018 ರಲ್ಲಿ 'ಹಸಿರು ರಿಬ್ಬನ್' ಚಿತ್ರದ ಮೂಲಕ ತಮ್ಮ 75 ರ ವಯಸ್ಸಿನಲ್ಲಿ ನಿರ್ದೇಶನಕ್ಕೆ ಇಳಿದು 'ಅಮೃತವಾಹಿನಿ' ಚಿತ್ರದಲ್ಲಿ ಆ್ಯಕ್ಟಿಂಗ್ ಕೂಡಾ ಮಾಡಿದ್ದರು.

ಸಾಹಿತಿ ಪ್ರೊ. ದೊಡ್ಡರಂಗೇಗೌಡ

ಈಗ ಪ್ರೊ. ದೊಡ್ಡರಂಗೇಗೌಡ ಅವರು ಮೊಬೈಲ್​​​ನಿಂದ ಮಕ್ಕಳು ಹೇಗೆ ದಾರಿ ತಪ್ಪುತ್ತಿದ್ದಾರೆ ಎಂಬ ವಿಚಾರವನ್ನು ತೆರೆ ಮೇಲೆ ತರಲು ಹೊರಟಿದ್ದಾರೆ. ಬ್ಲೂವೇಲ್, ಪಬ್ಜಿ ಹಾಗೂ ಇನ್ನಿತರ ಮೊಬೈಲ್ ಆಟಗಳಿಂದ ಯುವ ಮನಸುಗಳು ದಾರಿ ತಪ್ಪುತ್ತಿರುವುದನ್ನು ಗಮನಿಸಿ ಚಿಣ್ಣರನ್ನು ತಿದ್ದುವ ಕೆಲಸಕ್ಕೆ ಕೈ ಹಾಕಿದ್ದಾರೆ. ಈ ಚಿತ್ರಕ್ಕೆ 'ಹಾರುವ ಹಂಸಗಳು' ಎಂದು ಹೆಸರಿಟ್ಟು ನಿರ್ದೇಶನಕ್ಕೆ ಇಳಿದಿದ್ದಾರೆ.

ಹಳ್ಳಿ ಹಾಗೂ ಪಟ್ಟಣ್ಣಗಳಲ್ಲಿ ಇರುವ ಮಕ್ಕಳನ್ನು ಕೇಂದ್ರೀಕೃತವಾಗಿ ಇಟ್ಟುಕೊಂಡು ಈ ಸಿನಿಮಾ ಮಾಡಲಾಗುತ್ತಿದೆ. ಮೊಬೈಲ್​​ನಿಂದ ಮಕ್ಕಳು ಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಯಾವುದೇ ಆವಿಷ್ಕಾರವಾಗಲೀ ಸಮಾಜಕ್ಕೆ ಅದರಿಂದ ಉಪಯೋಗವಾಗಬೇಕೇ ಹೊರತು ತೊಂದರೆ ನೀಡಬಾರದು. ನಮ್ಮ ಬಾಲ್ಯ ಈ ರೀತಿ ಇರಲಿಲ್ಲ ಎನ್ನುತ್ತಾರೆ ಪ್ರೊ. ದೊಡ್ಡರಂಗೇಗೌಡ.

'ಹಾರುವ ಹಂಸಗಳು'

ಪ್ರೊ. ದೊಡ್ಡರಂಗೇಗೌಡ, ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಗೀತ ಸಾಹಿತಿ ಆಗಿ ಹೆಸರು ಮಾಡಿದ್ದಾರೆ. ಕೆಲವೊಂದು ಸಿನಿಮಾಗಳಲ್ಲಿ ಅವರು ಆ್ಯಕ್ಟಿಂಗ್ ಕೂಡಾ ಮಾಡಿದ್ದಾರೆ. 'ಹಾರುವ ಹಂಸಗಳು' ದೊಡ್ಡರಂಗೇಗೌಡ ಅವರದ್ದೇ ಕಥೆ ಆಗಿದ್ದು ಲಾಕ್​​​​ಡೌನ್​ಗೂ ಮುನ್ನ ಮುಹೂರ್ತ ನಡೆದು ಮದ್ದೂರು ಬಳಿ 15 ದಿನಗಳ ಕಾಲ ಚಿತ್ರೀಕರಣ ಕೂಡಾ ನಡೆದಿತ್ತು. ಮುಹೂರ್ತ ಕಾರ್ಯಕ್ರಮದಲ್ಲಿ ನಿರ್ಮಾಪಕ ವಸು ಪ್ರಸಾದ್ ಹಾಗೂ ಇನ್ನಿತರರು ಭಾಗಿಯಾಗಿದ್ದರು.

'ಹಾರುವ ಹಂಸಗಳು' ಚಿತ್ರದಲ್ಲಿ ನಿರ್ಮಾಪಕ ವಸುಪ್ರಸಾದ್ ಅವರ ಪುತ್ರ ಮಾಸ್ಟರ್ ಓಜಸ್, ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲವೇ ದಿನಗಳಲ್ಲಿ ಸಿನಿಮಾ ಚಿತ್ರೀಕರಣ ಮತ್ತೆ ಆರಂಭವಾಗಲಿದ್ದು, ಚಿತ್ರ ಬಿಡುಗಡೆ ನಂತರ ರಾಜ್ಯದ ಸುಮಾರು 370 ಸರ್ಕಾರಿ ಶಾಲೆಗಳಲ್ಲಿ ಸಿನಿಮಾವನ್ನು ಉಚಿತ ಪ್ರದರ್ಶನ ಮಾಡುವುದಾಗಿ ಪ್ರೊ. ದೊಡ್ಡರಂಗೇಗೌಡ ಹೇಳಿದ್ದಾರೆ. ಜೊತೆಗೆ ಫಿಲ್ಮ್ ಫೆಸ್ಟಿವಲ್​ಗಳಿಗೆ ಕಳಿಸಿಕೊಡಲು ನಿರ್ಧರಿಸಿದ್ದಾರೆ.

ABOUT THE AUTHOR

...view details