2018ರಲ್ಲಿ ಕನ್ನಡ ಚಿತ್ರರಂಗದಲ್ಲಿ ಸತೀಶ್ ನೀನಾಸಂ ಮತ್ತು ರಚಿತಾ ರಾಮ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ ಅಯೋಗ್ಯ ಸಿನಿಮಾ ಸೂಪರ್ ಹಿಟ್ ಆಗಿತ್ತು. ಚಿತ್ರದ ಏನಮ್ಮಿ ಏನಮ್ಮಿ ಹಾಡು ಸಾಕಷ್ಟು ಖ್ಯಾತಿ ಪಡೆದಿತ್ತು. ಇದೀಗ ಹಾಡು 100 ಮಿಲಿಯನ್ ವೀಕ್ಷಣೆಯಾಗುವ ಮೂಲಕ, ಹೊಸ ದಾಖಲೆ ಬರೆದಿದೆ.
'ಅಯೋಗ್ಯ' ಸಿನಿಮಾ ಹಾಡಿಗೆ 100 ಮಿಲಿಯನ್ ಸಂಭ್ರಮ ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ನಲ್ಲಿ ಏನಮ್ಮಿ ಏನಮ್ಮಿ ಹಾಡನ್ನು ಬರೋಬ್ಬರಿ 10 ಕೋಟಿ ಜನ ವೀಕ್ಷಿಸಿ ಮೆಚ್ಚಿಕೊಂಡಿದ್ದಾರೆ. ಇದೇ ಸಂಭ್ರಮದಲ್ಲಿ ಆನಂದ್ ಆಡಿಯೋ ಸಂಸ್ಥೆ ಮಾಲೀಕ ಶ್ಯಾಮ್ ಮತ್ತು ಆನಂದ್ ಅಯೋಗ್ಯ ಚಿತ್ರತಂಡಕ್ಕೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು. ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ರೋರಿಂಗ್ ಸ್ಟಾರ್ ಶ್ರೀಮುರಳಿ ಆಗಮಿಸಿ, ಈ ಏನಮ್ಮಿ ಏನಮ್ಮಿ ಹಾಡಿನ ಯಶಸ್ಸಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಚಿತ್ರತಂಡಕ್ಕೆ ಸನ್ಮಾನ ಮಾಡಿದರು.
ಈ ಹಾಡಿಗೆ ಬಹುದ್ದೂರ್ ಖ್ಯಾತಿಯ ಚೇತನ್ ಕುಮಾರ್ ಸಾಹಿತ್ಯ ರಚಿಸಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದರು. ಗಾಯಕ ವಿಜಯ ಪ್ರಕಾಶ್ ಹಾಡಿದ್ದರು. ಈ ಹಾಡಿನ ಸಕ್ಸಸ್ ಬಗ್ಗೆ ಅರ್ಜುನ್ ಜನ್ಯ, ಚೇತನ್ ಕುಮಾರ್, ಗಾಯಕ ವಿಜಯ ಪ್ರಕಾಶ್ ಈ ಹಾಡಿನ ಜರ್ನಿ ಬಗ್ಗೆ ಮಾಹಿತಿ ಹಂಚಿಕೊಂಡರು.
ಈ ವೇಳೆ ಚಿತ್ರದ ನಾಯಕ ನಟ ಸತೀಶ್ ನೀನಾಸಂ ಮಾತನಾಡಿ, ಈ ಸಿನಿಮಾ ಮಾಡಬೇಕಾದ್ರೆ ಸಾಕಷ್ಟು ತೊಂದರೆಗಳು ಆಗಿದ್ದವು. ನಿರ್ದೇಶಕ ಎಸ್. ಮಹೇಶ್ ಕುಮಾರ್ ಸಾಕಷ್ಟು ಸವಾಲುಗಳನ್ನು ಎದುರಿಸಿ ಚಿತ್ರ ಮಾಡಿದರು ಎಂದರು.
ಬಳಿಕ ಆನಂದ್ ಆಡಿಯೋ ಸಂಸ್ಥೆ ಮಾಲೀಕ ಶ್ಯಾಮ್ ಮಾತನಾಡಿ, ನಮ್ಮ ಆನಂದ್ ಆಡಿಯೋ ಸಂಸ್ಥೆಯಲ್ಲಿ ನೂರು ಮಿಲಿಯನ್ ಜನ ನೋಡಿರುವ ನಾಲ್ಕನೇ ಹಾಡು ಇದಾಗಿದೆ. ಕೊರೊನಾದಿಂದ ನಿಧಾನವಾಗಿ ಕನ್ನಡ ಚಿತ್ರರಂಗದಲ್ಲಿ ಸಕ್ಸಸ್ ಆದ ಸಿನಿಮಾಗಳ ಕಾರ್ಯಕ್ರಮ ನಡೆಯೋದು ಸಾಮಾನ್ಯ. ಆದರೆ ಒಂದು ಸಿನಿಮಾದ ಹಾಡು ಸೂಪರ್ ಹಿಟ್ ಆದಾಗ ಮಾಡುತ್ತಿರುವ ಮೊದಲ ಕಾರ್ಯಕ್ರಮ ಇದಾಗಿರೋದು ಚಿತ್ರತಂಡಕ್ಕೆ ಹೆಮ್ಮೆ ಇದೆ ಎಂದು ಹೇಳಿದರು.
ಸಮಾರಂಭದಲ್ಲಿ ನಟ ಸತೀಶ್ ನೀನಾಸಂ, ನಟಿ ರಚಿತಾ ರಾಮ್, ನಿರ್ದೇಶಕ ಎಸ್ ಮಹೇಶ್ ಕುಮಾರ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಸಾಹಿತ್ಯ ರಚನೆಗಾರ ಚೇತನ್ ಕುಮಾರ್, ಗಾಯಕ ವಿಜಯ್ ಪ್ರಕಾಶ್ ಹಾಗೂ ನೃತ್ಯ ಸಂಯೋಜಕ ಮೋಹನ್, ಸಂಭಾಷಣೆಕಾರ ಮಾಸ್ತಿ ಮಂಜು ಹಾಗೂ ಪತ್ರಿಕಾ ಸಂಪರ್ಕಕರಾಗಿ ಕೆಲಸ ಮಾಡಿದ್ದ ವೆಂಕಟೇಶ್ ಸೇರಿದಂತೆ ಚಿತ್ರತಂಡಕ್ಕೆ ನೆನಪಿನ ಕಾಣಿಕೆ ನೀಡಲಾಯಿತು.
ಇದನ್ನೂ ಓದಿ: ಮುಂದೆ ತಪ್ಪು ಮಾಡೋಲ್ಲ ಅಂದಿದ್ದ ರಚಿತಾ ರಾಮ್: ಲಿಪ್ಲಾಕ್ ಸೀನ್ ನೋಡಿ ದಂಗಾದ ಫ್ಯಾನ್ಸ್