ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅರಮನೆ ಗಿಳಿ ಧಾರಾವಾಹಿಯಲ್ಲಿ ನಾಯಕ ಅರ್ಜುನ್ ಆಗಿ ಅಭಿನಯಿಸುತ್ತಿದ್ದ, ಅರ್ಜುನ್ ಯೋಗೇಶ್ ಇದೀಗ ಕಿರುತೆರೆಯ ನಂತರ ಬೆಳ್ಳಿತೆರೆಯಲ್ಲಿ ಕಮಾಲ್ ಮಾಡಲು ತಯಾರಾಗಿದ್ದಾರೆ. ಶ್ರೀರಾಜ್ ನಿರ್ದೇಶನದ ಲಾಂಗ್ ಡ್ರೈವ್ ಸಿನಿಮಾದಲ್ಲಿ ನಾಯಕರಾಗಿ ಅರ್ಜುನ್ ಯೋಗೇಶ್ ನಟಿಸಲಿದ್ದಾರೆ. ಅಂದ ಹಾಗೇ ಈ ಸಿನಿಮಾದಲ್ಲಿ ನಾಯಕಿಯರಾಗಿ ನಟಿಸುತ್ತಿರುವುದು ಕೂಡಾ ಕಿರುತೆರೆ ಕಲಾವಿದರುಗಳು ಎಂಬುದು ವಿಶೇಷ. ಹೌದು, ಸುಪ್ರೀತಾ ಸತ್ಯನಾರಾಯಣ ಹಾಗೂ ತೇಜಸ್ವಿನಿ ಅವರು ಈ ಸಿನಿಮಾದಲ್ಲಿ ನಾಯಕಿಯರಾಗಿ ಅಭಿನಯಿಸಲಿದ್ದಾರೆ.
ಕಾಲೇಜು ದಿನಗಳಿಂದಲೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮುಂದಿದ್ದ ಯೋಗೇಶ್ ಜೂನಿಯರ್ ಕಲಾವಿದನಾಗಿ ನಟನಾ ಕ್ಷೇತ್ರಕ್ಕೆ ಕಾಲಿಟ್ಟರು. ಬಿಇ ಓದುತ್ತಿರುವಾಗಲೇ ಕಾಲೇಜಿನ ಹಲವು ನಾಟಕಗಳಲ್ಲಿ ಮೈಮ್ ಶೋಗಳಲ್ಲಿ ವೇದಿಕೆ ಮೇಲೆ ಕಾಣಿಸಿಕೊಂಡ ಅರ್ಜುನ್ ಯೋಗೇಶ್ ಹಿರಿಯ ಕಲಾವಿದೆ ಕಲ್ಯಾಣಿ ಪ್ರದೀಪರ ತಂಡದಲ್ಲಿ ಮೂರು ನಾಟಕಗಳಲ್ಲಿ ನಟಿಸಿದರು. ಪುನೀತ್ ರಾಜ್ ಕುಮಾರ್ ಅಭಿನಯದ ಅಣ್ಣಾಬಾಂಡ್ ಚಿತ್ರದಲ್ಲಿ ಚಿಕ್ಕ ಪಾತ್ರದಲ್ಲಿ ನಟಿಸುವ ಮೂಲಕ ಸಿನಿರಂಗಕ್ಕೆ ಕಾಲಿಟ್ಟರು.