ಕರ್ನಾಟಕ

karnataka

ETV Bharat / sitara

ನಟವರ ಗಂಗಾಧರ ಖ್ಯಾತಿಯ ಎಸ್​​​​.ಕೆ. ಕರೀಂ ಖಾನ್​​​ ಪುಣ್ಯಸ್ಮರಣೆ

ಕನ್ನಡ ಚಿತ್ರರಂಗಕ್ಕೆ ಅನೇಕ ಗೀತೆಗಳನ್ನು ನೀಡಿದ ಡಾ.ಎಸ್.ಕೆ. ಕರೀಂ ಖಾನ್ ಅವರು ಇಂದು ನಮ್ಮನ್ನು ಅಗಲಿ 14 ವರ್ಷಗಳು ಕಳೆದಿವೆ. ಮುಸ್ಲಿಂ ಸಮುದಾಯಕ್ಕೆ ಸೇರಿದರೂ ಕರೀಂ ಖಾನ್ ಅವರು ಅನೇಕ ಭಕ್ತಿಗೀತೆಗಳನ್ನು ರಚಿಸಿದ್ದಾರೆ. ಈ ಹಾಡುಗಳು ಇಂದಿಗೂ ಬಹಳ ಫೇಮಸ್.

By

Published : Jul 29, 2020, 4:30 PM IST

Dr SK Karim Khan death anniversary
ಕರೀಂ ಖಾನ್​​​

ಜಾನಪದ ತಜ್ಞ, ಮಾಜಿ ಜಾನಪದ ಅಕಾಡೆಮಿ ಅಧ್ಯಕ್ಷ, ಸ್ವಾತಂತ್ರ್ಯ ಹೋರಾಟಗಾರ, ಅಪ್ಪಟ ಗಾಂಧಿವಾದಿ, ಪರಿಸರ ಪ್ರೇಮಿ, ಕನ್ನಡ ಸಿನಿಮಾ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಡಾ.ಎಸ್.ಕೆ. ಕರೀಂ ಖಾನ್ ಅವರು ಇಂದು ನಮ್ಮನ್ನು ಅಗಲಿದ ದಿನ.

ಹಿರಿಯ ಛಾಯಾಗ್ರಾಹಕ ಬಿ.ಎಸ್​​​​. ಬಸವರಾಜ್ ಅವರು ಕರೀಂ ಖಾನ್ ಅವರ ಕೆಲವೊಂದು ಆಸಕ್ತಿಕರ ವಿಚಾರಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.

ಎಸ್​​​​.ಕೆ. ಕರೀಂ ಖಾನ್​​​ ಪುಣ್ಯಸ್ಮರಣೆ

ಡಾ.ಎಸ್.ಕೆ. ಕರೀಂ ಖಾನ್ ಕನ್ನಡ ಚಿತ್ರರಂಗಕ್ಕೆ ಸುಮಾರು 250 ಕ್ಕೂ ಹೆಚ್ಚು ಗೀತೆಗಳನ್ನು ನೀಡಿದ್ದಾರೆ. ಅದರಲ್ಲಿ 'ಸ್ವರ್ಣಗೌರಿ' ಚಿತ್ರದ ಡಾ. ಎಂ. ಬಾಲಮುರಳಿಕೃಷ್ಣ ಹಾಡಿದ್ದ ನಟವರ ಗಂಗಾಧರ....ಉಮಾಶಂಕರ ಗೀತೆ 'ಬದುಕು ಬಂಗಾರವಾಯ್ತು' ಚಿತ್ರದ ಜಗದೀಶ ಸರ್ವೇಶ ಮಲ್ಲೇಶ ಗೌರೀಶ..ಸೇರಿದಂತೆ ಅನೇಕ ಹಾಡುಗಳು ಇಂದಿಗೂ ಬಹಳ ಫೇಮಸ್​. ಮುಸ್ಲಿಂ ಸಮುದಾಯಕ್ಕೆ ಸೇರಿದರೂ ಅನೇಕ ಮರೆಯದ ಗೀತೆಗಳನ್ನು ಅವರು ರಚಿಸಿದ್ದಾರೆ. ಅದರಲ್ಲಿ ಭಕ್ತಿಗೀತೆಗಳು ಹೆಚ್ಚಾಗಿವೆ. ಕರೀಂ ಖಾನ್ ಅವರ ಗೀತ ರಚನೆಗಳಲ್ಲಿ ಧರ್ಮಸ್ಥಳ ಶ್ರೀ ಮಂಜುನಾಥ, ಶ್ರೀ ರಾಘವೇಂದ್ರ ಸ್ವಾಮಿ, ಶ್ರೀ ವೆಂಕಟೇಶ್ವರ, ಗೊಮ್ಮಟೇಶ್ವರ, ಅಯ್ಯಪ್ಪ ಸ್ವಾಮಿ, ಮಹಾವೀರ ಜೈನ ಕುರಿತಾಗಿ ಬರೆದಿದ್ದಾರೆ.

