ಕರ್ನಾಟಕ

karnataka

ETV Bharat / sitara

ದಾಖಲೆ ಬರೆದ ರಿಚರ್ಡ್​ ಅಟೆನ್​​​​ಬರೋ ನಿರ್ದೇಶನದ 'ಗಾಂಧಿ' ಸಿನಿಮಾ - ಲಾರ್ಡ್ ಮೌಂಟ್ ಬ್ಯಾಟನ್​​​​

ಇಂಗ್ಲಿಷ್ ನಟ, ನಿರ್ದೇಶಕ, ನಿರ್ಮಾಪಕ ರಿಚರ್ಡ್ ಅಟೆನ್​ಬರೋ ನಿರ್ದೇಶನದ 'ಗಾಂಧಿ' ಸಿನಿಮಾ ದಾಖಲೆ ಬರೆದಿದೆ. 1982 ರಲ್ಲಿ ಬಿಡುಗಡೆಯಾದ ಈ ಚಿತ್ರ ಗಾಂಧೀಜಿ ಕುರಿತು ತಯಾರಾದ ಮೊದಲ ಸಿನಿಮಾ. ಭಾರತೀಯ ಮೂಲದ ಇಂಗ್ಲಿಷ್ ನಟ ಬೆನ್​ ಕಿಂಗ್​​ಸ್ಲೇ ಗಾಂಧಿ ಪಾತ್ರದಲ್ಲಿ ಮನೋಜ್ಞವಾಗಿ ನಟಿಸಿದ್ದರು.

'ಗಾಂಧಿ' ಸಿನಿಮಾ

By

Published : Oct 2, 2019, 5:10 PM IST

ಇಂದು 150 ನೇ ಗಾಂಧಿ ಜಯಂತಿಯನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ. ಈ ಮಹಾತ್ಮನ ಕುರಿತಾಗಿ ಭಾರತೀಯ ಚಿತ್ರರಂಗದಲ್ಲಿ ಬಹಳಷ್ಟು ಸಿನಿಮಾಗಳು ತಯಾರಾಗಿವೆ. ಅದರಲ್ಲಿ ಇಂಗ್ಲಿಷ್​ ನಟ, ನಿರ್ದೇಶಕ, ನಿರ್ಮಾಪಕ ರಿಚರ್ಡ್ ಅಟೆನ್​ಬರೋ ನಿರ್ಮಿಸಿದ 'ಗಾಂಧಿ' ಸಿನಿಮಾ ಮೊದಲನೆಯದ್ದು.

ದಾಖಲೆ ಬರೆದ 'ಗಾಂಧಿ' ಸಿನಿಮಾ

'ಗಾಂಧಿ' ಸಿನಿಮಾವನ್ನು ತಯಾರಿಸಲು ರಿಚರ್ಡ್ ಸುಮಾರು 18 ವರ್ಷಗಳ ಕಾಲ ಶ್ರಮ ಪಟ್ಟರು. ಮೊದಲ ಬಾರಿ 1962 ರಲ್ಲಿ ಲಂಡನ್​​​​​​ನ ಭಾರತದ ರಾಯಭಾರ ಕಚೇರಿ ಅಧಿಕಾರಿ, ಗಾಂಧೀಜಿಯವರ ಕಟ್ಟಾ ಅಭಿಮಾನಿ ಮೋತಿಲಾಲ್ ಕೊಠಾರಿ ಅಟೆನ್​ಬರೋ ಅವರಿಗೆ ಗಾಂಧಿ ಕುರಿತ ಸಿನಿಮಾ ಮಾಡಲು ಕೋರಿದರು. ಅದಕ್ಕೂ ಮುನ್ನವೇ ಗಾಂಧೀಜಿ ಕುರಿತು ಸಿನಿಮಾ ಮಾಡಬೇಕು ಎಂದುಕೊಂಡರೂ ರಿಚರ್ಡ್ ಎರಡು ಬಾರಿ ವಿಫಲರಾಗಿದ್ದರು. ಲೂಯಿಸ್ ಫಿಶರ್ ಬರೆದ ‘ಬಯೋಗ್ರಫಿ ಆಫ್ ಮೋಹನ್‌ದಾಸ್ ಕರಮ್‌ಚಂದ್ ಗಾಂಧಿ’ ಪುಸ್ತಕವನ್ನು ಓದಿದ್ದ ರಿಚರ್ಡ್ ಮಾಹಿತಿ ಸಂಗ್ರಹಿಸಲು ಭಾರತಕ್ಕೆ ಬಂದರು. ಆಗಿನ ಪ್ರಧಾನಿ ಪಂಡಿತ್ ಜವಾಹರ್​​ಲಾಲ್ ನೆಹರು, ಪುತ್ರಿ ಇಂದಿರಾ ಗಾಂಧಿ ಹಾಗೂ ಲಾರ್ಡ್ ಮೌಂಟ್ ಬ್ಯಾಟನ್​​​​ ಅವರನ್ನು ಭೇಟಿ ಆಗಿ ವಿಷಯ ಸಂಗ್ರಹಿಸಿದರು.

