'ಯುಟರ್ನ್' ಚಿತ್ರದಿಂದ ಕನ್ನಡದಲ್ಲಿ ಸಿನಿಜರ್ನಿ ಆರಂಭಿಸಿದ ಶ್ರದ್ಧಾ ಶ್ರೀನಾಥ್ ಕನ್ನಡದಿಂದ ಟಾಲಿವುಡ್, ಕಾಲಿವುಡ್ ನಂತರ ಬಾಲಿವುಡ್ ಚಿತ್ರಗಳಲ್ಲಿ ಕೂಡಾ ನಟಿಸಿ ಅಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ತೆಲುಗಿನಲ್ಲಿ ಅವರು ನಾಣಿಯೊಂದಿಗೆ ಅಭಿನಯಿಸಿದ್ದ 'ಜೆರ್ಸಿ' ಸಿನಿಮಾಗೆ ತೆಲುಗು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಶ್ರದ್ಧಾ ಶ್ರೀನಾಥ್ ಅಭಿನಯದ 'ಜೆರ್ಸಿ' ಹಿಂದಿಗೆ ರಿಮೇಕ್... ನಾಯಕ, ನಾಯಕಿ ಯಾರು?
ಗೌತಮ್ ತಿನ್ನನೂರಿ ನಿರ್ದೇಶಿಸಿದ್ದ 'ಜೆರ್ಸಿ' ಚಿತ್ರ ತೆಲುಗಿಗೆ ರಿಮೇಕ್ ಆಗುತ್ತಿದ್ದು, ಚಿತ್ರದಲ್ಲಿ ಶಾಹಿದ್ ಕಪೂರ್ ನಾಯಕನಾಗಿ ನಟಿಸುತ್ತಿದ್ದಾರೆ. ಶಾಹಿದ್ಗೆ ಜೋಡಿಯಾಗಿ ಮೃಣಾಲ್ ಠಾಕೂರ್ ನಟಿಸಲಿದ್ದು, ನಾಳೆಯಿಂದ ಚಿತ್ರದ ಶೂಟಿಂಗ್ ಆರಂಭವಾಗಲಿದೆ.
ಗೌತಮ್ ತಿನ್ನನೂರಿ ನಿರ್ದೇಶಿಸಿದ್ದ 'ಜೆರ್ಸಿ' ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಸಂಗೀತ ನಿರ್ದೇಶಿಸಿದ್ದರು. ಇದೀಗ ಈ ಸಿನಿಮಾವನ್ನು ಹಿಂದಿಗೆ ರೀಮೇಕ್ ಮಾಡಲಾಗುತ್ತಿದೆ. ಶಾಹಿದ್ ಕಪೂರ್ ಹಿಂದಿ ರೀಮೇಕ್ನಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಶಾಹಿದ್ಗೆ ಜೋಡಿಯಾಗಿ ಮೃಣಾಲ್ ಠಾಕೂರ್ ನಟಿಸಲಿದ್ದಾರೆ. ವಿಶೇಷ ಎಂದರೆ ತೆಲುಗು ಚಿತ್ರವನ್ನು ನಿರ್ದೇಶಿಸಿದ್ದ ಗೌತಮ್ ತಿನ್ನನೂರಿ ಅವರೇ ಹಿಂದಿಯಲ್ಲೂ ನಿರ್ದೇಶಿಸುತ್ತಿದ್ದಾರೆ. ಅಲ್ಲದೆ ದಿಲ್ರಾಜು ಹಾಗೂ ಅಲ್ಲು ಅರವಿಂದ್ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಕ್ರಿಕೆಟ್ ಹಾಗೂ ಕೌಟುಂಬಿಕ ಕಥಾ ಹಂದರ ಹೊಂದಿರುವ ಸಿನಿಮಾಗಾಗಿ ಈಗಾಗಲೇ ಶಾಹಿದ್ ತಯಾರಿ ನಡೆಸಿದ್ದಾರೆ. ಪಾತ್ರಕ್ಕಾಗಿ ಹೆಚ್ಚಿನ ಕ್ರಿಕೆಟ್ ಅಭ್ಯಾಸ ಕೂಡಾ ಮಾಡುತ್ತಿದ್ದಾರಂತೆ ಶಾಹಿದ್.
ಇನ್ನು ಹಿಂದಿಯಲ್ಲಿ ಕೂಡಾ ಈ ಚಿತ್ರಕ್ಕೆ 'ಜೆರ್ಸಿ' ಎಂದು ಹೆಸರಿಟ್ಟಿದ್ದು, ನಾಳೆಯಿಂದ ಈ ಚಿತ್ರದ ಶೂಟಿಂಗ್ ಆರಂಭವಾಗಲಿದೆ. ಈ ಬಗ್ಗೆ ತಮ್ಮ ಟ್ವಿಟ್ಟರ್ನಲ್ಲಿ ಬರೆದುಕೊಂಡಿರುವ ಶಾಹಿದ್ ಕಪೂರ್, 'ಈ ಪಾತ್ರ ನಿಜಕ್ಕೂ ಚಾಲೆಂಜಿಂಗ್ ಆಗಿದೆ. ನಾಳೆಯಿಂದ ಶೂಟಿಂಗ್ ಆರಂಭವಾಗುತ್ತಿದೆ. ಆದರೆ ಭಯವಾಗುತ್ತಿದೆ, ಕಣ್ಣಿಗೆ ನಿದ್ರೆ ಹತ್ತುತ್ತಿಲ್ಲ, ಕಳೆದ ವಾರದಿಂದ ಅನಾರೋಗ್ಯ ಸಮಸ್ಯೆ ಕಾಡಿತ್ತು, ಶೀಘ್ರ ಗುಣಮುಖವಾಗಲೆಂದು ಹಾರೈಸಿದ ನಿಮ್ಮ ಪ್ರೀತಿಗೆ ಧನ್ಯವಾದಗಳು ' ಎಂದು ಶಾಹಿದ್ ಬರೆದುಕೊಂಡಿದ್ದಾರೆ. ಶಾಹಿದ್ ಅಭಿನಯದ 'ಅರ್ಜುನ್ ರೆಡ್ಡಿ ' ರಿಮೇಕ್ ಕೂಡ ಬಾಲಿವುಡ್ನಲ್ಲಿ ಹೆಸರು ಮಾಡಿತ್ತು. ಇದೀಗ 'ಜೆರ್ಸಿ ' ಹಿಂದಿ ಪ್ರೇಕ್ಷಕರನ್ನು ಯಾವ ರೀತಿ ಮೋಡಿ ಮಾಡಲಿದೆ ಕಾದು ನೋಡಬೇಕು.