ಎಸ್​​​​.ಕೆ. ಕರೀಂ ಖಾನ್​​​ ಪುಣ್ಯಸ್ಮರಣೆ

ಕರೀಂ ಖಾನ್ ಪೂರ್ವಿಕರು ಅಫ್ಘಾನಿಸ್ಥಾನದಿಂದ ಬಂದು ಕೊಡಗಿನಲ್ಲಿ ನೆಲೆಸಿದರು. ಹಾಸನದ ಸಕಲೇಶಪುರದಲ್ಲಿ 1908 ರಲ್ಲಿ ಜನ್ಮ ತಾಳಿದ ಕರೀಂ ಖಾನ್, ಉರ್ದು ಶಾಲೆಗೆ ಸೇರಿದರೂ ಕನ್ನಡವನ್ನು ಚೆನ್ನಾಗಿ ಕಲಿತರು. ನಾರಾಯಣ ಶಾಸ್ತ್ರಿ ಎಂಬುವರು ನೀಡಿದ ರಾಮಾಯಣ ಪುಸ್ತಕ, ಕರೀಂ ಖಾನ್ ಅವರ ಮೇಲೆ ಬಹಳ ಪ್ರಭಾವ ಬೀರಿತು. ಸಂತ ಶಿಶುನಾಳ ಶರೀಫರ ಗೀತೆಗಳು ಕೂಡಾ ಇವರ ಮನಸ್ಸಿನಲ್ಲಿ ಅಚ್ಚಾಗಿದ್ದವು. ನಂತರ ಅವರಿಗೆ ಸಂಗೀತದಲ್ಲಿ ಆಸಕ್ತಿ ಮೂಡುತ್ತದೆ. ಅಷ್ಟೇ ಅಲ್ಲ ಸಂಸ್ಕೃತ, ತಮಿಳು ಭಾಷೆಗಳನ್ನು ಕಲಿಯುತ್ತಾರೆ.