'ಗಾಂಧಿ' ಸಿನಿಮಾದಲ್ಲಿ ಬೆನ್​​​ ಕಿಂಗ್​​ಸ್ಲೇ

ನೆಹರು ಅವರಿಂದ ಹಣಕಾಸಿನ ನೆರವಿನ ಭರವಸೆ ದೊರೆತರೂ 1968ರಲ್ಲಿ ನೆಹರು ನಿಧನರಾದರು. 8 ವರ್ಷಗಳ ನಂತರ ಮತ್ತೆ ಸಿನಿಮಾ ಕನಸು ಆರಂಭವಾದರೂ ಆ ವೇಳೆ ಇಂದಿರಾಗಾಂಧಿ ತುರ್ತುಪರಿಸ್ಥಿತಿ ಹೇರಿದರು. ಅಂತೂ ಕೊನೆಗೆ ಸಿನಿಮಾ ಆರಂಭವಾಗಿ 1982 ರಲ್ಲಿ ಬಿಡುಗಡೆಯಾಯಿತು. ನವೆಂಬರ್ 30 ರಂದು ಭಾರತದಲ್ಲಿ, ಡಿಸೆಂಬರ್​ 3 ರಂದು ಬ್ರಿಟನ್ ಹಾಗೂ ಡಿಸೆಂಬರ್​ 10 ರಂದು ಅಮೆರಿಕದಲ್ಲಿ ಬಿಡುಗಡೆಯಾಯಿತು. ಆರಂಭದಲ್ಲಿ ಅಮೆರಿದಲ್ಲಿ ಈ ಸಿನಿಮಾ ಅಷ್ಟೇನೂ ಜನಮನ್ನಣೆ ಗಳಿಸದಿದ್ದರೂ ಒಂದೇ ತಿಂಗಳಲ್ಲಿ ಸಿನಿಮಾ ಮನೆ ಮಾತಾಯಿತು. ಸಿನಿಮಾ ಆಸ್ಕರ್ ಪ್ರಶಸ್ತಿಯ ಸುಮಾರು 11 ವಿಭಾಗಗಳಲ್ಲಿ ಸ್ಪರ್ಧಿಸಿದ್ದರೂ ಅತ್ಯುತ್ತಮ ನಿರ್ದೇಶನ, ಚಲನಚಿತ್ರ , ಮೂಲ ಚಿತ್ರಕಥೆ, ಸಂಕಲನ, ಛಾಯಾಗ್ರಹಣ, ಕಲಾ ನಿರ್ದೇಶನ, ವಸ್ತ್ರವಿನ್ಯಾಸ ಹಾಗೂ ಕಿಂಗ್‌ಸ್ಲೇಗೆ ಅತ್ಯುತ್ತಮ ನಟ ಸೇರಿದಂತೆ 8 ಪ್ರಶಸ್ತಿಗಳನ್ನು ಬಾಚಿಕೊಂಡಿತು.

'ಗಾಂಧಿ' ಚಿತ್ರದ ದೃಶ್ಯ

ಈ ಚಿತ್ರದಲ್ಲಿ ಗಾಂಧಿ ಆಗಿ ಮೊದಲು ಡೇವಿನ್ ಲೀನ್ ಆಯ್ಕೆಯಾಗಿದ್ದರೂ ಡೇಟ್ಸ್ ಹೊಂದಾಣಿಕೆ ಆಗದೆ ಅವರು ಚಿತ್ರದಲ್ಲಿ ನಟಿಸಲಾಗಲಿಲ್ಲ. ಕೊನೆಗೆ ಬೆನ್​​​​​ ಕಿಂಗ್​ಸ್ಲೇ ಸಿನಿಮಾದಲ್ಲಿ ಗಾಂಧಿ ಪಾತ್ರ ಮಾಡಿದರು. ವಿದೇಶಿ ನಟನೊಬ್ಬ ಗಾಂಧಿ ಪಾತ್ರದಲ್ಲಿ ನಟಿಸಿದ್ದಕ್ಕೆ ಮೊದಲು ಭಾರತೀಯರು ಬೇಸರ ವ್ಯಕ್ತಪಡಿಸಿದರು. ಆದರೆ ಕಿಂಗ್ ಸ್ಲೇ ತಂದೆ ಗುಜರಾತ್ ಮೂಲದವರಾಗಿದ್ದು ಅವರು ಹೆಸರು ಕೃಷ್ಣಪಂಡಿತ್ ಭಂಜಿ ಎಂದು ತಿಳಿದಾಗ ಎಲ್ಲರೂ ಸಂತೋಷ ವ್ಯಕ್ತಪಡಿಸಿದರು. ಇನ್ನು ಈ ಚಿತ್ರದಲ್ಲಿ ಮಹಾತ್ಮ ಗಾಂಧಿ ಅಂತಿಮ ದರ್ಶನದ ದೃಶ್ಯದ ಚಿತ್ರೀಕರಣಕ್ಕಾಗಿ ರಿಚರ್ಡ್ ಅಟೆನ್​​ಬರೋ ಸುಮಾರು 3 ಲಕ್ಷ ಜನರನ್ನು ಸೇರಿಸಿದ್ದರು. ಇದುವರೆಗೂ ಯಾವ ಸಿನಿಮಾದಲ್ಲೂ ಇಷ್ಟು ಜನರನ್ನು ಚಿತ್ರೀಕರಣಕ್ಕೆ ಬಳಸಿಕೊಂಡಿಲ್ಲ. ಇದು ಇಂದಿಗೂ ದಾಖಲೆಯಾಗಿಯೇ ಉಳಿದಿದೆ.

'ಗಾಂಧಿ' ಚಿತ್ರದ ಅಂತಿಮ ಸಂಸ್ಕಾರದ ದೃಶ್ಯ

ABOUT THE AUTHOR

...view details