ಎಸ್​​​​.ಕೆ. ಕರೀಂ ಖಾನ್​​​ ಪುಣ್ಯಸ್ಮರಣೆ

ಉರ್ದು ಭಾಷೆಯ ಕಥೆಯೊಂದನ್ನು ಕರೀಂ ಖಾನ್ ಕನ್ನಡಕ್ಕೆ 'ಮಾನಸ ಪುತ್ರ' ಎಂಬ ಹೆಸರಿನಲ್ಲಿ ತರ್ಜುಮೆ ಮಾಡುತ್ತಾರೆ. ಮಾಲತಿ ಮಾಧವ ಎಂಬ ನಾಟಕವನ್ನು ಕೂಡಾ ಕರೀಂ ಖಾನ್​ ರಚಿಸಿದ್ದಾರೆ. ಪರ್ಷಿಯನ್ ಭಾಷೆಯಿಂದ 'ಲೈಲಾ ಮಜ್ನು' ಕಥೆಯನ್ನು ಕನ್ನಡಕ್ಕೆ ತರ್ಜುಮೆ ಮಾಡಲು ಕೂಡಾ ಕರೀಂ ಖಾನ್ ಆಸಕ್ತಿ ಹೊಂದಿದ್ದರು. ಕರೀಂ ಖಾನ್ ಅವರು ಶಾಲೆಗಿಂತ ಹೆಚ್ಚು ಕಲಿತದ್ದು ಹೊರಗಿನ ಪ್ರಪಂಚದಲ್ಲಿ. ಇವರ ಶಾಲಾ ದಿನಗಳಲ್ಲಿ ಸಾಮಾಜಿಕ, ರಾಜಕೀಯ ವಿಚಾರ ಕೂಡಾ ಇವರ ಗಮನ ಸೆಳೆಯುತ್ತದೆ. ಕಿರಿಯ ವಯಸ್ಸಿನಲ್ಲೇ ಸ್ವಾತಂತ್ಯ್ರ ಹೋರಾಟಕ್ಕೆ ಧುಮುಕುತ್ತಾರೆ. ಖಾದಿ ಬಟ್ಟೆಗಳನ್ನು ಕೂಡಾ ಧರಿಸಲು ಆರಂಭಿಸುತ್ತಾರೆ. 1932 ರಲ್ಲಿ ಬಾವುಟ ಹಿಡಿದು ಇವರು ಮಾಡಿದ ಹೋರಾಟದಿಂದ ಏಳು ಬಾರಿ ಜೈಲು ವಾಸ ಅನುಭವಿಸುತ್ತಾರೆ.

ಎಸ್​​​​.ಕೆ. ಕರೀಂ ಖಾನ್​​​ ಪುಣ್ಯಸ್ಮರಣೆ

ಮಹಾತ್ಮ ಗಾಂಧಿಯವರನ್ನು ಭೇಟಿ ಮಾಡಬೇಕು ಎಂಬುದು ಕರೀಂ ಖಾನ್ ಅವರ ದೊಡ್ಡ ಆಸೆಯಾಗಿತ್ತು. ಅದರಂತೆ ಮಹಾತ್ಮ ಗಾಂಧಿ ಬೆಂಗಳೂರಿನ ನಂದಿ ಬೆಟ್ಟಕ್ಕೆ ಬಂದಾಗ ಕರೀಂ ಖಾನ್ ಅವರ ಆಸೆ ನೆರವೇರುತ್ತದೆ. ಬರವಣಿಗೆ ಬಗ್ಗೆ ಆಸಕ್ತಿ ಇದ್ದ ಕರೀಂ ಖಾನ್ ಆರಂಭದಲ್ಲಿ ತಾವೇ ರಚಿಸಿದ ಗೀತೆಗಳನ್ನು ಕಿರುಪುಸ್ತಕಗಳ ಮೂಲಕ ಹೊರ ತರುತ್ತಿದ್ದರು. ಇದರ ಜೊತೆಗೆ ಜಾನಪದ ಗೀತೆಗಳ ಆಸಕ್ತಿ ಕೂಡಾ ಬೆಳೆಸಿಕೊಂಡರು. ಕರೀಂ ಖಾನ್ ಅವರ ಬರವಣಿಗೆ ಆಸಕ್ತಿ ಗಮನಿಸಿದ್ದು ಸುಬ್ಬಯ್ಯ ನಾಯ್ಡು, ಗುಬ್ಬಿ ವೀರಣ್ಣ ಅವರಂತ ಮಹನೀಯರು. 1962 ರಲ್ಲಿ ‘ಸ್ವರ್ಣ ಗೌರಿ’ ಚಿತ್ರದ ಮೂಲಕ ಕರೀಂ ಖಾನ್ ಚಿತ್ರರಂಗಕ್ಕೆ ಬರುತ್ತಾರೆ. ಆ ಚಿತ್ರಕ್ಕೆ ಕರೀಂ ಖಾನ್ ಕಥೆ, ಸಾಹಿತ್ಯವನ್ನು ಬರೆದರು. ಅಲ್ಲಿಂದ ಸುಮಾರು 10 ವರ್ಷಗಳ ಕಾಲ ಅನೇಕ ಸಿನಿಮಾಗಳಿಗೆ ಕಥೆ, ಚಿತ್ರಕಥೆ, ಸಂಭಾಷಣೆ, ಗೀತ ಸಾಹಿತ್ಯವನ್ನು ರಚಿಸುವ ಮೂಲಕ ಬಹಳ ಬ್ಯುಸಿಯಾಗುತ್ತಾರೆ. ಇವರು ತೊಡಗಿಸಿಕೊಂಡ ಕೊನೆಯ ಸಿನಿಮಾ 'ಕಾರಣಿಕ ಶಿಶು'.

ಎಸ್​​​​.ಕೆ. ಕರೀಂ ಖಾನ್​​​ ಪುಣ್ಯಸ್ಮರಣೆ

ಕರೀಂ ಖಾನ್ ಅವರು, ಬಹಳ ನೇರ ವ್ಯಕ್ತಿತ್ವ ಹಾಗೂ ಸ್ವಾಭಿಮಾನಿ. ಇವರು ಎಂದಿಗೂ ದುಡ್ಡಿಗೆ ಆಸೆ ಪಟ್ಟವರಲ್ಲ. ಜೀವನದಲ್ಲಿ ಒಂಟಿಯಾಗಿ ಇದ್ದ ಕರೀಂ ಖಾನ್ ಅವರು ಮಾಸ್ತಿ ವೆಂಕಟೇಶ್ ಅಯ್ಯಂಗಾರ್​​, ಬೀಚಿ, ಪಿ. ಲಂಕೇಶ್ ಅವರಂತ ಸ್ನೇಹಿತರು ಸಹಾಯಕ್ಕೆ ಹಣ ಕಳಿಸಿದಾಗ ಅದನ್ನು ಸ್ವೀಕರಿಸದೆ ನಮ್ರತೆಯಿಂದ ಹಿಂತಿರುಗಿಸಿದರು. ಇದು ಅವರ ಸರಳ ವ್ಯಕ್ತಿತ್ವವನ್ನು ಸೂಚಿಸುತ್ತದೆ. ಕರೀಂ ಖಾನ್ ಅವರ ಒಂದು ಪುಸ್ತಕಕ್ಕೆ ಜಾನಪದ ಪ್ರಕಾಶನ 50 ಪೈಸೆ ನೀಡುತ್ತಿತ್ತು. 1930 ರಲ್ಲಿ 'ಲೋಕಮಿತ್ರ' ಹಾಗೂ 'ಅಂತರಂಗ' ಪತ್ರಿಕೆಗಳಲ್ಲಿ ಸಂಪಾದಕರಾಗಿ ಕೆಲಸ ಮಾಡಿದ್ದಾರೆ. ಇವರ ರಚನೆಯ 'ನಿರ್ದೋಷಿ' ಹಾಗೂ 'ಮಧುಮೋಹನ' ಸುಮಾರು 10 ಸಾವಿರ ಬಾರಿ ನಾಟಕ ಆಗಿ ಪ್ರದರ್ಶನವಾಗಿದೆ. ಡಾ. ರಾಜ್​​​​​​​​ಕುಮಾರ್ ಚಿತ್ರರಂಗಕ್ಕೆ ಬರುವ ಮುನ್ನವೇ ಕರೀಂ ಖಾನ್ ರಚನೆಯ 'ಮಧುಮೋಹನ' ನಾಟಕದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಕರ್ನಾಟಕ ಏಕೀಕರಣ ಸಮಯದಲ್ಲಿ ಬಳ್ಳಾರಿ, ಬೀದರ್, ಕೊಳ್ಳೇಗಾಲ ಕರ್ನಾಟಕಕ್ಕೆ ಸೇರಬೇಕು ಎಂದು ಪ್ರತಿಪಾದಿಸಿದವರು ಕರೀಂ ಖಾನ್.

ಎಸ್​​​​.ಕೆ. ಕರೀಂ ಖಾನ್​​​ ಪುಣ್ಯಸ್ಮರಣೆ

ಸರ್ವಧರ್ಮ ಸಮ್ಮೇಳನದಲ್ಲಿ ಕರೀಂ ಖಾನ್ ಅವರ ಭಾಷಣ ಬಹಳ ಮೆಚ್ಚುಗೆ ಕೂಡಾ ಪಡೆದಿತ್ತು. ತಮಗೆ ಬಂದ ಎಂಎಲ್​​ಸಿ ಪದವಿಯನ್ನು ಕರೀಂ ಖಾನ್ ಎರಡು ಬಾರಿ ನಿರಾಕರಿಸಿ ಜಾನಪದ ಲೋಕಕ್ಕೆ ತಮ್ಮನ್ನು ಅರ್ಪಣೆ ಮಾಡಿಕೊಂಡ ಧೀಮಂತ ವ್ಯಕ್ತಿ ಅವರು. 1989 ರಲ್ಲಿ ಗುಲ್ಬರ್ಗಾ ಯೂನಿವರ್ಸಿಟಿ ಕರೀಂ ಖಾನ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಜಾನಪದ ಲೋಕಕ್ಕೆ ಇವರ ಸೇವೆಯನ್ನು ಗುರುತಿಸಿ ಅನೇಕ ಸಂಸ್ಥೆಗಳು ಇವರಿಗೆ ಜಾನಪದ ಭೀಷ್ಮ, ಜಾನಪದ ಗಾರುಡಿಗ, ಜಾನಪದ ಜಂಗಮ, ಜಾನಪದ ಕಸ್ತೂರಿ ಎಂದು ಬಿರುದು ನೀಡಿವೆ. ಕಿರುತೆರೆಯಲ್ಲಿ 'ಒಂದು ಸುಳ್ಳು' ಹಾಗೂ 'ಕಲಿಕರ್ಣ' ಎಂಬ ಧಾರಾವಾಹಿಗಳಿಗೆ ಕೂಡಾ ಕರೀಂ ಖಾನ್​​ ಸಾಹಿತ್ಯ ಬರೆದಿದ್ದಾರೆ. ಕನ್ನಡ ಚಿತ್ರರಂಗ ಕರೀಂ ಖಾನ್ ಅವರಿಗೆ 2004 ರಲ್ಲಿ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿತು.

ಎಸ್​​​​.ಕೆ. ಕರೀಂ ಖಾನ್​​​ ಪುಣ್ಯಸ್ಮರಣೆ

'ಜವರಾಯ ಬಂದರೂ ಬರಿ ಕೈಯಲ್ಲಿ ಬರಲಿಲ್ಲ' ಎಂಬ ಕರೀಂ ಖಾನ್ ಅವರ ಗೀತೆ ಕೂಡಾ ಬಹಳ ಪ್ರಸಿದ್ಧಿ ಪಡೆದಿತ್ತು. ಅಂತೆಯೇ ಜವರಾಯನ ಕರೆಗೆ ಓಗೊಟ್ಟು ಅವರು ಜುಲೈ 29, 2006 ರಂದು ಎಲ್ಲರನ್ನು ಅಗಲಿದರು. ಕರೀಂ ಖಾನ್ ಅವರ ಮೇಲಿನ ಗೌರವಕ್ಕೆ ಬೆಂಗಳೂರಿನ ರಸ್ತೆಗೆ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ.

ABOUT THE AUTHOR

...view details